Site icon Vistara News

Physical abuse: ಲೈಂಗಿಕ ಕಿರುಕುಳ ಕೇಸ್‌; ಅರ್ಜುನ ಪ್ರಶಸ್ತಿ ಪುರಸ್ಕೃತ ಅಧಿಕಾರಿ ವಜಾ

ನವದೆಹಲಿ: ಲೈಂಗಿಕ ಕಿರುಕುಳ (Physical abuse) ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಹಿನ್ನೆಲೆ ಅರ್ಜುನ ಪ್ರಶಸ್ತಿ ಪುರಸ್ಕೃತ (Arjuna Awardee) ಕೇಂದ್ರೀಯ ಮೀಸಲು ಪಡೆಯ(CRPF) ಹಿರಿಯ ಅಧಿಕಾರಿಯೊಬ್ಬರನ್ನು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಸಿಆರ್‌ಪಿಎಫ್‌ನ ಡೆಪ್ಯೂಟಿ ಇನ್‌ಸ್ಪೆಕ್ಟರ್‌ ಜನರಲ್‌ (DIG) ಶ್ರೇಣಿಯ ಕ್ರೀಡಾ ವಿಭಾಗದ ಅಧಿಕಾರಿಯಾಗಿರುವ ಖಂಜನ್‌ ಸಿಂಗ್‌ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವಿಚಾರಣೆ ನಡೆಸಿದ ಸಿಆರ್‌ಪಿಎಫ್‌ ಖಂಜನ್‌ ಸಿಂಗ್‌ ಅವರನ್ನು ದೋಷಿ ಎಂದು ಘೋಷಿಸಿದೆ.

ಈ ಕುರಿರು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಖಂಜನ್‌ ಸಿಂಗ್‌ ವಿರುದ್ಧ ಆರೋಪ ಸಾಭೀತಾಗುತ್ತಿದ್ದಂತೆ ಸಿಆರ್‌ಪಿಎಫ್‌ ಕೇಂದ್ರ ಲೋಕ ಸೇವಾ ಆಯೋಗ(UPSC) ಗೆ ತನಿಖಾ ವರದಿ ಸಲ್ಲಿಸಿ ತಕ್ಷಣ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಮನವಿ ಮಾಡಿತ್ತು. ಖಂಜನ್‌ ಸಿಂಗ್‌ ವಿರುದ್ಧ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗಿದೆ. ಬಳಿಕ ಅವರನ್ನು ವಜಾಗೊಳಿಸುವಂತೆ UPSC ಕೂಡ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಗೃಹ ಸಚಿವಾಲಯವೂ ಇದಕ್ಕೆ ಅನುಮತಿ ಸೂಚಿಸಿತ್ತು. ಹೀಗಾಗಿ ಸಿಆರ್‌ಪಿಎಫ್‌ ಖಂಜನ್‌ ಸಿಂಗ್‌ ಅವರನ್ನು ವಜಾಗೊಳಿಸಿ ನೋಟಿಸ್‌ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿದ್ದ ಖಂಜನ್‌ ಸಿಂಗ್‌ ತಮ್ಮ ವಜಾದ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಆರ್‌ಪಿಎಫ್‌ ಅವರಿಗೆ ನೀಡಿರುವ ನೋಟಿಸ್‌ಗೆ 15 ದಿನದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಇನ್ನು ಖಂಜನ್‌ ಸಿಂಗ್‌ ವಿರುದ್ಧ ಎರಡು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ಇದೀಗ ಒಂದು ಪ್ರಕರಣದಲ್ಲಿ ಅವರು ದೋಷಿ ಎಂದು ಸಾಬೀತಾಗಿದ್ದು, ಮತ್ತೊಂದು ಪ್ರಕರಣದ ತನಿಖೆ ಮುಂದುವರಿದೆ ಎಂದು ಸಿಆರ್‌ಪಿಎಫ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಖಂಜನ್‌ ಸಿಂಗ್‌ ಸಿಆರ್‌ಪಿಎಫ್‌ನ ಕ್ರೀಡಾ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮುನ್ನ 1986ರಲ್ಲಿ ಸಿಯೋಲ್‌ ಏಷಿಯನ್‌ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ರಜತ ಪದಕ ಗೆದ್ದುಕೊಂಡಿದ್ದರು. 1951ರ ನಂತರ ಈಜು ಸ್ಪರ್ಧೆಯಲ್ಲ ಭಾರತ ಗೆದ್ದ ಮೊದಲ ಪದಕ ಆದಾಗಿತ್ತು. ಇದಾದ ಬಳಿಕ ಅವರ ಸೇವೆಯನ್ನು ಗುರುತಿಸಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇನ್ನು ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬರುತ್ತಿದ್ದಂತೆ ಈ ಹಿಂದೆಯೇ ಖಂಜನ್‌ ಸಿಂಗ್‌ ಅದನ್ನು ನಿರಾಕರಿಸಿದ್ದರು. ತಮ್ಮ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದರು.

ಇದನ್ನೂ ಓದಿ:Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

ಸಿಆರ್‌ಪಿಎಫ್‌ನಲ್ಲಿ 3.25ಲಕ್ಷಕ್ಕೂ ‍ಅಧಿಕ ಸಿಬ್ಬಂದಿಗಳಿದ್ದು, 1986ರಲ್ಲಿ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಯಿತು. ಪ್ರಸ್ತುತ ಒಟ್ಟು ಆರು ಮಹಿಳಾ ಬೆಟಾಲಿನ್‌ ಇದ್ದು, ಸುಮಾರು 8000ಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಅಲ್ಲದೇ ಕ್ರೀಡಾ ಹಾಗೂ ಆಡಳಿತ ವಿಭಾಗದಲ್ಲೂ ಮಹಿಳಾ ಸಿಬ್ಬಂದಿಯನ್ನು ಹೊಂದಿದೆ.

Exit mobile version