ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Sessions)ದ ನಾಲ್ಕನೇ ದಿನವಾದ ಇಂದು (ಜೂನ್ 27) ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭಾಷಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಈ ಮೊದಲ ಅಧಿವೇಶನ ಜೂನ್ 24ರಂದು ಆರಂಭವಾಗಿದ್ದು, ಜು. 3ರವರೆಗೆ ನಡೆಯಲಿದೆ. ರಾಜ್ಯಸಭೆಯ ಅಧಿವೇಶನ ಜೂ. 27ರಿಂದ ಜು. 3ರವರೆಗೆ ನಡೆಯಲಿದೆ.
ಭಾರತೀಯ ಸಂವಿಧಾನದ 87ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಪ್ರತಿ ಲೋಕಸಭಾ ಚುನಾವಣೆಯ ನಂತರದ ಮೊದಲ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಾರೆ. ದ್ರೌಪದಿ ಮುರ್ಮು ಅವರು ತಮ್ಮ ಭಾಷಣದ ಮೂಲಕ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ವಿವರಿಸಲಿದ್ದಾರೆ. ಅಧಿವೇಶನದ ಮೊದಲ ಎರಡು ದಿನ ಸಂಸದರು ಪ್ರಮಾಣ ವಚನ ಸ್ವೀಕರಿಸಿದರೆ ಮೂರನೇ ದಿನ ಸ್ಪೀಕರ್ ಆಯ್ಕೆ ನಡೆಯಿತು.
ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ನೇಮಕ
ಇನ್ನು ಬುಧವಾರ ನಡೆದ ಲೋಕಸಭಾ ಸ್ಪೀಕರ್ ಆಯ್ಕೆಯ ಚುನುವಾಣೆಯಲ್ಲಿ ಬಿಜೆಪಿಯ ಓಂ ಬಿರ್ಲಾ ನೇಮಕಗೊಂಡಿದ್ದಾರೆ. ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇಂಡಿ ಬಣದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಕಣಕ್ಕಿಳಿದಿದ್ದರು. ಭಾರೀ ಕುತೂಹಲ ಮೂಡಿಸಿದ್ದ ಈ ಐತಿಹಾಸಿಕ ಚುನಾವಣೆಯಲ್ಲಿ ಇದೀಗ ಓಂ ಬಿರ್ಲಾ ಗೆಲುವಿನ ನಗೆ ಬೀರಿದರು.
ಆರಂಭದಲ್ಲಿ ಎನ್‌ಡಿಎ ಪ್ರತಿಪಕ್ಷಗಳ ಮನವೊಲಿಸಲು ಯತ್ನಿಸಿತ್ತು. ಓಂ ಬಿರ್ಲಾ ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದ್ದ ಇಂಡಿ ಬಣ ಡೆಪ್ಯುಟಿ ಸ್ಪೀಕರ್ ತಮಗೆ ಸಿಗಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದು ಕೊನೆಯ ಕ್ಷಣದಲ್ಲಿ ಕೊಂಡಿಕುನಾಲ್ ಸುರೇಶ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಹಂಗಾಮಿ ಸ್ಪೀಕರ್ ಭಾರ್ತೃಹರಿ ಮಹತಾಬ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಇನ್ನು ಎರಡನೇ ಬಾರಿ ಲೋಕಸಭೆ ಸ್ಪೀಕರ್ ಆಗಿ ಆಯ್ಕೆ ಆಗಿರುವ ಓಂ ಬಿರ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಸಂಸತ್ ಸದಸ್ಯರು ಪಕ್ಷಾತೀತ ಅಭಿನಂದನೆ ಸಲ್ಲಿಸಿದರು.
ಮೋದಿ ಮಾತನಾಡಿ, ʼʼಸದನದ ಪರವಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಅಮೃತ ಕಾಲದ ಸಮಯದಲ್ಲಿ ನೀವು ಎರಡನೇ ಬಾರಿಗೆ ಈ ಜವಾಬ್ದಾರಿಯುತ ಹುದ್ದೆ ಅಲಂಕರಿಸಿರುವುದು ಬಹಳ ಸಂತಸ ತಂದಿದೆ. ನಿಮ್ಮ ಅನುಭವದೊಂದಿಗೆ, ಮುಂದಿನ 5 ವರ್ಷಗಳವರೆಗೆ ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ. ನಿಮ್ಮ ಮುಖದ ಮೇಲಿನ ಸಿಹಿಯಾದ ನಗು ಇಡೀ ಸದನವನ್ನು ಸಂತೋಷವನ್ನಾಗಿರಿಸುತ್ತದೆʼʼ ಎಂದು ಹೇಳಿದರು.
ಇನ್ನು ರಾಹುಲ್ ಗಾಂಧಿ ಮಾತನಾಡಿ, “ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಿ ಭಾರತದ ಜನರನ್ನು ಪ್ರತಿನಿಧಿಸಲು ಅವಕಾಶ ನೀಡುವ ಮೂಲಕ, ನೀವು ಭಾರತದ ಸಂವಿಧಾನವನ್ನು ರಕ್ಷಿಸುವ ನಿಮ್ಮ ಕರ್ತವ್ಯವನ್ನು ನೀವು ಸರಿಯಾಗಿ ನಿರ್ವಹಿಸುತ್ತೀರಿ ಎಂಬ ಬಗ್ಗೆ ನಮಗೆ ವಿಶ್ವಾಸವಿದೆ. ನಾನು ಮತ್ತೊಮ್ಮೆ ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆʼʼ ಎಂದು ನುಡಿದರು. ಈ ಬಾರಿ ಪ್ರತಿಪಕ್ಷ ಪ್ರಬಲವಾಗಿರುವುದರಿಂದ ಅಧಿವೇಶನ ಯಾವ ರೋತಿ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.