ನವ ದೆಹಲಿ: ಜಗತ್ತಿನ ಸರ್ಟಿಫಿಕೇಟ್‌ಗೆ ನಾವೇಕೆ ಕಾಯಬೇಕು? ನಾವು ಹೇಗಿದ್ದೇವೋ ಹಾಗೇ ನಮ್ಮನ್ನು ಸ್ವೀಕರಿಸಿ. ನಮ್ಮ ಮಾನದಂಡಗಳನ್ನು ನಾವೇ ರೂಪಿಸಿಕೊಳ್ಳೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲಿನಿಂದ ನುಡಿದರು.
ಶತಮಾನಗಳ ಗುಲಾಮಿ ಮನಸ್ಥಿತಿಯಿಂದ ನಾವು ಹೊರಬರಬೇಕಿದೆ. ಅದಕ್ಕಾಗಿ ನಾವು ಹಲವು ಯೋಜನೆಗಳನ್ನು ರೂಪಿಸಿ ಮುನ್ನಡೆಸುತ್ತಿದ್ದೇವೆ. ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದೆವು. ಸಾಕಷ್ಟು ಎಚ್ಚರದಿಂದ, ಕೋಟಿ ಕೋಟಿ ಜನರ ವಿಚಾರ ಮಂಥನದಿಂದ, ನಮ್ಮ ದೇಶದ ಮಣ್ಣಿನ ಸಂಸ್ಕೃತಿಯಿಂದ ರೂಪಿಸಿದ್ದೇವೆ. ಇದು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಿ ಪಡೆಯುವ ಸಾಮರ್ಥ್ಯವನ್ನು ನಮಗೆ ನೀಡಲಿದೆ.
ನಮ್ಮ ಭಾಷೆಗಳ ಬಗ್ಗೆ ಹೆಮ್ಮೆ ಇರಬೇಕು. ಅದು ನಮ್ಮ ಪೂರ್ವಜರು ನಮಗೆ ನೀಡಿದ್ದು. ನಮ್ಮ ಬದುಕಿನ ಸಾರವನ್ನು ಒಳಗೊಂಡದ್ದು. ನಮ್ಮಲ್ಲಿ ಎಷ್ಟೋ ಪ್ರತಿಭೆಗಳಿವೆ. ಅವುಗಳೇ ಇಂದು ಗ್ರಾಮಗ್ರಾಮದಲ್ಲೂ ಹೊಸ ಆವಿಷ್ಕಾರಗಳೊಂದಿಗೆ, ಡಿಜಿಟಲ್ ಭಾರತವನ್ನು ಕಟ್ಟುತ್ತಿವೆ. ಜಗತ್ತು ಸಮಗ್ರ ಸ್ವಾಸ್ಥ್ಯದ ಬಗ್ಗೆ ಮಾತನಾಡುವಾಗ, ಅದರ ದೃಷ್ಟಿ ನಮ್ಮ ಯೋಗದ ಕಡೆಗೆ ಹರಿಯುತ್ತದೆ. ಭಾರತದ ಸಮಗ್ರ ಜೀವನಶೈಲಿಯತ್ತ ನೋಡುತ್ತದೆ. ನಾವು ಪ್ರಕೃತಿಯ ಜತೆ ಬದುಕಿದವರು, ಪ್ರಕೃತಿಯನ್ನು ಪ್ರೀತಿಸಿದವರು. ಗ್ಲೋಬಲ್ ವಾರ್ಮಿಂಗ್ ಸಮಸ್ಯೆಗೆ ನಮ್ಮ ಪರಿಸರಸ್ನೇಹಿ ಜೀವನಶೈಲಿಯಲ್ಲಿ ಉತ್ತರವಿದೆ. ನಮ್ಮ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಮ್ಮ ನೆಲದಲ್ಲಿ ನಾವು ಗಟ್ಟಿಯಾಗಿ ನಿಂತಾಗ ನಾವು ಜಗತ್ತನ್ನೂ ಅಧರಿಸಿ ಹಿಡಿಯುವ ಶಕ್ತಿಯನ್ನು ಹೊಂದುತ್ತೇವೆ. ನಮ್ಮ ಜನ ತಮ್ಮ ಸಣ್ಣ ಸಣ್ಣ ಜಮೀನುಗಳಲ್ಲಿ ಕಿರುಧಾನ್ಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರೇ ನಮ್ಮ ಅನ್ನದಾತರಾಗಿದ್ದಾರೆ.
ನಮ್ಮ ಜನತೆ ನದಿಯನ್ನು ಮಾತೆ ಎಂದವರು, ಶಿಲೆಯಲ್ಲಿ ಶಂಕರನನ್ನು ಕಂಡವರು. ನಾವು ಜಗತ್ತಿಗೆ ವಸುಧೈವ ಕುಟುಂಬಕಂ ಮಂತ್ರ ನೀಡಿದ್ದೇವೆ. ಏಕಂ ಸತ್ ವಿಪ್ರಾ ಬಹುಧಾ ವದಂತಿ ಎಂದಿದ್ದೇವೆ. ತಾನೇ ದೊಡ್ಡವನು ಎಂದು ಹೋರಾಡುವವರಿಗೆ ಇದರಲ್ಲಿ ಉತ್ತರವಿದೆ. ಜನಕಲ್ಯಾಣದಿಂದ ಜಗಕಲ್ಯಾಣದತ್ತ ಸಾಗುವುದು ನಮ್ಮ ದಾರಿಯಾಗಿದೆ. ನಮ್ಮ ವಿವಿಧತೆಯನ್ನು ನಾವು ಸೆಲೆಬ್ರೇಟ್ ಮಾಡಬೇಕು. ನಮ್ಮ ವೈವಿಧ್ಯ ನಮ್ಮ ಶ್ರೀಮಂತಿಕೆ. ʼಇಂಡಿಯಾ ಫಸ್ಟ್ʼ ಎಂಬುದು ನಮ್ಮ ಮಂತ್ರವಾಗಲಿ.
ಇದನ್ನೂ ಓದಿ: ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷ
ನಾವು ನೋವಿನಿಂದ ಹೇಳಬೇಕಾಗಿದೆ. ಇಂದು ನಮ್ಮ ದೇಶವಾಸಿಗಳ ಮುಂದೆ, ಈ ಕೆಂಪು ಕೋಟೆಯ ಮೇಲಿನಿಂದ ಇದನ್ನ ಹೇಳದೆ ಇನ್ನೆಲ್ಲಿ ಹೇಳಲು ಸಾಧ್ಯ? ನಮ್ಮಲ್ಲಿ ನಾರಿಯನ್ನು ಅಪಮಾನ ಮಾಡುವ ವಿಕೃತಿಗಳು ಬೇರೂರಿವೆ. ನಮ್ಮ ಸ್ವಭಾವದಿಂದ, ಸಂಸ್ಕಾರದಿಂದ ಸ್ತ್ರೀಯನ್ನು ಅಪಮಾನ ಮಾಡುವ ಎಲ್ಲ ವರ್ತನೆ, ಮಾತುಗಳನ್ನು ನಾವು ನಿವಾರಿಸಿಕೊಳ್ಳಲೇಬೇಕು. ಲಿಂಗ ಸಮಾನತೆ ನಮ್ಮಲ್ಲಿ ನೆಲೆಯಾಗಬೇಕು. ಮಗ- ಮಗಳನ್ನು ಒಂದೇ ರೀತಿಯಲ್ಲಿ ಕಾಣಬೇಕು.
ಇಂದು ಮಹರ್ಷಿ ಅರವಿಂದರ ಜಯಂತಿ ಕೂಡ ಆಗಿದೆ. ಅವರು ʼಸ್ವದೇಶಿಯಿಂದ ಸ್ವರಾಜ್ಯ, ಸ್ವರಾಜ್ಯದಿಂದ ಸುರಾಜ್ಯʼ ಎಂಬ ಮಂತ್ರವನ್ನು ನೀಡಿದರು. ಇದಕ್ಕಾಗಿ ʼಆತ್ಮನಿರ್ಭರ ಭಾರತʼ ಪ್ರತಿಯೊಬ್ಬ ಪ್ರಜೆಯ ಪಣ ಆಗಬೇಕು. ಆತ್ಮನಿರ್ಭರ ಭಾರತವು ಸಮಾಜದ ಜನಾಂದೋಲನ. 75 ವರ್ಷಗಳ ಬಳಿಕ ಮೊದಲ ಬಾರಿಗೆ ಕೆಂಪು ಕೋಟೆಯಿಂದ ಸ್ವದೇಶಿ ತೋಪುಗಳಿಂದಲೇ ಧ್ವಜವಂದನೆ ನಡೆದಿದೆ. ಇದನ್ನು ನನಸಾಗಿಸಿದ ನಮ್ಮ ದೇಶದ ಸೇನಾಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ. ನಾವು ಸಣ್ಣ ಸಣ್ಣ ವಸ್ತುಗಳಿಗೂ ವಿದೇಶಿ ಅವಲಂಬನೆ ನಿಲ್ಲಿಸಿದರೆ ಆತ್ಮನಿರ್ಭರ ಭಾರತವು ಸಂಪೂರ್ಣ ನಿಜವಾಗುತ್ತದೆ.
ಇಂದು ಭಾರತವು ಜಗತ್ತಿನ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗುತ್ತಿದೆ. ಒಂದು ಲಕ್ಷ ಕೋಟಿ ರೂಪಾಯಿಯ ಪಿಎಲ್‌ಐ ಸ್ಕೀಮ್ ನಮ್ಮ ಉದ್ಯಮಿಗಳನ್ನು ಸ್ವಾವಲಂಬಿಗಳನ್ನಾಗಿಸಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು ನಮ್ಮಲ್ಲೇ ತಯಾರಾಗುತ್ತಿವೆ. ನಮ್ಮ ಮೆಟ್ರೋ, ನಮ್ಮ ವಂದೇ ಭಾರತ್ ಟ್ರೇನು ವಿಶ್ವದ ಆಕರ್ಷಣೆಯಾಗುತ್ತಿದೆ. ನಮ್ಮ ವಿದ್ಯುತ್ ಕ್ಷೇತ್ರದಲ್ಲಿ ನಾವು ಯಾರಿಗೂ ಅವಲಂಬಿಯಾಗಬೇಕಿಲ್ಲ. ಸೋಲಾರ್ ವಿದ್ಯುತ್, ಸುಸ್ಥಿರ ವಿದ್ಯುತ್, ಮಿಷನ್ ಹೈಡ್ರೋಜನ್, ಪವರ್ ಪ್ಲಾಂಟ್‌ಗಳು, ಎಲೆಕ್ಟ್ರಿಕ್ ವಾಹನಗಳು ಇದೆಲ್ಲದರಲ್ಲೂ ಆತ್ಮನಿರ್ಭರ ಭಾರತವಾಗುತ್ತಿದ್ದೇವೆ. ಸಾವಯವ ಕೃಷಿಯು ಆತ್ಮನಿರ್ಭರಕ್ಕೆ ಕೊಡುಗೆ ನೀಡುತ್ತಿದೆ. ರಸಗೊಬ್ಬರಗಳಿಂದ ನಮ್ಮ ಕೃಷಿಗೆ ಮುಕ್ತಿ ನೀಡಬೇಕಿದೆ. ಹಸಿರು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಆತ್ಮನಿರ್ಭರ ಭಾರತ ಕಟ್ಟುವಲ್ಲಿ ನೆರವಾಗುವಂತೆ ನಾನು ಖಾಸಗಿ ವಲಯಕ್ಕೂ ಆಹ್ವಾನ ನೀಡುತ್ತಿದ್ದೇನೆ.
ಜೈ ಅನುಸಂಧಾನ್ ಎಂದರೆ ಆವಿಷ್ಕಾರಗಳ ನೆಲೆಯಲ್ಲಿ ನಾವು ತುಂಬಾ ಮುಂದುವರಿಯುತ್ತಿದ್ದೇವೆ. ಡಿಜಿಟಲ್ ಪಾವತಿಯಲ್ಲಿ ಶೇ.40ರಷ್ಟು ಸಾಧನೆ ಮಾಡಿದ್ದೇವೆ. ಬೇರೆ ಯಾವ ದೇಶವೂ ಇದನ್ನು ಮಾಡಿಲ್ಲ. ಭಾರತದ ನಾಲ್ಕು ಲಕ್ಷ ಕಾಮನ್ ಸರ್ವಿಸ್ ಸೆಂಟರ್‌ಗಳು ಗ್ರಾಮಗಳಲ್ಲಿ ನೆಲೆಯಾಗಿವೆ. ಇದು ಗ್ರಾಮ ಭಾರತದ ಯುವಜನತೆಯನ್ನು ಮುನ್ನೆಲೆಗೆ ತಂದಿದೆ. ಇದು ದೇಶದ ಹೆಮ್ಮೆ. ಇದು ಟೆಕ್ನಾಲಜಿ ಹಬ್ ಆಗಬಲ್ಲ ಭಾರತದ ಸಾಮರ್ಥ್ಯ. 5ಜಿ, ಆಪ್ಟಿಕಲ್ ಫೈಬರ್, ಸೆಮಿಕಂಡಕ್ಟರ್‌ಗಳ ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿದೆ.
ಮೂರು ಕ್ಷೇತ್ರಗಳಲ್ಲಿ ಕ್ರಾಂತಿ ಡಿಜಿಟಲ್‌ನಿಂದ ಆಗಲಿದೆ- ಶಿಕ್ಷಣ, ಆರೋಗ್ಯ ಹಾಗೂ ಸರ್ವಾಂಗೀಣ ಜೀವನ- ಇವುಗಳಲ್ಲಿ ಡಿಜಿಟಲ್ ಕ್ರಾಂತಿಯು ಮುಂದಿನ ದಿನಗಳಲ್ಲಿ ಭಾರತದಲ್ಲಿ ಆಗಲಿದೆ ಎಂದು ಮೋದಿ ಉಲ್ಲೇಖಿಸಿದರು.
ಇದನ್ನೂ ಓದಿ: Independence Day | ಕೆಂಪು ಕೋಟೆ ಮೇಲೆ ನಿಂತು ಕುಟುಂಬ ರಾಜಕಾರಣ ವಿರುದ್ಧ ಗುಡುಗಿದ ಮೋದಿ