Site icon Vistara News

Parliament Sessions: ಇಂದು ಸಂಸತ್‌ ಕಲಾಪ ಪುನರಾರಂಭ; ʼನೀಟ್‌ʼ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು ಸಾಧ್ಯತೆ: Live ಇಲ್ಲಿ ನೋಡಿ

Parliament Sessions

Parliament Sessions

ನವದೆಹಲಿ: ಎರಡು ದಿನಗಳ ವಿರಾಮದ ನಂತರ ಸಂಸತ್‌ ಕಲಾಪ (Parliament Sessions) ಇಂದು ಮತ್ತೆ ಆರಂಭವಾಗಲಿದೆ. 18ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ವಾರ ಸಂಸತ್ತು ಬಿಸಿ ಏರಿದ ಚರ್ಚೆಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳಿವೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಯಲ್ಲಿನ ಅಕ್ರಮ, ಅಗ್ನಿಪಥ್ ಯೋಜನೆ ಮುಂತಾದ ಪ್ರಮುಖ ವಿಷಯಗಳ ಮೇಲೆ ಪ್ರತಿಪಕ್ಷಗಳ ಇಂಡಿ ಒಕ್ಕೂಟ ಎನ್‌ಡಿಎ ಸರ್ಕಾರದ ಮೇಲೆ ದಾಳಿ ನಡೆಸಲು ಸಜ್ಜಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಮತ್ತು ಹಣದುಬ್ಬರದ ಜತೆಗೆ ಪ್ರತಿಪಕ್ಷಗಳು ಭಾರತದಲ್ಲಿ ನಿರುದ್ಯೋಗ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತುವ ಸಾಧ್ಯತೆಯಿದೆ.

ನೀಟ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಶುಕ್ರವಾರ ಕೋಲಾಹಲ ನಡೆದ ಕಾರಣ ಸ್ಪೀಕರ್‌ ಓಂ ಬಿರ್ಲಾ ಅವರು ಲೋಕಸಭೆ ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವನ್ನು ಆದ್ಯತೆಯ ಮೇರೆಗೆ ಚರ್ಚಿಸುವ ನಿರ್ಣಯವನ್ನು ಅಂಗೀಕರಿಸುವಂತೆ ಇಂಡಿ ಒಕ್ಕೂಟದ ಸದಸ್ಯರು ಕೋರಿದ ಬಳಿಕ ಗದ್ದಲ ಪ್ರಾರಂಭವಾಗಿತ್ತು. ಈ ಕೋಲಾಹಲದ ಮಧ್ಯೆ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮೊದಲು ಮಧ್ಯಾಹ್ನ 12ರವರೆಗೆ ಮತ್ತು ನಂತರ ಜುಲೈ 1ರವರೆಗೆ ಮುಂದೂಡಿದ್ದರು.

ಇವತ್ತು ಏನಾಗಲಿದೆ?

ಪ್ರತಿಪಕ್ಷಗಳ ನಾಯಕ ರಾಹುಲ್‌ ಗಾಂಧಿ ಅವರು, ʼʼನೀಟ್‌ ವಿವಾದ ಅತ್ಯಂತ ಪ್ರಮುಖವಾದುದು. ಈ ವಿಚಾರವಾಗಿ ಚರ್ಚೆ ನಡೆಸಲು ಪಟ್ಟು ಹಿಡಿಯುತ್ತೇವೆʼʼ ಎಂದು ಈ ಹಿಂದೆಯೇ ಘೋಷಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಪ್ರಸ್ತಾವಿಸಿದ್ದರೂ, ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಸದನವು ಕೈಗೆತ್ತಿಕೊಳ್ಳಲಿರುವುದರಿಂದ ನೀಟ್ ಕುರಿತು ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಓಂ ಬಿರ್ಲಾ ಹೇಳಿದ್ದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು.

ನೀಟ್ ವಿವಾದದ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ ಇತ್ತ ರಾಜ್ಯಸಭೆಯಲ್ಲಿಯೂ ಕೋಲಾಹಲ ನಡೆಯಿತು. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇತರ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಇಂದು ಉಭಯ ಸದನಗಳಲ್ಲಿ ಈ ಬಗ್ಗೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಗ್ನಿಪಥ್ ಯೋಜನೆ, ಹಣದುಬ್ಬರ ಮತ್ತು ನಿರುದ್ಯೋಗದಂತಹ ಇತರ ವಿಷಯಗಳನ್ನು ಇಂಡಿ ಬಣದ ನಾಯಕರು ಪ್ರಸ್ತಾವಿಸಲಿದ್ದು, ನೀಟ್ ವಿಷಯದ ಬಗ್ಗೆ ಸಂಸತ್ತಿನ ನಿಯಮ 267ರ ಅಡಿ ಚರ್ಚೆಗೆ ಒತ್ತಾಯಿಸಲಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಬಿಜೆಪಿ ಹಿರಿಯ ನಾಯಕಿ ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ, ಸಂಸದೆ ಬಾನ್ಸುರಿ ಸ್ವರಾಜ್ ಅವರು ಈ ನಿರ್ಣಯವನ್ನು ಅನುಮೋದಿಸಲಿದ್ದಾರೆ.

ಲೋಕಸಭೆಯಲ್ಲಿ ವಂದನಾ ನಿರ್ಣಯದ ಮೇಲಿನ ಚರ್ಚೆಗೆ 16 ಗಂಟೆಗಳ ಸಮಯವನ್ನು ನಿಗದಿಪಡಿಸಲಾಗಿದೆ. ಇದಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಲಿದ್ದಾರೆ. ರಾಜ್ಯಸಭೆಯಲ್ಲಿ ಇದಕ್ಕಾಗಿ 21 ಗಂಟೆಗಳನ್ನು ಮೀಸಲಿಡಲಾಗಿದೆ.

ಭಾನುವಾರ ರಾಹುಲ್‌ ಗಾಂಧಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ʼʼಪ್ರತಿಪಕ್ಷ ಪ್ರಜಾಪ್ರಭುತ್ವದ ಮುಖ್ಯ ಭಾಗ. ನಿಮ್ಮ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾವಿಸುವುದಾಗಿ ಭರವಸೆ ನೀಡುತ್ತೇನೆ. ಆ ಮೂಲಕ ನಾನು ನಿಮ್ಮ ಧ್ವನಿಯನ್ನು ಎತ್ತುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತೀವ್ರ ಹೋರಾಟದ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Parliament Sessions: ಸೆಂಗೋಲ್‌ ಮೇಲೆ ಪ್ರತಿಪಕ್ಷಗಳ ಕಣ್ಣು; ಸಂಸತ್‌ನಲ್ಲಿ ಭಾರೀ ಕೋಲಾಹಲ

Exit mobile version