Site icon Vistara News

Parliament Session 2024: ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿ; ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ ಕರೆ

Parliament Session 2024

Parliament Session 2024

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭವಾಗುವ ಮೊದಲು (Parliament Session 2024) ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಿ, ದೇಶದ ಜನರು ಸಂಸತ್‌ ಸದಸ್ಯರಿಂದ ʼಚರ್ಚೆ ಮತ್ತು ಶ್ರದ್ಧೆʼಯನ್ನು ನಿರೀಕ್ಷಿಸುತ್ತಾರೆಯೇ ಹೊರತು ʼಗೊಂದಲʼಗಳನ್ನಲ್ಲ ಎಂದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದರು. ಹೊಸ ಸಂಸತ್ತಿನ ಹೊರಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ʼʼಜನಸಾಮಾನ್ಯರು ಸಂಸದರಿಂದ ಕೆಲಸ ಬಯಸುತ್ತಾರೆ ಹೊರತು ಘೋಷಣೆಗಳಲ್ಲ. ಸಂಸದರು ತಮ್ಮ ನಿರೀಕ್ಷೆಗಳನ್ನು ಪೂರೈಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ಜನ ಸಾಮಾನ್ಯರಲ್ಲಿದೆʼʼ ಎಂದು ಹೇಳಿದರು.

“ದೇಶದ ಜನರು ಪ್ರತಿಪಕ್ಷಗಳಿಂದ ಉತ್ತಮ ಕ್ರಮಗಳನ್ನು ನಿರೀಕ್ಷಿಸುತ್ತಾರೆ. ಪ್ರಜಾಪ್ರಭುತ್ವದ ಘನತೆಯನ್ನು ಪ್ರತಿಪಕ್ಷಗಳು ಕಾಪಾಡುತ್ತವೆ ಎಂದು ನಾನು ಭಾವಿಸುತ್ತೇನೆ. ಜನರು ನಾಟಕ, ಗೊಂದಲವನ್ನು ಬಯಸುವುದಿಲ್ಲ. ಅವರು ಆರೋಗ್ಯಕರ ಚರ್ಚೆಯನ್ನು ಬಯಸುತ್ತಾರೆ. ದೇಶಕ್ಕೆ ಉತ್ತಮ, ಜವಾಬ್ದಾರಿಯುತ ಪ್ರತಿಪಕ್ಷದ ಅಗತ್ಯವಿದೆ ಮತ್ತು ಸಂಸದರು ಸಾಮಾನ್ಯ ಜನರ ಈ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಅವರು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ, ಭಾರತೀಯ ಸಂವಿಧಾನವನ್ನು ಹೇಗೆ ನಾಶಪಡಿಸಲಾಯಿತು ಎಂಬುದನ್ನು ಹೊಸ ಪೀಳಿಗೆ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. “ನಾಳೆ ಜೂನ್ 25. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವವರಿಗೆ ಜೂನ್ 25 ಎಂದಿಗೂ ಮರೆಯಲಾಗದ ದಿನ. ನಾಳೆ ಭಾರತೀಯ ಪ್ರಜಾಪ್ರಭುತ್ವದ ಮೇಲೆ ಕಪ್ಪು ಚುಕ್ಕೆ ಮೂಡಿ 50 ವರ್ಷ ಪೂರ್ಣಗೊಳ್ಳಲಿದೆ. ತುರ್ತು ಪರಿಸ್ಥಿತಿ ಘೋಷಣೆಯ ಮೂಲಕ ಹೇಗೆ ಭಾರತೀಯ ಸಂವಿಧಾನವನ್ನು ನಾಶಪಡಿಸಲಾಯಿತು ಮತ್ತು ದೇಶವನ್ನು ಸೆರೆಮನೆಯನ್ನಾಗಿ ಪರಿವರ್ತಿಸಲಾಯಿತು ಎಂಬುದನ್ನು ಹೊಸ ಪೀಳಿಗೆ ಎಂದಿಗೂ ಮರೆಯುವುದಿಲ್ಲ” ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದ್ದರು. ಈ ತುರ್ತು ಪರಿಸ್ಥಿತಿ 50 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮೋದಿ ಈ ರೀತಿ ವಾಗ್ದಾಳಿ ನಡೆಸಿದರು.

2047ರ ವೇಳೆಗೆ ಸರ್ಕಾರದ ವಿಕಸಿತ ಭಾರತ ಕಾರ್ಯಸೂಚಿಯನ್ನು ಉಲ್ಲೇಖಿಸಿದ ಪ್ರಧಾನಿ, ಭರವಸೆಯನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. “ಸ್ವತಂತ್ರ ಭಾರತದಲ್ಲಿ ಎರಡನೇ ಬಾರಿಗೆ ಸತತ ಮೂರನೇ ಬಾರಿಗೆ ಇಂದೇ ಸರ್ಕಾರವನ್ನು ಆಯ್ಕೆ ಮಾಡಲಾಗಿದೆ ಮತ್ತು ಇದು 60 ವರ್ಷಗಳ ನಂತರ ಸಂಭವಿಸಿದೆ. ಇದು ಹೆಮ್ಮೆಯ ವಿಷಯ. ಹೀಗಾಗಿ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ. ನಮ್ಮನ್ನು ಮತ್ತೊಮ್ಮೆ ಆರಿಸಿದ್ದಕ್ಕಾಗಿ ನಾನು ಜನರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದರು.

ಹಂಗಾಮಿ ಸ್ಪೀಕರ್‌ ಆಗಿ ಭರ್ತೃಹರಿ ಮಹತಾಬ್‌ ಪ್ರಮಾಣ ವಚನ ಸ್ವೀಕಾರ

ಇನ್ನು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಹಂಗಾಮಿ ಸ್ಪೀಕರ್‌ ಆಗಿ ಭರ್ತೃಹರಿ ಮಹತಾಬ್‌ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಇದನ್ನೂ ಓದಿ: Parliament Session 2024: ಇಂದಿನಿಂದ ಸಂಸತ್‌ ಅಧಿವೇಶನ; 10 ದಿನದ ಕಲಾಪದಲ್ಲಿ ಏನೇನು ನಡೆಯಲಿದೆ?

Exit mobile version