Site icon Vistara News

Sudha Murty: ಮಾತಾಡೋರು ಮಾತಾಡ್ಲಿ; ಅಳಿಯ ರಿಷಿ ಸುನಕ್‌ಗೆ ಸುಧಾಮೂರ್ತಿ ಹೀಗೆ ಹೇಳಿದ್ದೇಕೆ?

Sudha Murty

People Will Talk: Sudha Murty's Advice To Rishi Sunak, Akshata Murty

ನವದೆಹಲಿ: ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ (Sudha Murty) ಅವರು ಉದ್ಯಮದ ಆಚೆಗೂ ಸಾಮಾಜಿಕ ಕಾರ್ಯಗಳ ಮೂಲಕ, ಹೊಸ ಪುಸ್ತಕಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಎನ್‌ಡಿಟಿವಿಗೆ ಸಂದರ್ಶನ ನೀಡಿರುವ ಸುಧಾ ಮೂರ್ತಿ ಅವರು ತಮ್ಮ ಅಳಿಯ ಹಾಗೂ ಪುತ್ರಿಯ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ, ಅಳಿಯ ರಿಷಿ ಸುನಕ್‌ (Rishi Sunak) ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಅಳಿಯ ಹಾಗೂ ಪುತ್ರಿ ಅಕ್ಷತಾ ಮೂರ್ತಿ (Akshata Murty) ಅವರಿಗೆ ಅಮೂಲ್ಯ ಸಲಹೆಗಳನ್ನು ನೀಡಿರುವ ಕುರಿತು ಕೂಡ ಸುಧಾ ಮೂರ್ತಿ ಹೇಳಿದ್ದಾರೆ.

“ರಿಷಿ ಸುನಕ್‌ ಹಾಗೂ ಪುತ್ರಿ ಅಕ್ಷತಾ ಮೂರ್ತಿಗೆ ನಾನು ಆಗಾಗ ಸಲಹೆ ನೀಡುತ್ತಲೇ ಇರುತ್ತೇನೆ. ಜನ ನಿಮ್ಮ ಹುದ್ದೆ ನೋಡಿ ಮಾತನಾಡುತ್ತಾರೆ. ನೀವು ಪ್ರಾಮಾಣಿಕರಾಗಿದ್ದರೆ, ದೇಶಕ್ಕೆ ನೀವು ಸೇವೆ ಸಲ್ಲಿಸುತ್ತಿದ್ದರೆ, ನೀವು ಯಾರ ಮಾತಿಗೂ ಕಿವಿ ಕೊಡಬೇಕಿಲ್ಲ. ಕೆಲವರ ಕೆಲಸವೇ ಮಾತನಾಡುವುದಾಗಿರುತ್ತದೆ. ಜನ ಮಾತನಾಡುತ್ತಲೇ ಇರುತ್ತಾರೆ. ನೀವು ಪ್ರಾಮಾಣಿಕರಾಗಿ ಕೆಲಸ ಮಾಡುತ್ತಿದ್ದರೆ, ಜನರ ಟೀಕೆಗಳನ್ನು ನಿರ್ಲಕ್ಷಿಸಿ ಎಂಬುದಾಗಿ ಮಗಳು ಹಾಗೂ ಅಳಿಯನಿಗೆ ಹೇಳುತ್ತಲೇ ಇರುತ್ತೇನೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ.

ದೇವರಿಗೆ ಮಾತ್ರ ಉತ್ತರದಾಯಿ

“ನೀವು ಮೌಲ್ಯಯುತ ಜೀವನ ಸಾಗಿಸುತ್ತಿದ್ದರೆ, ನೀವು ನೆಲದ ಕಾನೂನನ್ನು ಕಾಪಾಡುತ್ತಿದ್ದರೆ, ಯಾರಿಗೂ ನೀವು ಸಾಬೀತುಪಡಿಸಬೇಕಿಲ್ಲ. ದೇವರಿಗೆ ಮಾತ್ರ ನಾವು ಉತ್ತರದಾಯಿಗಳು. ಹಾಗಾಗಿ, ಯಾರ ಮಾತಿಗೂ ಕಿವಿಗೊಡಬೇಕಿಲ್ಲ. ಮಾತನಾಡುವವರು ಅದೇ ಕೆಲಸ ಮಾಡಲಿ, ನೀವು ನಿಮ್ಮ ಕೆಲಸ ಮಾಡಿ. ಜನರ ಟೀಕೆಗಳು ಕೆಲವೊಮ್ಮೆ ಬೇಸರವನ್ನುಂಟು ಮಾಡುತ್ತವೆ. ಆದರೆ, ನೀವು ಸುದೀರ್ಘ ಪಯಣ ಮಾಡುವಾಗ, ಯಶಸ್ವಿ ಜೀವನ ನಡೆಸುವಾಗ ಇವೆಲ್ಲವುಗಳನ್ನು ನಿರ್ಲಕ್ಷಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ

ಸಂದರ್ಶನದ ವೇಳೆ ಸುಧಾ ಮೂರ್ತಿ ಪತಿ, ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರು ಕೂಡ ಅಳಿಯನ ಬಗ್ಗೆ ಮಾತನಾಡಿದ್ದಾರೆ. ರಿಷಿ ಸುನಕ್‌ ಹಾಗೂ ಅಕ್ಷತಾ ಮೂರ್ತಿ ಅವರು ಸ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಓದುವಾಗ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಕೆಲವು ತಿಂಗಳ ಹಿಂದಷ್ಟೇ ರಿಷಿ ಸುನಕ್‌ ಅವರು ಭಾರತಕ್ಕೆ ಆಗಮಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version