Site icon Vistara News

PM Modi US Visit: ‘ಭಾರತವು ಪ್ರಜಾಪ್ರಭುತ್ವದ ತಾಯಿ’ ಎಂದ ಮೋದಿ; ಯುಎಸ್ ಜಂಟಿ ಸದನದಲ್ಲಿ 2ನೇ ಬಾರಿ ಐತಿಹಾಸಿಕ ಭಾಷಣ

modi speech in us session

ವಾಷಿಂಗ್ಟನ್: ಪ್ರಜಾಪ್ರಭುತ್ವವು ನಮ್ಮ ಉಭಯ ದೇಶಗಳ ಪವಿತ್ರ ಬಾಂಧವ್ಯದಲ್ಲಿ ಒಂದಾಗಿದೆ. ಸಮಾನತೆ ಮತ್ತು ಘನತೆಯನ್ನು ಬೆಂಬಲಿಸಲು ಪ್ರಜಾಪ್ರಭುತ್ವವೊಂದೇ ದಾರಿ. ಅನಾದಿ ಕಾಲದಿಂದಲೂ ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಅಮೆರಿಕ ಭೇಟಿಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi US Visit) ಉದ್ಘೋಷಿಸಿದ್ದಾರೆ.

ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿರುವ ಮೋದಿ, ಇಂದು ಅಮೆರಿಕದ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾತನಾಡಿದರು. ಮೋದಿಯವರು ಅಮೆರಿಕದ ಜಂಟಿ ಸದನವನ್ನು ಉದ್ದೇಶಿಸಿ ಎರಡನೇ ಬಾರಿ ಮಾತನಾಡಿರುವ ಮೊದಲ ಭಾರತೀಯ ಪ್ರಧಾನಿ. ಹಾಗೂ ಎರಡನೇ ಜಾಗತಿಕ ನಾಯಕ (ಇನ್ನೊಬ್ಬರು ಬೆಂಜಮಿನ್‌ ನೆತನ್ಯಾಹು).

ಭಾರತದಲ್ಲಿ ಪ್ರಜಾಪ್ರಭುತ್ವ ಸುದೀರ್ಘಕಾಲದಿಂದ ವಿಕಸನಗೊಂಡಿದೆ. ಪ್ರಜಾಪ್ರಭುತ್ವವು ಚರ್ಚೆ ಮತ್ತು ವಾಗ್ವಾದಗಳನ್ನು ಸ್ವಾಗತಿಸುವ ಪರಿಕಲ್ಪನೆ, ಪ್ರಜಾಪ್ರಭುತ್ವವು ಆಲೋಚನೆಗಳು ಮತ್ತು ಅಭಿವ್ಯಕ್ತಿಗೆ ರೆಕ್ಕೆಗಳನ್ನು ನೀಡುವ ಸಂಸ್ಕೃತಿ ಎಂಬುದು ಇತಿಹಾಸದುದ್ದಕ್ಕೂ ಸ್ಪಷ್ಟವಾಗಿದೆ. ಭಾರತವು ಅನಾದಿ ಕಾಲದಿಂದಲೂ ಇಂತಹ ಮೌಲ್ಯಗಳನ್ನು ಹೊಂದಿದೆ. ಪ್ರಜಾಸತ್ತಾತ್ಮಕ ಮನೋಭಾವದ ವಿಕಾಸದಲ್ಲಿ ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಮೋದಿ ನುಡಿದರು.

ಸುಮಾರು ಒಂದು ಗಂಟೆಯ ಕಾಲದ ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

ಆರ್ಥಿಕತೆ: “ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಯುಎಸ್‌ಗೆ ಭೇಟಿ ನೀಡಿದಾಗ, ಭಾರತವು ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತವು ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾವು ದೊಡ್ಡದಾಗಿ ಬೆಳೆಯುವುದು ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿದ್ದೇವೆ. ಭಾರತ ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ.ʼʼ

ಮಹಿಳಾ ಸಬಲೀಕರಣ: “ಇಂದು ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಭಾರತದ ದೃಷ್ಟಿ ಕೇವಲ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಲ್ಲ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಯಾಗಿದೆ. ಅಲ್ಲಿ ಮಹಿಳೆಯರು ಪ್ರಗತಿಯ ಪಯಣವನ್ನು ಮುನ್ನಡೆಸುತ್ತಿದ್ದಾರೆ. ಬುಡಕಟ್ಟು ಹಿನ್ನೆಲೆಯ ಒಬ್ಬ ಮಹಿಳೆ ನಮ್ಮ ರಾಷ್ಟ್ರದ ಮುಖ್ಯಸ್ಥೆಯಾಗಿದ್ದಾರೆ.ʼʼ

ಇಂಧನ ಬಳಕೆ: “ಪ್ಯಾರಿಸ್ ಹವಾಮಾನ ಶೃಂಗಸಭೆಯ ಬದ್ಧತೆಯನ್ನು ಪೂರೈಸಿದ ಏಕೈಕ ಜಿ20 ದೇಶ ಭಾರತ. ನಾವು 2030ರ ನಿಗದಿತ ಗುರಿಗಿಂತ 9 ವರ್ಷಗಳ ಮೊದಲೇ ನಮ್ಮ ಶಕ್ತಿಯ ಮೂಲಗಳಲ್ಲಿ 40%ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನಮೂಲ ಹೊಂದಿದ್ದೇವೆ. ಆದರೆ ನಾವು ಅಲ್ಲಿಗೆ ನಿಲ್ಲಿಸಲಿಲ್ಲ. ಗ್ಲಾಸ್ಗೋ ಶೃಂಗಸಭೆಯಲ್ಲಿ ನಾನು ʼಮಿಷನ್ ಲೈಫ್ʼ ಅನ್ನು ಪ್ರಸ್ತಾಪಿಸಿದೆ. ಇದು ಭೂಮಿಯ ಪ್ರಗತಿಯ ಪರ, ಭೂಮಿಯ ಸಮೃದ್ಧಿಯ ಪರ, ಈ ಗ್ರಹದ ಜನರ ಪರವಾಗಿದೆ.ʼʼ

ಇದನ್ನೂ ಓದಿ: PM Modi US Visit: ಶ್ವೇತಭವನದಲ್ಲಿ ಮೋದಿಗೆ ಭವ್ಯ ಸ್ವಾಗತ; ವಿಶ್ವ ಶಾಂತಿಗೆ ಅಮೆರಿಕ-ಭಾರತ ಜತೆಗೂಡಿ ಕಾರ್ಯ ಅಂದ್ರು ಪಿಎಂ

ವೈವಿಧ್ಯತೆಯಲ್ಲಿ ಏಕತೆ: “ಭಾರತವು ಪ್ರಪಂಚದ ಎಲ್ಲಾ ನಂಬಿಕೆಗಳಿಗೆ ನೆಲೆಯಾಗಿದೆ ಮತ್ತು ನಾವು ಎಲ್ಲವನ್ನೂ ಆಚರಿಸುತ್ತೇವೆ. ಭಾರತದಲ್ಲಿ ವೈವಿಧ್ಯತೆಯು ನೈಸರ್ಗಿಕ ಜೀವನ ವಿಧಾನವಾಗಿದೆ. ಇಂದು ಜಗತ್ತು ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿಯಲು ಬಯಸುತ್ತಿದೆ. ನಮ್ಮಲ್ಲಿ 2,500 ರಾಜಕೀಯ ಪಕ್ಷಗಳಿವೆ. ಸುಮಾರು 20 ವಿವಿಧ ಪಕ್ಷಗಳು ಭಾರತದ ವಿವಿಧ ರಾಜ್ಯಗಳನ್ನು ಆಳುತ್ತಿವೆ. ನಮ್ಮಲ್ಲಿ 22 ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿವೆ. ಆದರೂ ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ.ʼʼ

ವಿದೇಶಾಂಗ ನೀತಿ: “ನಾವು ʼವಸುಧೈವ ಕುಟುಂಬಕಂ’ ಎಂಬ ಧ್ಯೇಯವಾಕ್ಯದೊಂದಿಗೆ ಬದುಕುತ್ತಿದ್ದೇವೆ- ಜಗತ್ತೇ ಒಂದು ಕುಟುಂಬ ಎಂಬ ಅರ್ಥ. ಪ್ರಪಂಚದೊಂದಿಗೆ ನಮ್ಮ ಒಡನಾಟ ಪ್ರತಿಯೊಬ್ಬರ ಒಳಿತಿಗಾಗಿ. G20 ಶೃಂಗಸಭೆಯಲ್ಲಿ ನಮ್ಮ ಅಧ್ಯಕ್ಷತೆಯೂ ಅದೇ ಗುರಿಯನ್ನು ಹೊಂದಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬುದು ನಮ್ಮ ಆಶಯ. ಜಾಗತಿಕ ಶಾಂತಿಪಾಲಕರನ್ನು ಗೌರವಿಸಲು ಸ್ಮಾರಕ ಗೋಡೆಯನ್ನು ನಿರ್ಮಿಸುವ ನಮ್ಮ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ ಕಳೆದ ವಾರ ಎಲ್ಲಾ ರಾಷ್ಟ್ರಗಳು ಮಾನ್ಯ ಮಾಡಿವೆ.‌

ಇದನ್ನೂ ಓದಿ: PM Modi Visit US: ಭಾರತದಲ್ಲಿ ತಾರತಮ್ಯಕ್ಕೆ ಅವಕಾಶವೇ ಇಲ್ಲ, ನಮ್ಮ ಡಿಎನ್‌ಎದಲ್ಲೇ ಪ್ರಜಾಪ್ರಭುತ್ವವಿದೆ ಎಂದ ಪ್ರಧಾನಿ ಮೋದಿ

Exit mobile version