Site icon Vistara News

PFI BANNED | ಅಘೋಷಿತ ತುರ್ತು ಪರಿಸ್ಥಿತಿ; ಪ್ರಜಾಪ್ರಭುತ್ವ, ಜನರ ಹಕ್ಕುಗಳಿಗೆ ಹೊಡೆತ ಎಂದ ಎಸ್‌ಡಿಪಿಐ

SDPI

ನವ ದೆಹಲಿ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಮತ್ತು ಅದರ ಎಂಟು ಸಹವರ್ತಿ ಸಂಘಟನೆಗಳನ್ನು ಐದು ವರ್ಷದ ಅವಧಿಗೆ ನಿಷೇಧಿಸಿರುವ ಕೇಂದ್ರ ಸರಕಾರದ ಕ್ರಮದ ಬಗ್ಗೆ ಪಿಎಫ್‌ಐನ ರಾಜಕೀಯ ಮುಖವಾಗಿರುವ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮೊದಲ ಪ್ರತಿಕ್ರಿಯೆಯನ್ನು ನೀಡಿದೆ.

ಈ ನಿಷೇಧವು ಬಿಜೆಪಿ ವಿಧಿಸುತ್ತಿರುವ ʻಅಘೋಷಿತ ತುರ್ತು ಪರಿಸ್ಥಿತಿʼಯ ಒಂದು ಭಾಗ ಎಂದು ಎಸ್‌ಡಿಪಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಸ್‌ಡಿಪಿಐ ರಾಜಕೀಯ ಅಧ್ಯಕ್ಷರಾಗಿರುವ ಎಂ.ಕೆ. ಫೈಝಿ ಅವರು ಹೊರಡಿಸಿರುವ ಹೇಳಿಕೆಯಲ್ಲಿ, ʻʻಪಿಎಫ್‌ಐ ಮೇಲೆ ಐದು ವರ್ಷಗಳ ನಿಷೇಧ ವಿಧಿಸಿರುವುದು ಅಘೋಷಿತ ತುರ್ತು ಪರಿಸ್ಥಿತಿಯ ಒಂದು ಭಾಗ. ಇದು ಈ ದೇಶದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಕ್ರಮವು ಪ್ರಜಾಪ್ರಭುತ್ವ ಮತ್ತು ಜನರ ಹಕ್ಕುಗಳ ಮೇಲಿನ ನೇರ ಹೊಡೆತʼʼ ಎಂದು ಹೇಳಿದ್ದಾರೆ.

ಪಿಎಫ್ಐ ಮತ್ತು ಸಹ ಸಂಘಟನೆಗಳನ್ನು ನಿಷೇಧಿಸಿದ್ದರೂ ಕೇಂದ್ರ ಸರಕಾರ ಸದ್ಯಕ್ಕೆ ಎಸ್‌ಡಿಪಿಐಯನ್ನು ನಿಷೇಧಿಸಿಲ್ಲ.

ಪಿಎಫ್‌ಐ ನಿಷೇಧ ಯಾಕೆ?
ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಅದರ ಸಹಸಂಘಟನೆಗಳಿಗೆ ಕೇಂದ್ರ ಸರಕಾರ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಇವುಗಳನ್ನು ಕಾನೂನುಬಾಹಿರ ಸಂಘಟನೆಗಳು ಎಂದು ಘೋಷಿಸಲಾಗಿದೆ. ರಿಹಾಬ್‌ ಇಂಡಿಯಾ ಫೌಂಡೇಷನ್‌ (ಆರ್‌ಐಎಫ್‌), ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ), ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (ಎಐಐಸಿ) ಸೇರಿದಂತೆ ಏಳು ಇತರ ಸಂಘಟನೆಗಳು ಕೂಡಾ ನಿಷೇಧಿತ ಎಂದು ಕೇಂದ್ರ ಸರಕಾರ ಘೋಷಿಸಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಎರಡು ಬಾರಿ ದೇಶಾದ್ಯಂತ ದಾಳಿಗಳನ್ನು ನಡೆಸಿದ ಎನ್‌ಐಎ ಮತ್ತು ಇತರ ತನಿಖಾ ಏಜೆನ್ಸಿಗಳು ಸಂಗ್ರಹಿಸಿದ ಮಹತ್ವದ ದಾಖಲೆಗಳು, ಈ ಹಿಂದಿನಿಂದಲೂ ಈ ಸಂಘಟನೆಗಳ ಮೇಲೆ ಇದ್ದ ಆಪಾದನೆಗಳನ್ನು ಆಧರಿಸಿ ಈ ನಿಷೇಧವನ್ನು ವಿಧಿಸಲಾಗಿದೆ. ಪಿಎಫ್‌ಐ ಸಂಘಟನೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು, ಹಣಕಾಸು ಸಹಾಯ ಮಾಡುವುದು, ಮಕ್ಕಳು ಮತ್ತು ಯುವಜನರಲ್ಲಿ ಧಾರ್ಮಿಕ ಮೂಲಭೂತವಾದವನ್ನು ಬಿತ್ತಿ ಅನ್ಯ ಧರ್ಮಗಳು ಮತ್ತು ಜನರ ವಿರುದ್ಧ ಎತ್ತಿ ಕಟ್ಟುವುದು, ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದು, ಶಾಂತಿ ಭಂಗ, ಹಿಂಸೆಗೆ ಪ್ರಚೋದನೆ ನೀಡುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದೆ ಎಂಬ ಆಪಾದನೆ ಎದುರಿಸುತ್ತಿದೆ.

ಯಾವೆಲ್ಲ ಸಂಘಟನೆಗಳಿಗೆ ನಿಷೇಧ?
ರಿಹಾಬ್‌ ಇಂಡಿಯಾ ಫೌಂಡೇಷನ್‌ (ಆರ್‌ಐಎಫ್‌)
ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ)
ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (ಎಐಐಸಿ)
ನ್ಯಾಷನಲ್‌ ಕಾನ್ಫೆಡರೇಷನ್‌ ಆಫ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಝೇಷನ್‌ (ಎನ್‌ಸಿಎಚ್‌ಆರ್‌ಒ)
ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌, ಜ್ಯೂನಿಯರ್‌ ಫ್ರಂಟ್‌
ಎಂಪವರ್‌ ಇಂಡಿಯಾ ಫೌಂಡೇಷನ್‌
ರಿಹಾಬ್‌ ಫೌಂಡೇಷನ್‌ ಕೇರಳ

ಯಾವ ಕಾನೂನಿನಡಿ ನಿಷೇಧ?
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ೧೯೬೭ರ ಸೆಕ್ಷನ್‌ ೩ರೊಳಗಿನ ಸಬ್‌ ಸೆಕ್ಷನ್‌ ೧ರ ಅಡಿಯಲ್ಲಿ ಕೇಂದ್ರ ಸರಕಾರವು ಈ ನಿಷೇಧವನ್ನು ಹೇರಿದೆ.

ಇದನ್ನೂ ಓದಿ | ವಿಸ್ತಾರ Explainer | PFI banned | 27 ಕೊಲೆಗಳನ್ನು ನಡೆಸಿತ್ತೇ ನಿಷೇಧಿತ ಸಂಘಟನೆ? ಕೇರಳ ಸರ್ಕಾರ ಹೇಳಿದ್ದೇನು?

Exit mobile version