Site icon Vistara News

PM Modi US Visit: ಮೋದಿಗೆ ಒಬಾಮ ಉಪದೇಶ: ಖ್ಯಾತ ಪತ್ರಕರ್ತ ಫರೀದ್‌ ಝಕಾರಿಯಾ ಹೇಳಿದ್ದೇನು?

fareed zakaria and narendra modi

ನ್ಯೂಯಾರ್ಕ್:‌ ಮಾನವ ಹಕ್ಕುಗಳ ಬಗ್ಗೆ ನರೇಂದ್ರ ಮೋದಿ (Narendra Modi) ಅವರಿಗೆ ಭಾಷಣ ನೀಡುವುದು ಬೈಡೆನ್‌ ಆಡಳಿತವು ಒಬ್ಬ ಪ್ರಭಾವಿ ಮತ್ತು ಜನಪ್ರಿಯ ಪ್ರಧಾನಿಯೊಂದಿಗೆ ವರ್ತಿಸಬಹುದಾದ ಸರಿಯಾದ ಕ್ರಮವಲ್ಲ ಎಂದು ಭಾರತೀಯ ಮೂಲದ ಅಮೆರಿಕನ್‌ ಪತ್ರಕರ್ತ ಫರೀದ್‌ ಝಕಾರಿಯಾ (Fareed Zakaria)

ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಮೆರಿಕಕ್ಕೇ ತಿರುಗೇಟು ಬೀಳಬಹುದು ಎಂದವರು ಎಚ್ಚರಿಸಿದ್ದಾರೆ.

ಸಿಎನ್‌ಎನ್‌ ಚಾನೆಲ್‌ನಲ್ಲಿ ನಡೆಸಿಕೊಡುವ ತಮ್ಮ ಶೋ ʼಜಿಪಿಎಸ್‌ʼನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ (PM Modi US Visit) ನೀಡಿದ ಕುರಿತು, ಅವರೊಂದಿಗೆ ಜೋ ಬೈಡೆನ್‌ ಆಡಳಿತ ಹೇಗೆ ನಡೆದುಕೊಳ್ಳಬೇಕಿತ್ತು ಎಂಬ ಕುರಿತು ಅಲ್ಲಿನ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಝಕಾರಿಯಾ ಮಾತು ಇದರ ಮುಂದುವರಿದ ಭಾಗವಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ʼʼಭಾರತದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಬೈಡೆನ್‌ ಸರ್ಕಾರ ಮೋದಿಯವರ ಜತೆ ಮಾತುಕತೆ ನಡೆಸಬೇಕಿತ್ತು. ಇಲ್ಲವಾದರೆ ಭಾರತದ ಪ್ರಜಾಪ್ರಭುತ್ವ ಒಂದು ಕಡೆ ವಾಲುವ ಸಾಧ್ಯತೆ ಇದೆʼʼ ಎಂದಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ʼʼಒಬಾಮ ಆಡಳಿತ ಏಳು ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್‌ ಹಾಕಿದೆʼʼ ಎಂದು ತಿರುಗೇಟು ನೀಡಿದ್ದರು.

ʼʼನರೇಂದ್ರ ಮೋದಿಯವರು ಭಾರತದಲ್ಲಿ ತುಂಬಾ ಜನಪ್ರಿಯರು. ಅವರ ಹಿಂದೂ ರಾಷ್ಟ್ರೀಯತಾವಾದ ಕೂಡ ತುಂಬಾ ಜನಪ್ರಿಯ. ಟರ್ಕಿಯ ರೆಸೆಪ್‌ ತಯಿಪ್‌ ಎರ್ದೋಗನ್‌, ಇಸ್ರೇಲ್‌ನ ಬೆಂಜಮಿನ್‌ ನೆತನ್ಯಾಹು, ಹಂಗೆರಿಯ ವಿಕ್ಟರ್‌ ಒರ್ಬನ್‌ ಅವರಂತೆ ಮೋದಿ ಕೂಡ ಜನಪ್ರಿಯರು. ಇವರೆಲ್ಲರೂ ಹಳೆಯ ಜಾತ್ಯತೀತ, ಕಾಸ್ಮೊಪಾಲಿಟನ್‌ ಆಡಳಿತಗಳಿಗೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆʼʼ ಎಂದು ಜಕಾರಿಯಾ ಹೇಳಿದ್ದಾರೆ.

ಮೋದಿಯವರಿಗೆ ಮಾನವ ಹಕ್ಕುಗಳ ಬಗ್ಗೆ ಭಾಷಣ ಕೊಡುವುದು ಅವರೊಂದಿಗೆ ನಡೆದುಕೊಳ್ಳುವ ಸರಿಯಾದ ರೀತಿಯೇ ಅಲ್ಲ. ಅದು ಮೋದಿಯವರ ಬೆಂಬಲಿಗರಲ್ಲಿ ಮಾತ್ರವಲ್ಲ, ಬಹುತೇಕ ಭಾರತೀಯರಲ್ಲಿ ಪಾಶ್ಚಾತ್ಯರ ಧೋರಣೆಯ ಬಗ್ಗೆ ಸಿಟ್ಟು ಮೂಡಿಸಬಹುದು. ಅದಕ್ಕಿಂತ ಉತ್ತಮ ದಾರಿಯೆಂದರೆ ಭಾರತೀಯ ಸಮಾಜದೊಂದಿಗೆ ಸಂಪರ್ಕ ಸಾಧಿಸುವುದು. ಅಲ್ಲಿನ ಮಾಧ್ಯಮ, ಉದ್ಯಮ, ಎನ್‌ಜಿಒಗಳು, ಸಾಂಸ್ಕೃತಿಕ ಸಂಘಟನೆಗಳು, ಇದೆಲ್ಲದರೊಂದಿಗೆ ಸಂಪರ್ಕ ಸಾಧಿಸಬೇಕು. ಭಾರತವು ಅತ್ಯಂತ ಅಮೆರಿಕ ಸ್ನೇಹಿ ರಾಷ್ಟ್ರ. ಜನತೆ- ಜನತೆಯ ಬಾಧವ್ಯವು ಸರ್ಕಾರ- ಸರ್ಕಾರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಅಮೆರಿಕದೊಂದಿಗೆ ಹೆಚ್ಚು ಗಾಢವಾದ ಬಾಂಧವ್ಯ ಹೊಂದಿರುವ ಭಾರತದಲ್ಲಿ ಹೆಚ್ಚು ಪರಿಪೂರ್ಣವಾದ ಪ್ರಜಾಪ್ರಭುತ್ವ ನೆಲೆಗೊಳ್ಳಬಹುದುʼʼ ಎಂದು ಫರೀದ್‌ ಜಕಾರಿಯಾ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: PM Modi US Visit: ನರೇಂದ್ರ ಮೋದಿಗೆ ಜೋ ಬೈಡೆನ್‌ ಟಿ-ಶರ್ಟ್‌ ಗಿಫ್ಟ್;‌ ಅದರಲ್ಲಿ ಬರೆದಿದ್ದೇನು?

Exit mobile version