Site icon Vistara News

Parliament Security Breach: ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಸತ್‌ಗೆ ಎಂಟ್ರಿ ಕೊಡೋಕೆ ಯತ್ನ; ತಪ್ಪಿದ ಭಾರೀ ಅವಘಡ

Parliament Security Breach

ನವದೆಹಲಿ: ಸಂಸತ್‌(Parliament Security Breach) ನುಗ್ಗಿ ಯುವಕರು ಸ್ಮೋಕ್‌ ಬಾಂಬ್‌(Color Smoke Bomb) ಸಿಡಿಸಿ ದಾಂಧಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಒಂದು ಘಟನೆ ಸ್ವಲ್ಪದರಲ್ಲೇ ತಪ್ಪಿದೆ. ನಕಲಿ ಆಧಾರ್‌ ಕಾರ್ಡ್‌(Fake Aadhaar Card) ಬಳಸಿ ಸಂಸತ್‌ ಭವನಕ್ಕೆ ಎಂಟ್ರಿ ಕೊಡಲು ಯತ್ನಿಸಿದ್ದ ಮೂವರನ್ನು ಭದ್ರತಾ ಪಡೆ ಅರೆಸ್ಟ್‌ ಮಾಡಿದೆ. ಇನ್ನು ಬಂಧಿತರನ್ನು ಖಾಸಿಂ, ಮೋನೀಶ್‌ ಮತ್ತಿ ಸೋಯೆಬ್‌ ಎಂದು ಗುರುತಿಸಲಾಗಿದೆ.

ಏನಿದು ಘಟನೆ?

ಗುರುವಾರ ಭದ್ರತಾ ಸಿಬ್ಬಂದಿ ನಿತ್ಯದ ನಡೆಸುವಂತೆ ತಪಾಸಣೆ ವೇಳೆ ಈ ಮೂರು ಕಾರ್ಮಿಕರು ನಕಲಿ ಆಧಾರ್‌ ಕಾರ್ಡ್‌ ಹೊಂದಿರುವುದು ಪತ್ತೆಯಾಗಿದೆ. ಸಂಸತ್‌ ಭವನದ ಎದುರು ನಿಯೋಜನೆಗೊಂಡಿರುವ CISF ಭದ್ರತಾ ಸಿಬ್ಬಂದಿ ಮೂವರನ್ನು ತಪಾಸಣೆ ನಡೆಸಿದಾಗ ಇವರ ಬಳಿ ನಕಲಿ ಆಧಾರ್‌ ಕಾರ್ಡ್‌ ಇರುವುದು ಕಂಡು ಬಂದಿದ್ದು, ತಕ್ಷಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಫೋರ್ಜರಿ ಮತ್ತು ವಂಚನೆ ಪ್ರಕರಣ ದಾಖಲಿಸಿ ತನಿಖೆಗೊಳಪಡಿಸಲಾಗಿದೆ. ಇದರ ಬೆನ್ನಲ್ಲೇ CISF ಸಿಬ್ಬಂದಿ ಹಾಗೂ ದಿಲ್ಲಿ ಪೊಲೀಸರು ಸಂಸತ್‌ ಭವನದ ಸಂಪೂರ್ಣ ಭದ್ರತೆಯನ್ನು ಮರುಪರಿಶೀಲಿಸಿದ್ದಾರೆ.

ಇನ್ನು ಈ ಮೂವರು ನೌಕರರು ಡೀ ವೀ ಪ್ರಾಜೆಕ್ಟ್‌ ಲಿಮಿಟೆಡ್‌ ನಿಯೋಜಿಸಿರುವ ಗುತ್ತಿಗೆ ನೌಕರರಾಗಿದ್ದು, ಇವರು ಸಂಸತ್‌ ಭವನದ ಒಳಗೆ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. IPC ಸೆಕ್ಷನ್‌ಗಳು 465 (ನಕಲಿ), 419 (ವ್ಯಕ್ತಿತ್ವದಿಂದ ವಂಚನೆ), 120B (ಅಪರಾಧದ ಪಿತೂರಿ), 471 (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು), ಮತ್ತು 468 (ವಂಚನೆಯ ಉದ್ದೇಶಕ್ಕಾಗಿ ನಕಲಿ) ಅಡಿಯಲ್ಲಿ ಮೂವರ ಮೇಲೂ FIR ದಾಖಲಿಸಲಾಗಿದೆ.

ಬುಧವಾರ ಇಬ್ಬರು ಆಗುಂತಕರು ಲೋಕಸಭೆಗೆ ಬಂದು ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿ (Color Smoke Bomb) ಆತಂಕದ ಪರಿಸ್ಥಿತಿ ಸೃಷ್ಟಿಸಿದ್ದರು. ಈ ಲೋಕಸಭೆ ಭದ್ರತಾ ಲೋಪ ಪ್ರಕರಣಕ್ಕೆ (Security Breach in Lok Sabha) ಸಂಬಂಧಿಸಿದಂತೆ, ಕರ್ನಾಟಕದ ಮನೋರಂಜನ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿತ್ತು. ಇಡೀ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾಗಿದ್ದ ಲಲಿತ್ ಝಾ(Masterminde Lalit Jha), ದಿಲ್ಲಿಯ ಕರ್ತವ್ಯ ಪಥ ಪೊಲೀಸ್ ಠಾಣೆಗೆ ಹೋಗಿ ಗುರುವಾರ ಶರಣಾಗಿದ್ದಾನೆ(Surrendered to police). ಬಳಿಕ ಆತನನ್ನು ಔಪಚಾರಿಕವಾಗಿ ನವದೆಹಲಿ ಜಿಲ್ಲಾ ಪೊಲೀಸರು (Delhi Police) ಅರೆಸ್ಟ್ ಮಾಡಿ, ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಕೋಲ್ಕೊತಾ ಮೂಲದ ಶಿಕ್ಷಕ ಲಲಿತ್ ಝಾ, ಘಟನೆ ನಡೆದ ಕೂಡಲೇ ಪರಾರಿಯಾಗಿದ್ದ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಅನ್ವಯ ಪಾಸ್ ‌ಪಡೆದುಕೊಂಡಿದ್ದ ಡಿ. ಮನೋರಂಜನ್ ಮತ್ತು ಉತ್ತರ ಪ್ರದೇಶದ ಸಾಗರ್ ಶರ್ಮಾ ಅವರು ಸಂಸತ್ ಭದ್ರತೆಯನ್ನು ಭೇದಿಸಿದ್ದರು ಮತ್ತು ಲೋಕಸಭೆ ವಿಸಿಟರ್ ಗ್ಯಾಲರಿಗೆ ಆಗಮಿಸಿದ್ದರು. ಕಲಾಪ ನಡೆಯುತ್ತಿದ್ದ ವೇಳೆ, ಮನೋರಂಜನ್ ಮತ್ತು ಸಾಗರ್ ಶರ್ಮಾ ಅವರು ವಿಸಿಟರ್ ಗ್ಯಾಲರಿಯಂದ ಸಂಸದರು ಇರುವಲ್ಲಿಗೆ ಜಂಪ್ ಮಾಡಿ, ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದ್ದರು. ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ, ಸಂಸತ್ತಿನ ಹೊರಗೆ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಅವರು ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದ್ದರು. ಬಳಿಕ ಈ ನಾಲ್ವರು ಅಲ್ಲದೇ, ವಿಕ್ಕಿ ಶರ್ಮಾ ಎಂಬಾತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ, ಸಂಸತ್ ಭದ್ರತಾ ಲೋಪ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಲಲಿತ್ ಝಾ ಮಾತ್ರ ತಲೆ ಮರೆಸಿಕೊಂಡಿದ್ದ ಮತ್ತು ಆತನನ್ನು ಗುರುವಾರ ಬಂಧಿಸಲಾಗಿದೆ.

Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

Exit mobile version