Site icon Vistara News

Kashmir Drugs : ಕಾಶ್ಮೀರ ಮಾದಕದ್ರವ್ಯ ಹಾವಳಿಗೆ ಗಡಿಯಾಚೆಯ ನಂಟು

Kashmir Drugs

ಶ್ರೀನಗರ: ಕಾಶ್ಮೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಿತಿಮೀರಿ ಹೆಚ್ಚುತ್ತಿರುವ ಮಾದಕ ವಸ್ತು ಹಾವಳಿಗೆ ಗಡಿಯಾಚೆಯ ನಂಟಿರುವುದು ಅನುಮಾನಕ್ಕೆ ಎಡೆಯಿಲ್ಲದಂತೆ ದೃಢಪಟ್ಟಿದೆ. ಕೆಲವು ವಾರಗಳ ಹಿಂದೆ ಕಾಶ್ಮೀರದ ಬಡ್‌ಗಾಂ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದು, ಅವರಿಂದ ಗ್ರೆನೇಡ್‌ಗಳು, ಎಕೆ-47 ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲ, ಲಷ್ಕರೆ ತಯ್ಬಾ ಸಂಘಟನೆಯ ಸಮವಸ್ತ್ರಗಳು ದೊರೆತಿರುವುದು ಬಹಳಷ್ಟು ಸುಳಿವುಗಳನ್ನು ಪೊಲೀಸರಿಗೆ ಒದಗಿಸಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮಾದಕವಸ್ತುಗಳ ಮಾರಾಟದಿಂದ ಬರುವ ಹಣವನ್ನು ಈ ಉಗ್ರಗಾಮಿ ಸಂಘಟನೆಗೆ ಒದಗಿಸುತ್ತಿದ್ದ ಬಂಧಿತರು, ಈ ಮೂಲಕ ಭಯೋತ್ಪಾದನೆಗೆ ಅಗತ್ಯ ಆರ್ಥಿಕ ನೆರವನ್ನು ಒದಗಿಸುತ್ತಿದ್ದರು. ಈ ನಿಟ್ಟಿನಲ್ಲಿ ಉಗ್ರಗಾಮಿ ಸಂಘಟನೆಗಳ ಸೂಚನೆಯ ಅನ್ವಯ ಮಾದಕವಸ್ತು ವಿತರಣಾ ಜಾಲಗಳು ರಾಜ್ಯದಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಕಳೆದ ವರ್ಷ ಮಾದಕವಸ್ತು ವಿತರಣೆಯ ಆರೋಪದ ಮೇಲೆ 10 ಮಂದಿಯನ್ನು ಭದ್ರತಾ ಅಧಿಕಾರಿಗಳು ಕಾಶ್ಮೀರದ ಉರಿಯಲ್ಲಿ ಬಂಧಿಸಿದ್ದರು. ಅವರಿಂದ ಪಿಸ್ತೂಲು, ಚೀನಾ ನಿರ್ಮಿತ ಗ್ರನೇಡ್‌ಗಳು, 3 ಲಕ್ಷ ರೂ. ಹಣ ಮತ್ತು 4.75 ಕೆಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದರು.

ʻಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ತಮಗೆ ಗಡಿಯಾಚೆಯಿಂದ ಗ್ರನೇಡ್‌, ಪಿಸ್ತೂಲ್‌ನಂಥ ಶಸ್ತ್ರಾಸ್ತ್ರಗಳು ಮತ್ತು 11 ಪ್ಯಾಕೆಟ್‌ ಹೆರಾಯಿನ್‌ ನೀಡಲಾಗಿತ್ತು ಎಂದು ಹೇಳಿದರು. ಉರಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಕೆಲವು ಶಸ್ತ್ರಗಳನ್ನು ನೀಡಿ, ತಮ್ಮಲ್ಲಿದ್ದ ಹಣದ ಒಂದು ಭಾಗವನ್ನು ಅಲ್ಲಿ ಪಡೆದುಕೊಂಡಿದ್ದರು. ಇನ್ನೆರಡು ಲಕ್ಷ ರೂ.ಗಳನ್ನು ಎರಡು ಪ್ಯಾಕೆಟ್‌ ಹೆರಾಯಿನ್‌ನ್ನು ಇನ್ನೊಬ್ಬನಿಗೆ ನೀಡಿ ಪಡೆದುಕೊಂಡಿದ್ದರು. ಬಂಧಿತರಲ್ಲಿ ಒಬ್ಬನಿಗೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಮುಷ್ತಾಕ್‌ ಅಹಮದ್‌ ಎಂಬಾತನ ನಂಟಿದ್ದು, ಅಲ್ಲಿಂದಲೇ ಇವೆಲ್ಲವೂ ಸರಬರಾಜಾಗುತ್ತಿತ್ತುʼ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಗ್ರರಿಗೆ ಹಣದ ನೆರವು

ಹೀಗೆ ಸಾಗಾಣಿಕೆ ನಡೆಸಿದ ಶಸ್ತ್ರಗಳು ಭಯೋತ್ಪಾದನಾ ಕೃತ್ಯಗಳಿಗೆ ಬಳಕೆಯಾದರೆ, ಮಾದಕದ್ರವ್ಯ ವ್ಯಾಪಾರದಿಂದ ದೊರೆತ ಹಣವನ್ನು ಸಂಘಟನೆಗಳಿಗೆ ಕಳುಹಿಸಲಾಗುತ್ತದೆ. ಆ ಹಣದ ಒಂದು ಭಾಗವನ್ನು ಉಗ್ರಗಾಮಿಗಳ ಬಹುಮಾನದ ಹಣವನ್ನಾಗಿಯೂ ಇರಿಸಲಾಗುತ್ತಿದೆ ಎಂದು ಬಂಧಿತರು ತಿಳಿಸಿದ್ದಾರೆ. ʻನಮಗೆ ದೊರೆತಿರುವ ಮಾಹಿತಿಯ ಪ್ರಕಾರ, ಬಂಧಿತರಲ್ಲಿ ಒಬ್ಬ, ಅಮೃತಸರದ ಒಬ್ಬ ಉದ್ಯಮಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಆ ಉದ್ಯಮಿ ಯುಎಇ ನಲ್ಲಿ ನೆಲೆಸಿದ್ದು, ಪಾಕಿಸ್ತಾನದ ಯಾರದ್ದೋ ಸೂಚನೆಯ ಮೇರೆಗೆ ಇವರನ್ನು ಪ್ರಚೋದಿಸುತ್ತಾನೆ. ಒಂಧಿತರಲ್ಲಿ ಒಬ್ಬನ ತಂದೆ ಫಿರೋಜ್‌ಪುರದ ಕಾರಾಗೃಹದಲ್ಲಿದ್ದು, ಆತನಿಗೂ ಪಾಕಿಸ್ತಾನದ ನಂಟಿದೆʼ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಡಿಯಲ್ಲಿ ಅಕ್ರಮ ದಂಧೆ

ನಿಯಂತ್ರಣ ರೇಖೆಯುದ್ದಕ್ಕೂ ಇರುವ ಕಾಶ್ಮೀರದ ಕುಪ್ವಾರ, ಪೂಂಚ್‌, ರಾಜೌರಿ, ಉರಿ ಮತ್ತು ಬಾರಾಮುಲ್ಲಾ ಹಾಗೂ ಜಮ್ಮುವಿನ ಸಂಬಾ ಮತ್ತು ಕಥುವಾ ಪ್ರದೇಶಗಳಲ್ಲಿ ಈ ಸರಕುಗಳು ಗಡಿ ದಾಟುತ್ತಿವೆ. ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಅಫೀಮು ರವಾನೆಯಾಗುತ್ತಿದೆ. ಅವೆಲ್ಲವನ್ನೂ ಹೆರಾಯಿನ್‌ ಆಗಿ ಪರಿವರ್ತಿಸಿ, ಭಾರತಕ್ಕೆ ಸಿಕ್ಕಸಿಕ್ಕ ಎಲ್ಲಾ ಮಾರ್ಗಗಳಿಂದ ಸರಬರಾಜು ಮಾಡಲಾಗುತ್ತಿದೆ. ಹೀಗೆ ಪಾಕಿಸ್ತಾನ ಪ್ರಾಯೋಜಿತ ನಾರ್ಕೊ-ಭಯೋತ್ಪಾದನೆಯನ್ನು ಮಟ್ಟಹಾಕಲು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಮಾದಕವಸ್ತು ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು.

ಡ್ರೈ ಫ್ರೂಟ್ಸ್ ನೆಪದಲ್ಲಿ ಡ್ರಗ್ಸ್ ಸಾಗಾಟ

ಜಮ್ಮು ಮತ್ತು ಕಾಶ್ಮೀರದ ಡಿಐಜಿ ಸುಜಿತ್‌ ಸಿಂಗ್‌ ಅವರು ಹೇಳುವಂತೆ, ಋತುಮಾನದ ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಸಾಗಿಸುವ ನೆಪದಲ್ಲಿ ಕ್ವಿಂಟಲ್‌ಗಟ್ಟಲೆ ಮಾದಕದ್ರವ್ಯ ಸಾಗಿಸುತ್ತಿದ್ದ ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿತರಣೆ ಜಾಲವನ್ನು ಮಟ್ಟ ಹಾಕುವುದು, ಬೇಡಿಕೆ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದು ಮತ್ತು ಕಾರಾಗೃಹಗಳಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು- ಹೀಗೆ ಮೂರು ಹಂತಗಳಲ್ಲಿ ಇದಕ್ಕಾಗಿ ಕಾರ್ಯಾಚರಣೆ ನಡೆದಿದೆ. ಕಾರಾಗೃಹಗಳಿಂದಲೇ ಬಹಳಷ್ಟು ಪಾತಕಿಗಳು ಈ ಜಾಲಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಡ್ರಗ್ಸ್‌ ಸೇವನೆ-ಸಾಗಣೆ ವಿರೋಧಿ ದಿನ; ರಾಜ್ಯದಲ್ಲಿ ಕಳೆದ ವರ್ಷ ಜಪ್ತಿಯಾದ ಮಾದಕ ದ್ರವ್ಯದ ಪ್ರಮಾಣ ಎಷ್ಟು?

Exit mobile version