ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ನಡುವೆ ಇರುವ ಆತ್ಮೀಯತೆ ಆಗಾಗ ನಮ್ಮ ಕಣ್ಣಿಗೆ ಕಾಣಿಸುತ್ತಿರುತ್ತದೆ. ಇದೀಗ ಜಪಾನ್ ಪ್ರವಾಸದಲ್ಲಿರುವ ಇಬ್ಬರೂ ದಿಗ್ಗಜರು ಮತ್ತೊಮ್ಮೆ ತಮ್ಮ ನಡುವಿನ ಆಪ್ತತೆಯನ್ನು ತೋರಿಸಿದ್ದಾರೆ. ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ 7 ಶೃಂಗಸಭೆ (G7 Summit)ಯಲ್ಲಿ ನರೇಂದ್ರ ಮೋದಿ, ಜೋ ಬೈಡೆನ್ ಸೇರಿ ಇತರ ವಿಶ್ವ ನಾಯಕರು ಪಾಲ್ಗೊಂಡಿದ್ದಾರೆ.
ಅಲ್ಲಿ ಜಿ 7ಶೃಂಗಸಭೆಯ 6ನೇ ವರ್ಕಿಂಗ್ ಸೆಷನ್ಸ್ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಳಿದ ನಾಯಕರ ಜತೆ ವೇದಿಕೆ ಮೇಲೆ ಕುಳಿತಿರುತ್ತಾರೆ. ಅಷ್ಟೊತ್ತಿಗೆ ಜೋ ಬೈಡೆನ್ ಅವರು ಅಲ್ಲಿಗೇ ಬರುತ್ತಾರೆ. ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಮಾತಾಡಿಸಲೆಂದು, ಅವರನ್ನು ದಿಟ್ಟಿಸುತ್ತಲೇ ಬರುತ್ತಾರೆ. ಆಗ ಪ್ರಧಾನಿ ಮೋದಿ ಎದ್ದು ನಿಲ್ಲುತ್ತಾರೆ. ಇಬ್ಬರೂ ಅಪ್ಪಿಕೊಂಡು, ಏನೋ ಒಂದಷ್ಟು ಮಾತಾಡಿಕೊಳ್ಳುತ್ತಾರೆ. ಬಳಿಕ ಪ್ರಧಾನಿ ಮೋದಿ ಕುರ್ಚಿ ಮೇಲೆ ಕುಳಿತುಕೊಂಡರೆ, ಜೋ ಬೈಡೆನ್ ಅಲ್ಲಿಂದ ವಾಪಸ್ ತೆರಳುತ್ತಾರೆ. ಈ ವಿಡಿಯೊ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮೇ 19ರಂದು ಜಪಾನ್ನ ಹಿರೋಶಿಮಾವನ್ನು ತಲುಪಿದ್ದಾರೆ. ಅಲ್ಲಿಗೆ ತೆರಳಿದ ಅವರನ್ನು ಅನಿವಾಸಿ ಭಾರತೀಯರು ಭರ್ಜರಿಯಾಗಿ ಸ್ವಾಗತಿಸಿದರು. ಜಿ7 ಶೃಂಗಸಭೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಂತೆ ಜಪಾನ್ ಪ್ರಧಾನಮಂತ್ರಿ ಫ್ಯುಮಿಯೊ ಕಿಶಿಡಾ ಅವರು ಬರಮಾಡಿಕೊಂಡರು. ಹಿರೋಶಿಮಾದಲ್ಲಿರುವ ಗಾಂಧಿ ಪ್ರತಿಮೆಗೆ ಅವರು ತಲೆಬಾಗಿ ನಮಿಸಿದರು. ವಿವಿಧ ದೇಶಗಳ ಗಣ್ಯ ನಾಯಕರೊಂದಿಗೆ ತಾವು ಮಾತುಕತೆ ನಡೆಸಿದ ಫೋಟೋಗಳನ್ನು ಪ್ರಧಾನಿ ಮೋದಿಯವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೇ 21ರವರೆಗೆ ಪ್ರಧಾನಿ ಮೋದಿ ಜಪಾನ್ನಲ್ಲಿ ಇರಲಿದ್ದಾರೆ.
ಉಕ್ರೇನ್ ಅಧ್ಯಕ್ಷರ ಭೇಟಿ?
ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಅವರೂ ಕೂಡ ಇಂದು ಜಪಾನ್ನ ಹಿರೋಶಿಮಾಕ್ಕೆ ತೆರಳಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದೂ ಹೇಳಲಾಗಿದೆ. ಹಾಗೊಮ್ಮೆ ಪ್ರಧಾನಿ ಮೋದಿ ಮತ್ತು ಝೆಲೆನ್ಸ್ಕಿ ನಡುವೆ ದ್ವಿಪಕ್ಷೀಯ ಸಭೆ ನಡೆದಿದ್ದೇ ಆದರೆ ಖಂಡಿತ ಮಹತ್ವ ಪಡೆದುಕೊಳ್ಳಲಿದೆ. ಅದೂ ಕೂಡ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ಪ್ರಧಾನಿ ಮೋದಿ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ನಡೆಯುತ್ತಿರುವ ಮೊದಲ ಮಾತುಕತೆಯೂ ಆಗಲಿದೆ. ಉಕ್ರೇನ್ ಮೇಲೆ ಯುದ್ಧ ಮಾಡಬೇಡಿ ಎಂದು ವಿಶ್ವದ ಹಲವು ದೇಶಗಳು ರಷ್ಯಾದ ಮೇಲೆ ಒತ್ತಡ ಹೇರಿದರೂ ರಷ್ಯಾ ಮಾತು ಕೇಳಲಿಲ್ಲ. ಆ ಹೊತ್ತಲ್ಲಿ ಅಮೆರಿಕ ಭಾರತದ ಪ್ರಧಾನಿ ಮೋದಿಯವರ ಹೆಸರನ್ನು ಪದೇಪದೆ ಉಲ್ಲೇಖ ಮಾಡಿತ್ತು. ಯುದ್ಧ ನಿಲ್ಲಿಸಲು, ಈ ಸಂಬಂಧ ರಷ್ಯಾ ಅಧ್ಯಕ್ಷ ಪುಟಿನ್ರಿಗೆ ತಿಳಿಹೇಳಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ ಎಂದು ಹೇಳಿತ್ತು.