ನವದೆಹಲಿ: ಉಗ್ರ ಪೋಷಣೆ, ಉಗ್ರರ ದಾಳಿಗೆ ಸಹಕಾರ ನೀಡುವ ಮೂಲಕ ಭಾರತದ ಜತೆ ವ್ಯಾಪಾರ, ಸಹಕಾರ, ದ್ವಿಪಕ್ಷೀಯ ನೆರವಿನಿಂದ ವಂಚಿತವಾಗಿರುವ ಪಾಕಿಸ್ತಾನವು (Pakistan) ಭಾರತ ಜತೆಗೆ ಮಾತುಕತೆ ನಡೆಸಲು ಜಾಗತಿಕ ಮಟ್ಟದಲ್ಲಿ ಲಾಬಿ ನಡೆಸುತ್ತಿದೆ. ನಾವು ಮಾತುಕತೆಗೆ ಸಿದ್ಧ ಎಂದು ಜಾಗತಿಕ ವೇದಿಕೆಗಳಲ್ಲಿಯೂ ಹೇಳಿಕೊಳ್ಳುತ್ತಿದೆ. ಆದರೆ, ಭಾರತದ ವಿರುದ್ಧ ಕುತಂತ್ರ ಮಾಡುವ ಬುದ್ಧಿಯನ್ನು ಮಾತ್ರ ಪಾಕಿಸ್ತಾನ ಬಿಟ್ಟಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಭಾರತದ ವಿರುದ್ಧ ಷಡ್ಯಂತ್ರದ ಭಾಗವಾಗಿಯೇ ಪಾಕಿಸ್ತಾನ ಇಂತಹ ಕೃತ್ಯ (Nijjar Killing) ಎಸಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳೇ ತಿಳಿಸಿವೆ.
“ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಕೈವಾಡವಿದೆ. ಕೆನಡಾದಲ್ಲಿ ರಾಹತ್ ರಾವ್ ಹಾಗೂ ತಾರಿಕ್ ಕಿಯಾನಿ ಎಂಬುವರು ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಅಪರಾಧ ಎಸಗಿ ಕೆನಡಾಗೆ ತೆರಳುವವರಿಗೂ ಇವರು ನೆರವು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಇವರೇ ಪ್ಲಾನ್ ರೂಪಿಸಿದ್ದಾರೆ. ಭಾರತದ ವಿರುದ್ಧ ಕೆನಡಾದಲ್ಲಿ ಪಾಕಿಸ್ತಾನ ಕುತಂತ್ರ ಮಾಡುತ್ತಿದೆ” ಎಂದು ತಿಳಿದುಬಂದಿದೆ.
ನಿಜ್ಜರ್ ನಿವಾಸದ ಬಳಿಯೇ ಠಿಕಾಣಿ
“ಹರ್ದೀಪ್ ಸಿಂಗ್ ನಿಜ್ಜರ್ ತುಂಬ ಎಚ್ಚರದಿಂದ ಇರುತ್ತಿದ್ದ. ಆತನಿಗೆ ಹೆಚ್ಚಿನ ಪ್ರಮಾಣದಲ್ಲಿ ಭದ್ರತೆ ಇರುತ್ತಿತ್ತು. ಆತನ ವಸತಿ, ಪ್ರಯಾಣ ಸೇರಿ ಹಲವು ವಿಷಯಗಳಲ್ಲಿ ಭಾರಿ ಗೌಪ್ಯತೆ ಇರುತ್ತಿತ್ತು. ಹಾಗಾಗಿ, ಸಾಮಾನ್ಯರಿಗೆ ಆತನ ಬಗ್ಗೆ ಯಾವುದೇ ಸುಳಿವು ಇರುತ್ತಿರಲಿಲ್ಲ. ಆದರೆ, ಹರ್ದೀಪ್ ಸಿಂಗ್ ನಿಜ್ಜರ್ ಚಲನವಲನ ಸೇರಿ ಹಲವು ಮಾಹಿತಿ ರಾಹತ್ ರಾವ್ ಹಾಗೂ ತಾರಿಕ್ ಕಿಯಾನಿಗೆ ಇತ್ತು. ನಿಜ್ಜರ್ ಮನೆಯ ಬಳಿಯೇ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳು ವಾಸವಿದ್ದರು. ಇವರೇ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಜೂನ್ 18ರಂದು ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.