ಮುಂಬಯಿ: ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡಲಾಗುವುದು ಎಂದು ಪ್ರಕಟಿಸಿದರು. ವಿಶ್ವಾಸಮತ ಗೆದ್ದ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಅವರು ತೆರಿಗೆ ಇಳಿಕೆ ಘೋಷಣೆ ಮಾಡಿದರು. ತೆರಿಗೆ ಇಳಿಕೆ ಪ್ರಮಾಣವನ್ನು ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಪ್ರಕಟಿಸುವುದಾಗಿ ಅವರು ಹೇಳಿದರು.
ಮುಂಬಯಿಯಲ್ಲಿ ಪ್ರಸಕ್ತ ಪೆಟ್ರೋಲ್‌ಗೆ ೧೧೧.೩೫ ರೂ. ದರ ಇದ್ದರೆ, ಡೀಸೆಲ್‌ಗೆ ೯೭.೨೮ ರೂ. ದರವಿದೆ. ಮಹಾರಾಷ್ಟ್ರ ಸರಕಾರ ಕಳೆದ ಮೇ ಅಂತ್ಯದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸಿತ್ತು. ಇದರಿಂದ ಪೆಟ್ರೋಲ್ ದರ ೨.೦೮ ರೂ. ಮತ್ತು ಡೀಸೆಲ್ ದರ ೧.೪೪ ರೂ. ಇಳಿಕೆಯಾಗಿತ್ತು. ಇದೇ ಅವಧಿಯಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ದರವನ್ನು ೮ ರೂ. ಮತ್ತು ಡೀಸೆಲ್ ದರವನ್ನು ೬ ರೂ. ಇಳಿಸಿತ್ತು. ಇದೇ ರೀತಿ ರಾಜ್ಯಗಳೂ ಇಳಿಸುವಂತೆ ಮನವಿ ಮಾಡಿತ್ತು. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರ ಸರಕಾರ ಸ್ಪಂದಿಸಿತ್ತು.
ಮೇ ೨೭ರಂದು ಕೇಂದ್ರ ಸರಕಾದ ತೆರಿಗೆ ಇಳಿಸಿದ ಬಳಿಕ ಕಳೆದ ೪೩ ದಿನಗಳಲ್ಲಿ ತೈಲ ದರ ಹೆಚ್ಚಿನ ಏರಿಳಿತಗಳಿಲ್ಲದೆ ಸಾಗುತ್ತಿದೆ. ಆಗ ಮಹಾರಾಷ್ಟ್ರ, ಕೇರಳ ಮತ್ತು ರಾಜಸ್ಥಾನ ರಾಜ್ಯಗಳೂ ತಮ್ಮ ಪಾಲಿನ ವ್ಯಾಟ್‌ನಲ್ಲಿ ಕಡಿತ ಮಾಡಿದ್ದವು.
ಈ ಮಹಾರಾಷ್ಟ್ರ ಮತ್ತೊಂದು ಬಾರಿ ತೆರಿಗೆ ಇಳಿಸಲು ಮುಂದಾಗಿರುವುದರಿಂದ ಉಳಿದ ರಾಜ್ಯಗಳ ಮೇಲೆ ಒತ್ತಡ ಸೃಷ್ಟಿಸಲಿದೆ.
ಇದನ್ನೂ ಓದಿ| ಪೆಟ್ರೋಲ್ ವ್ಯಾಟ್ ತಾನೇ ಕಡಿತಗೊಳಿಸಿದ್ದಾಗಿ ಯಾಮಾರಿಸಿತೇ ಮಹಾರಾಷ್ಟ್ರ ಸರಕಾರ?