Site icon Vistara News

PM Modi US Visit: ಮೋದಿ ಭಾರತದಲ್ಲಿ ಭಯವಿಲ್ಲದೆ ಬದುಕುತ್ತಿದ್ದೇನೆ: ಅಮೆರಿಕ ಸಂಸದೆಗೆ ಮುಸ್ಲಿಂ ನಾಯಕನ ತಿರುಗೇಟು

atif rasheed bjp leader

ನ್ಯೂಯಾರ್ಕ್‌: ಪ್ರಧಾನಿ ಮೋದಿಯವರ (Narendra Modi) ಆಡಳಿತದಲ್ಲಿ ನಾನು ಭಯವಿಲ್ಲದೆ ಮುಕ್ತವಾಗಿ ಬದುಕುತ್ತಿದ್ದೇನೆ ಎಂದು ಭಾರತೀಯ ಮುಸ್ಲಿಂ ನಾಯಕರೊಬ್ಬರು ಅಮೆರಿಕ ಸಂಸದೆಯೊಬ್ಬಳ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ (PM Modi US Visit) ಹಿನ್ನೆಲೆಯಲ್ಲಿ ಈ ಟೀಕೆ- ತಿರುಗೇಟು ನಡೆದಿದೆ.

ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನುದ್ದೇಶಿಸಿ ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದು, ಇದನ್ನು ಯುಎಸ್ ಡೆಮಾಕ್ರಟಿಕ್ ಪಾರ್ಟಿಯ ಇಬ್ಬರು ಮುಸ್ಲಿಂ ಕಾಂಗ್ರೆಸ್ ಸದಸ್ಯೆಯರು, ʼʼಮೋದಿ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡಿದೆʼ’ ಎಂದು ಹೇಳಿ ಬಹಿಷ್ಕರಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಉಪಾಧ್ಯಕ್ಷ ಅತೀಫ್ ರಶೀದ್‌, ʼʼನಿಮ್ಮ ದ್ವೇಷದ ಅಜೆಂಡಾದ ಅಡಿಯಲ್ಲಿ ನೀವು ಭಾರತದ ತಪ್ಪು ಚಿತ್ರವನ್ನು ತೋರಿಸುತ್ತಿದ್ದೀರಿʼʼ ಎಂದು ಕಠಿಣವಾಗಿ ಟ್ವೀಟ್‌ ಮಾಡಿದ್ದಾರೆ.

“ನಾನು ಭಾರತದ ಧಾರ್ಮಿಕ ಅಲ್ಪಸಂಖ್ಯಾತರ ಪಂಗಡಕ್ಕೆ ಸೇರಿದವನು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಭಾರತದಲ್ಲಿ ನನ್ನ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಗುರುತಿನೊಂದಿಗೆ ನಾನು ಮುಕ್ತವಾಗಿ ಬದುಕುತ್ತಿದ್ದೇನೆ. ಇಲ್ಲಿನ ಪ್ರತಿಯೊಂದು ಸಂಪನ್ಮೂಲದಲ್ಲಿಯೂ ನನಗೆ ಸಮಾನ ಪಾಲು ಇದೆ. ಭಾರತದಲ್ಲಿ ನನಗೆ ಬೇಕಾದುದನ್ನು ಮಾತನಾಡಲು ಪೂರ್ಣ ಸ್ವಾತಂತ್ರ್ಯವಿದೆ” ಎಂದು ರಶೀದ್ ಟ್ವೀಟ್‌ ಮಾಡಿದ್ದಾರೆ.

“ಭಾರತದಲ್ಲಿ ನನಗೆ ಬೇಕಾದುದನ್ನು ಬರೆಯುವ ಸ್ವಾತಂತ್ರ್ಯ ಇದೆ. ನಿಮ್ಮ ದ್ವೇಷದ ಅಜೆಂಡಾದ ಅಡಿಯಲ್ಲಿ ನೀವು ನನ್ನ ಭಾರತದ ಬಗ್ಗೆ ತಪ್ಪು ಚಿತ್ರವನ್ನು ತೋರಿಸುತ್ತಿದ್ದೀರಿ. ನಿಮ್ಮ ನಾಲಿಗೆಯಿಂದ ವಿಷ ಉಗುಳುವುದನ್ನು ನಿಲ್ಲಿಸಿ” ಎಂದು ಅತೀಫ್ ರಶೀದ್ ಸೇರಿಸಿದ್ದಾರೆ.

ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಎಂಬ ಯುಎಸ್ ಕಾಂಗ್ರೆಸ್‌ನ ಸದಸ್ಯೆಯರು ಜಂಟಿ ಅಧಿವೇಶನದಲ್ಲಿ ಮೋದಿ ಭಾಷಣವನ್ನು ಬಹಿಷ್ಕರಿಸಿದ್ದಾರೆ. “ಪ್ರಧಾನಿ ಮೋದಿಯವರ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡಿದೆ. ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳಿಗೆ ಕುಮ್ಮಕ್ಕು ತುಂಬಿದೆ. ಪತ್ರಕರ್ತರು/ಮಾನವ ಹಕ್ಕುಗಳ ಪ್ರತಿಪಾದಕರನ್ನು ದಮನಿಸಿದೆ. ನಾನು ಮೋದಿಯವರ ಭಾಷಣಕ್ಕೆ ಹಾಜರಾಗುವುದಿಲ್ಲ. ಮೋದಿಯವರ ದಮನದ ದಾಖಲೆಗಳನ್ನು ಮಾನವ ಹಕ್ಕುಗಳ ಗುಂಪುಗಳೊಂದಿಗೆ ಚರ್ಚಿಸಲಿದ್ದೇನೆ” ಎಂದು ಇಲ್ಹಾನ್ ಒಮರ್ ಹೇಳಿದ್ದರು.

“ನಮ್ಮ ರಾಜಧಾನಿಯಲ್ಲಿ ಮೋದಿಗೆ ವೇದಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ದಮನ, ಪತ್ರಕರ್ತರನ್ನು ಸೆನ್ಸಾರ್ ಮಾಡಿರುವುದು ಮುಂತಾದ ಅವರ ಸುದೀರ್ಘ ಇತಿಹಾಸ ಸ್ವೀಕಾರಾರ್ಹವಲ್ಲ. ನಾನು ಮೋದಿ ಅವರ ಭಾಷಣವನ್ನು ಬಹಿಷ್ಕರಿಸುತ್ತೇನೆ” ಎಂದು ರಶೀದಾ ತ್ಲೈಬ್ ಬರೆದಿದ್ದರು.

ಇದನ್ನೂ ಓದಿ: PM Modi US Visit: ನರೇಂದ್ರ ಮೋದಿ ಜತೆಗೆ ಜೋ ಬೈಡೆನ್‌ ಔತಣಕೂಟ

Exit mobile version