Site icon Vistara News

Parliament Sessions: ಇಂದಿನಿಂದ ಬಜೆಟ್‌ ಅಧಿವೇಶನ; ಕೇಂದ್ರದ ವಿರುದ್ಧ ಹೋರಾಟಕ್ಕೆ ಸಜ್ಜಾದ ಪ್ರತಿಪಕ್ಷ: Live ಇಲ್ಲಿ ನೋಡಿ

Parliament Sessions

Parliament Sessions

ನವದೆಹಲಿ: ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ (Parliament Sessions) ಇಂದು ಆರಂಭವಾಗಲಿದೆ. ನಾಳೆ (ಜುಲೈ 23) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು 7ನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇತ್ತ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ದೇಶದ ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಧ್ವನಿ ಎತ್ತಲಿವೆ. ಹಾಗಾಗಿ ಬಜೆಟ್‌ ಅಧಿವೇಶನವು ತೀವ್ರ ಕುತೂಹಲ ಕೆರಳಿಸಿದ್ದು, Live ವೀಕ್ಷಿಸಿ.

ಇಂದಿನಿಂದ ಆರಂಭವಾಗುವ ಬಜೆಟ್‌ ಅಧಿವೇಶನವು ಆಗಸ್ಟ್‌ 12ರವರೆಗೆ ನಡೆಯಲಿದೆ. ಸಾಲು ಸಾಲು ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇಂಡಿ ಒಕ್ಕೂಟವು ಸಜ್ಜಾಗಿದೆ. ಅದರಲ್ಲೂ, ಮಣಿಪುರ ಹಿಂಸಾಚಾರ, ಕನ್ವರ್‌ ಯಾತ್ರೆ ವಿವಾದ, ನೀಟ್‌ ಪ್ರಶ್ನೆಪತ್ರಿಕೆ ಪ್ರಕರಣ, ಬೆಲೆ ಏರಿಕೆ, ಯುಪಿಎಸ್‌ಸಿ ಅಕ್ರಮ ಸೇರಿ ಹಲವು ವಿಷಯಗಳನ್ನು ಪ್ರತಿಪಕ್ಷಗಳು ಚರ್ಚೆಗೆ ತರಲಿವೆ. ಸರ್ಕಾರಕ್ಕೆ ಚಾಟಿ ಬೀಸಲು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೂ ಸಜ್ಜಾಗಿದ್ದಾರೆ. ಮೊದಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಗುಡುಗಿದ್ದ ಅವರು ಈ ಬಾರಿಯೂ ತರಾಟೆಗೆ ತೆಗೆದುಕೊಳ್ಳಲಿದ್ದಾರೆ.

ಆರ್ಥಿಕ ಸಮೀಕ್ಷೆ ಪ್ರಕಟ

ಕೇಂದ್ರ ಸರ್ಕಾರವು 2023-24ರ ಆರ್ಥಿಕ ಸಮೀಕ್ಷೆಯನ್ನು ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಿದೆ. ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಈ ಬಜೆಟ್ ಪೂರ್ವ ದಾಖಲೆಯನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. 2023-24ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಮತ್ತು ರಾಜ್ಯಸಭೆಯಲ್ಲಿ 2 ಗಂಟೆಗೆ ಮಂಡಿಸಲಾಗುತ್ತದೆ. ನಂತರ ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸುವ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆ ದಾಖಲೆಯು ಆರ್ಥಿಕತೆಯ ಸ್ಥಿತಿ ಮತ್ತು 2023-24ರ ವಿವಿಧ ಸೂಚಕಗಳ ಬಗ್ಗೆ ಒಳನೋಟ ಮತ್ತು ಪ್ರಸಕ್ತ ವರ್ಷದ ಕೆಲವು ದೃಷ್ಟಿಕೋನವನ್ನು ನೀಡುತ್ತದೆ.

ಬಜೆಟ್ ಮಂಡನೆಯ ನಂತರ ತೀವ್ರ ಚರ್ಚೆ ನಡೆಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. ಹೊಸ ಸಂಸದರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಅಧಿವೇಶನದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಈ ಬಾರಿ ಅಧಿವೇಶನದಲ್ಲಿ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ.

ನೇಮ್‌ಪ್ಲೇಟ್‌ ವಿವಾದ

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹೋಟೆಲ್‌ ಮುಂದೆ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕು ಎನ್ನುವ ವಿವಾದಾತ್ಮಕ ಆದೇಶವನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಹಲವು ವಿಚಾಗಳನ್ನು ಪ್ರತಿಪಕ್ಷ ಪ್ರಸ್ತಾವಿಸಲಿದೆ. ಕಾಂಗ್ರೆಸ್ ಈ ಆದೇಶವನ್ನು ಈಗಾಗಲೇ ಟೀಕಿಸಿದ್ದು, ಇದನ್ನು “ಕೋಮುವಾದಿ” ಎಂದು ಕರೆದಿದೆ ಮತ್ತು ಮುಸ್ಲಿಮರು ಮತ್ತು ಪರಿಶಿಷ್ಟ ಜಾತಿಯವರ ಅವರ ಗುರುತನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದಿದೆ. ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಎಎಪಿ ಈ ವಿಷಯವನ್ನು ಉಭಯ ಸದನಗಳಲ್ಲಿ ಎತ್ತುವುದಾಗಿ ಸ್ಪಷ್ಟಪಡಿಸಿವೆ.

ಇದನ್ನೂ ಓದಿ: Central Budget 2024: ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಟೀಂನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಏತನ್ಮಧ್ಯೆ ಬಿಹಾರದ ಬಿಜೆಪಿಯ ಮಿತ್ರಪಕ್ಷಗಳು ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿವೆ. ಜತೆಗೆ ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಮತ್ತು ಒಡಿಶಾದ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಕೂಡ ಇದೇ ಬೇಡಿಕೆ ಮುಂದಿಟ್ಟಿದೆ. ಒಟ್ಟಿನಲ್ಲಿ ಸಂಸತ್ತು ಕಾವೇರಿದ ಚರ್ಚೆಗೆ ಸಾಕ್ಷಿಯಾಗುವುದು ಸ್ಪಷ್ಟ.

Exit mobile version