ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದ್ದು, ಮೊದಲ ಅಧಿವೇಶನ (Parliament Session 2024) ಆರಂಭವಾಗಿದೆ. 18ನೇ ಲೋಕಸಭೆ (Lok Sabha) ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಜು. 3ರವರೆಗೆ ಮುಂದುವರಿಯಲಿದೆ. ರಾಜ್ಯಸಭೆಯ ಅಧಿವೇಶನ ಜೂ. 27ರಿಂದ ಜು. 3ರವರೆಗೆ ನಡೆಯಲಿದೆ. ಈ ಬಾರಿ ಪ್ರತಿಪಕ್ಷಗಳು ಹೆಚ್ಚು ಶಕ್ತವಾಗಿರುವ ಹಿನ್ನಲೆಯಲ್ಲಿ ಅಧಿವೇಶನ ಯಾವ ರೀತಿ ನಡೆಯಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.
ಅಧಿವೇಶನದ ಮೊದಲ ದಿನವಾದ ಸೋಮವಾರ (ಜೂ. 24) ಹಂಗಾಮಿ ಸ್ಪೀಕರ್ ನೇಮಕ ನಡೆಯಿತು. ಏಳು ಬಾರಿ ಸಂಸದರಾಗಿರುವ ಬಿಜೆಪಿಯ ಭರ್ತೃಹರಿ ಮಹ್ತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಯಿತು. ಆದರೆ ಇದಕ್ಕೆ ಪ್ರತಿಪಕ್ಷಗಳ ಇಂಡಿ ಬಣ ಆಕ್ಷೇಪ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರ ಹಿರಿತನ ಕಡೆಗಣಿಸಿ ಹಂಗಾಮಿ ಸ್ಪೀಕರ್ ನೇಮಕ ಮಾಡಿದೆ ಎಂದು ಕಾಂಗ್ರೆಸ್ ಆಕ್ಷೇಪಿಸಿದ್ದು, ಮೊದಲ ದಿನವೇ ಶಕ್ತವಾಗಿ ಪ್ರತಿಕ್ರಿಯಿಸಿತ್ತು. ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಕೊಂಡಿಕುನಾಲ್ ಸುರೇಶ್ ಬದಲಿಗೆ ಏಳು ಬಾರಿ ಸಂಸದರಾಗಿರುವ ಭರ್ತೃಹರಿ ಮಹ್ತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ವಾದ ಮಂಡಿಸಿತ್ತು.
ಇದಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ, ಭರ್ತೃಹರಿ ಮಹತಾಬ್ 1998ರಿಂದ ಕಟಕ್‌ನಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಕೆ. ಸುರೇಶ್ 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದರು ಎಂದು ಹೇಳಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಸಹಿತ ಸಂಸದರೆಲ್ಲ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಲೆಂದು ತಮ್ಮ ಸೀಟಿನಿಂದ ಮೇಲೇಳುತ್ತಿದ್ದಂತೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಂವಿಧಾನ ಪುಸ್ತಕ ಕೈಯಲ್ಲಿ ಹಿಡಿದು ಸಂವಿಧಾನ ಸುದೀರ್ಘವಾಗಿ ಬಾಳಲಿ ಎಂದು ಘೋಷಣೆ ಕೂಗಿರುವ ಘಟನೆಯೂ ನಡೆಯಿತು.
ನಾಳೆ ಏನೇನು?
ಜೂನ್ 24 ಮತ್ತು 25ರಂದು ಎಲ್ಲ 543 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು, ಬುಧವಾರ ಲೋಕಸಭಾ ಸ್ಪೀಕರ್ ಆಯ್ಕೆ ನಡೆಯಲಿದೆ. ಸ್ಪೀಕರ್ ಆಯ್ಕೆ ಬಗ್ಗೆ ಈಗಾಗಲೇ ಕುತೂಹಲ ಕೆರಳಿದೆ. ಲೋಕಸಭಾ ಇತಿಹಸದಲ್ಲೇ ಮೊದಲ ಬಾರಿಗೆ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿರುವುದೇ ಇದಕ್ಕೆ ಕಾರಣ. ಇದುವರೆಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತದ ಅಭ್ಯರ್ಥಿ ಸ್ಪೀಕರ್ ಆಗಿ ಆಯ್ಕೆಯಾಗುತ್ತಿದ್ದರು. ಆದರೆ ಈ ವಾರಿ ಒಮ್ಮತ ಮೂಡದ ಹಿನ್ನಲೆಯಲ್ಲಿ ಪ್ರತಿಪಕ್ಷಗಳೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಓಂ ಬಿರ್ಲಾ V/S ಕೆ.ಸುರೇಶ್
ಎನ್‌ಡಿಎಯಿಂದ ಬಿಜೆಪಿಯ ಓಂ ಬಿರ್ಲಾ ನಾಮಪತ್ರ ಸಲ್ಲಿಸಿದರೆ ಇಂಡಿ ಬಣದಿಂದ ಕಾಂಗ್ರೆಸ್‌ನ ಕೊಂಡಿಕುನಾಲ್ ಸುರೇಶ್ ಸ್ಪರ್ಧಿಸುತ್ತಿದ್ದಾರೆ. ಹಿಂದಿನ ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಇಂಡಿ ಒಕ್ಕೂಟ ಷರತ್ತು ವಿಧಿಸಿತ್ತು. ಉಪ ಸಭಾಪತಿ (Deputy Speaker) ಹುದ್ದೆ ಇಂಡಿ ಬಣಕ್ಕೆ ನೀಡಿದರೆ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಪ್ರತಿಪಕ್ಷಗಳು ಒಪ್ಪಿಕೊಂಡಿದ್ದವು. ಆದರೆ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಕೆ.ಸುರೇಶ್ ನಾಮಪತ್ರ ಸಲ್ಲಿಸಿದರು. ಹೀಗಾಗಿ ನಾಳೆ ಸಂಸತ್ತಿನಲ್ಲಿ ನಡೆಯಲಿರುವ ಲೋಕಸಭಾ ಸ್ಪೀಕರ್ ಆಯ್ಕೆಯ ಚುನಾವಣೆ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್ ಹುದ್ದೆಗೆ ನಡೆಯಲಿದೆ ಚುನಾವಣೆ