Site icon Vistara News

Parliament Session 2024: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

Parliament Session 2024

Parliament Session 2024

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ 3.0 ಸರ್ಕಾರದ ಮೊದಲ ಅಧಿವೇಶನ ಆರಂಭವಾಗಿದೆ (Parliament Session 2024). ಮೊದಲ ಬಾರಿಗೆ ನೂತನ ಸಂಸತ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹಂಗಾಮಿ ಸ್ಪೀಕರ್ ಭರ್ತೃಹರಿ ಮಹ್ತಾಬ್ (Bhartuhari Mahtab) ಪ್ರಮಾಣ ವಚನ ಬೋಧಿಸಿದರು. ಇವರ ಜತೆಗೆ ಇಂದು ಮತ್ತು ನಾಳೆ ಮೊದಲ ಹಂತದಲ್ಲಿ 264 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಉಳಿದ 264 ಮಂದಿಯ ಪ್ರಮಾಣ ವಚನ ಸ್ವೀಕಾರ ಜೂ. 26ರಂದು ನಡೆಯಲಿದ್ದು, ಅಂದೇ ಸ್ಪೀಕರ್‌ ಆಯ್ಕೆಯೂ ನಡೆಯಲಿದೆ. ಜೂ. 27ರಂದು  ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ.

ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಎಚ್‌ಡಿಕೆ

ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಇನ್ನಿತರ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ಎಚ್‌.ಡಿ. ಕುಮಾರಸ್ವಾಮಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ. ಇವರೊಂದಿಗೆ ಗೃಹ ಸಚಿವ ಅಮಿತ್​ ಶಾ, ಪ್ರಹ್ಲಾದ್​ ಜೋಶಿ ಮತ್ತಿತರರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಇದಕ್ಕೂ ಮೊದಲು ಏಳು ಬಾರಿ ಸಂಸದರಾಗಿ ಆಯ್ಕೆಯಾದ ಬಿಜೆಪಿಯ ಸಂಸದ ಭರ್ತೃಹರಿ ಮಹತಾಬ್‌ ಲೋಕಸಭೆಯ ಹಂಗಾಮಿ ಸ್ಪೀಕರ್‌ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಇತ್ತ ಅವರ ಆಯ್ಕೆಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅವರ ಆಯ್ಕೆಯಾಗುತ್ತಿದ್ದಂತೆ ಸದನ ತೊರೆದ ಪ್ರತಿಪಕ್ಷ ನಾಯಕರು ಸ್ಪೀಕರ್‌ ಆಯ್ಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಸಂವಿಧಾನ ಪ್ರತಿ ಹಿಡಿದು ಪ್ರತಿಭಟನೆ ನಡೆಸಿದರು. ಇಂಡಿ ಒಕ್ಕೂಟ ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭಾಗವಹಿಸಿದ್ದರು.

ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಮೋದಿ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.  “ನಾಳೆ ಜೂನ್ 25. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವವರಿಗೆ ಜೂನ್ 25 ಎಂದಿಗೂ ಮರೆಯಲಾಗದ ದಿನ. ನಾಳೆ ಭಾರತೀಯ ಪ್ರಜಾಪ್ರಭುತ್ವದ ಮೇಲೆ ಕಪ್ಪು ಚುಕ್ಕೆ ಮೂಡಿ 50 ವರ್ಷ ಪೂರ್ಣಗೊಳ್ಳಲಿದೆ. ತುರ್ತು ಪರಿಸ್ಥಿತಿ ಘೋಷಣೆಯ ಮೂಲಕ ಹೇಗೆ ಭಾರತೀಯ ಸಂವಿಧಾನವನ್ನು ನಾಶಪಡಿಸಲಾಯಿತು ಮತ್ತು ದೇಶವನ್ನು ಸೆರೆಮನೆಯನ್ನಾಗಿ ಪರಿವರ್ತಿಸಲಾಯಿತು ಎಂಬುದನ್ನು ಹೊಸ ಪೀಳಿಗೆ ಎಂದಿಗೂ ಮರೆಯುವುದಿಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: Parliament Session 2024: ಇಂದಿನಿಂದ ಸಂಸತ್‌ ಅಧಿವೇಶನ; 10 ದಿನದ ಕಲಾಪದಲ್ಲಿ ಏನೇನು ನಡೆಯಲಿದೆ?

ʼʼದೇಶದ ಜನತೆ ಪ್ರತಿಪಕ್ಷಗಳಿಂದ ಉತ್ತಮ ಸಹಕಾರವನ್ನು ನಿರೀಕ್ಷಿಸುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ ಮತ್ತು 50 ವರ್ಷಗಳ ಹಿಂದೆ ಮಾಡಲಾದ ತುರ್ತು ಪರಿಸ್ಥಿತಿಯಂತಹ ಕೆಲಸವನ್ನು ಭಾರತದಲ್ಲಿ ಯಾರೂ ಮಾಡಲು ಧೈರ್ಯ ಮಾಡಬಾರದು ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆʼʼ ಎಂದರು.

Exit mobile version