ನವದೆಹಲಿ: ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ(Physical Abuse) ಎಸಗಿದ್ದ ಕಿಡಿಗೇಡಿಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ದೆಹಲಿಯ ತೀಸ್ ಹಜಾರಿ ಕೋರ್ಟ್ ಈ ಮಹತ್ವ ತೀರ್ಪು ಹೊರಹಾಕಿದೆ.
2022ರಲ್ಲಿ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ತೀವ್ರ ಖಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಿದ್ದ ವೃದ್ಧೆಯ ಕೈಕಾಲು ಕಟ್ಟಿ ಹಾಕಿ 30ವರ್ಷದ ಅಂಕಿತ್ ಎಂಬಾತ ಅತ್ಯಾಚಾರ ಎಸಗಿದ್ದ. ಬಿಟ್ಟುಬಿಡುವಂತೆ ಎಷ್ಟೇ ಗೋಗರೆದರೂ ಕೇಳದ ಅಂಕಿತ್ ಮೃಗದಂತೆ ಆಕೆ ಮೈಮೇಲೆ ಎರಗಿದ್ದ. ಬಳಿಕ ವೃದ್ಧೆ ನೀಡಿದ ದೂರಿನ ಮೇರೆಗೆ ಅಂಕಿತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಪರಾಧಿಯು ವೃದ್ಧೆಯ ಮನೆಗೆ ಪ್ರವೇಶಿಸಿದಾಗ ಆಕೆ ಅನಾರೋಗ್ಯದಿಂದ ಹಾಸಿಗೆ ಮೇಲೆ ಮಲಗಿದ್ದಳು. ಆತ ವೃದ್ಧೆಯನ್ನು ಥಳಿಸಿ, ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ.
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆಂಚಲ್ ಅವರು ವೃದ್ಧೆಯ ಸಾಕ್ಷ್ಯವನ್ನು ಗಮನಿಸಿದ್ದು, ಅಂಕಿತ್‌ಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ಘಟನೆಯ ನಂತರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಮುಖ, ಕೈ ಮತ್ತು ಎದೆಯ ಮೇಲೆ ಗಾಯಗಳಾಗಿರುವುದು ಕಂಡುಬಂದವು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಇನ್ನು ಅಂಕಿತ್ ಅಲಿಯಾಸ್ ಮೊಗ್ಲಿ ಅತ್ಯಾಚಾರ, ಮನೆ ಅತಿಕ್ರಮಣ, ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆಯೂ ಇಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. 85 ವರ್ಷದ ವೃದ್ಧೆಯ ಮೇಲೆ 35 ವರ್ಷದ ಕಿಡಿಗೇಡಿಯೊಬ್ಬ ಬರ್ಬರವಾಗಿ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯ ಮೃತಪಟ್ಟಿರುವ ಹೀನಕೃತ್ಯ ಉತ್ತರಪ್ರದೇಶದ ಬರೇಲಿಯ ಹಫೀಜ್‌ಗಂಜ್‌ನಲ್ಲಿ ನಡೆದಿದೆ. 85 ವರ್ಷದ ಮಹಿಳೆಯೊಬ್ಬರು ಅತ್ಯಾಚಾರ(Physical Abuse)ಕ್ಕೊಳಗಾದ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧೆಯ ನೆರೆಮನೆಯಲ್ಲಿ ವಾಸಿಸುವ ರಾಕೇಶ್ ಎಂದು ಗುರುತಿಸಲಾದ 35 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತಿ ಮತ್ತು ಮಗ ಮೃತಪಟ್ಟ ನಂತರ ಸಂತ್ರಸ್ತೆ ಒಂಟಿಯಾಗಿ ವಾಸವಾಗಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ. ಮಹಿಳೆಯ ಸಹೋದರ ಮತ್ತು ಅತ್ತಿಗೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಸೊಸೆ ಅವರೊಂದಿಗೆ ವಾಸಿಸುತ್ತಿದ್ದಾರೆ. ಸೊಸೆಯ ಪ್ರಕಾರ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂತ್ರಸ್ತೆಯ ಮನೆಗೆ ಹೋದಾಗ, ರಾಕೇಶ್ ತನ್ನ ಅತ್ತೆಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು ಎಂದು ಆರ್ಯ ಹೇಳಿದರು.
ಬಳಿಕ ಆಕೆ ಆತನಿಗೆ ಎಚ್ಚರಿಕೆ ನೀಡಿದಾಗ ಆರೋಪಿ ಪರಾರಿಯಾಗಿದ್ದು, ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಈ ಭೀಕರ ಕೃತ್ಯದ ಬಳಿಕ ವೃದ್ಧೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮದ್ಯವ್ಯಸನಿಯಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಆರ್ಯ ತಿಳಿಸಿದ್ದಾರೆ. ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: Akshay Kumar: ನಾನು ಸತ್ತೇ ಹೋದೆ ಎಂಬ ರೀತಿಯಲ್ಲಿ ಸಂತಾಪದ ಸಂದೇಶ ಕಳಿಸುತ್ತಾರೆ ಎಂದು ಗರಂ ಆದ ಅಕ್ಷಯ್ ಕುಮಾರ್!