ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸ (PM Modi US Visit) ಕೈಗೊಂಡಿರುವುದು ಭಾರತಕ್ಕೆ ಹಲವು ದೃಷ್ಟಿಯಿಂದ ನೆರವಾಗಿದೆ. ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದಲ್ಲಿ ಯೋಗ, ಅಮೆರಿಕ ಸಂಸತ್‌ನಲ್ಲಿ ಭಾರತದ ಪ್ರಧಾನಿಗೆ ಆದರದ ಸ್ವಾಗತ ಸೇರಿ ಹಲವು ರೀತಿಯಲ್ಲಿ ಗೌರವ ನೀಡಲಾಗಿದೆ. ಇದರ ಬೆನ್ನಲ್ಲೇ, ಮೋದಿ ಅಮೆರಿಕ ಭೇಟಿಯು ಭಾರತದ ರಕ್ಷಣಾ ಕ್ಷೇತ್ರದ ಬಲವರ್ಧನೆಗೂ ನೆರವಾಗಿದೆ. ಹೌದು, ಭಾರತಕ್ಕೆ ಸ್ಟ್ರೈಕರ್ ಶಸ್ತ್ರಸಜ್ಜಿತ ವಾಹನ ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ಅಮೆರಿಕ ಆಫರ್ ನೀಡಿದೆ.
ಭಾರತ ಹಾಗೂ ಅಮೆರಿಕದ ರಕ್ಷಣಾ ಸಹಕಾರ ಒಪ್ಪಂದ ಅಡಿಯಲ್ಲಿ ಭಾರತಕ್ಕೆ ಎಂಟು ಚಕ್ರಗಳ ಶಸ್ತ್ರಸಜ್ಜಿತ ವಾಹನಗಳಾದ ಸ್ಟ್ರೈಕರ್, ಎಂ777 ಹೌವಿಟ್ಜರ್ ಗನ್‌ಗಳ ನವೀಕರಣ (Upgradation), ಎಂಕ್ಯೂ-9 ರೀಪರ್ ಡ್ರೋನ್‌ಗಳ ಹಾಗೂ ಭಾರತದಲ್ಲಿಯೇ ಜಿಇ-ಎಫ್414 ಯುದ್ಧವಿಮಾನಗಳ ಎಂಜಿನ್‌ಗಳನ್ನು ಉತ್ಪಾದನೆ ಮಾಡಲು ಶೇ.100ರಷ್ಟು ತಂತ್ರಜ್ಞಾನದ ವರ್ಗಾವಣೆಗೆ ಅಮೆರಿಕ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಹಕಾರ ಸಂಬಂಧವು ಇನ್ನಷ್ಟು ವೃದ್ಧಿಯಾಗಲಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆ, ಅಭಿವೃದ್ಧಿಯ ದಿಸೆಯಲ್ಲೂ ಮೋದಿ ಅವರು ಮತ್ತೊಂದು ಮಹತ್ವದ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಭಾರತದಲ್ಲಿ ಚಿಪ್ ಘಟಕ ಸ್ಥಾಪನೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಗೆ ಮೈಕ್ರಾನ್ ಕಂಪನಿ ಜತೆ 2.7 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನೂ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: PM Modi US Visit: ಮೋದಿ ಅಮೆರಿಕ ಭೇಟಿ ಸಕ್ಸೆಸ್; ಭಾರತೀಯರಿಗೆ ಸಿಗಲಿವೆ ಎಚ್-1B ವೀಸಾ, ಹೆಚ್ಚಿನ ಉದ್ಯೋಗ
ಭಾರತಕ್ಕೆ ಸಿಗಲಿವೆ ವೀಸಾ, ಉದ್ಯೋಗ
“ಮೋದಿ ಅವರು ಅಮೆರಿಕ ಭೇಟಿ ನೀಡಿದ ಬಳಿಕ ಭಾರತೀಯರು ಅಮೆರಿಕದಲ್ಲಿ ಸುಲಭವಾಗಿ ಜೀವನ ಸಾಗಿಸುವ ದಿಸೆಯಲ್ಲಿ ನಿಯಮ ಬದಲಾವಣೆಗೆ ಜೋ ಬೈಡೆನ್ ಸರ್ಕಾರ ನಿರ್ಧರಿಸುವುದು. ಎಚ್-1B ವೀಸಾ ನೀಡುವುದು, ವೀಸಾ ನಿಯಮ ಸರಳಗೊಳಿಸುವುದು, ಕಾರ್ಮಿಕರು ಸೇರಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿರುವ ಭಾರತೀಯರು ಅಮೆರಿಕದಲ್ಲಿಯೇ ನೆಲೆಸುವುದು ಹಾಗೂ ಅವರಿಗೆ ವೀಸಾ ತೊಡಕಾಗದಂತೆ ನೋಡಿಕೊಳ್ಳುವುದು ಸೇರಿ ಹಲವು ದಿಸೆಯಲ್ಲಿ ಭಾರತದ ಅನುಕೂಲವಾಗುವ ರೀತಿ ನಿಯಮ ರೂಪಿಸುವುದು ಬೈಡೆನ್ ಸರ್ಕಾರದ ಉದ್ದೇಶ” ಎಂದು ವರದಿಯೊಂದು ತಿಳಿಸಿದೆ.