ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಸುಮ್ಮನೇ ಕೈಗೊಳ್ಳುತ್ತಿಲ್ಲ. ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದಷ್ಟಕ್ಕೇ ಅದು ಸೀಮಿತವಲ್ಲ. ಜಗತ್ತಿನ ನಂ. ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸೇರಿದಂತೆ ಹಲವಾರು ಜಾಗತಿಕ ಉದ್ಯಮಿಗಳನ್ನೂ, ಹೂಡಿಕೆದಾರರನ್ನೂ ಪ್ರಧಾನಿ ಭೇಟಿಯಾಗುತ್ತಿದ್ದಾರೆ. ಇದರ ಪರಿಣಾಮ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೂಡಿಕೆಯ ಪ್ರವಾಹ ಹೆಚ್ಚುವ ನಿರೀಕ್ಷೆಯೂ ಉಂಟಾಗಿದೆ. (PM Modi US visit) ಜತೆಗೆ ಅತ್ಯಂತ ಸಕಾಲದಲ್ಲಿ ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಮಿಲಿಟರಿ ಮತ್ತು ಟೆಕ್ನಾಲಜಿ ಸಹಭಾಗಿತ್ವದ ಒಪ್ಪಂದವನ್ನು ಉಭಯ ದೇಶಗಳು ಕೈಗೊಳ್ಳಲಿವೆ.
ಒಂದು ಕಡೆ ಭಾರತದ ಆರ್ಥಿಕತೆ ಚೇತರಿಸುತ್ತಿದೆ. ಇವತ್ತು ವಿಶ್ವದಲ್ಲಿಯೇ ವೇಗವಾಗಿ ಬೆಳವಣಿಗೆ ದಾಖಲಿಸುತ್ತಿರುವ ಪ್ರಮುಖ ಎಕಾನಮಿ ಭಾರತವಾಗಿದೆ. ಷೇರು ಮಾರುಕಟ್ಟೆಗಳೂ ಚೇತೋಹಾರಿಯಾಗಿದೆ. ಗ್ರಾಹಕ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತದೆ. ಇಂಥ ಕಾಲಘಟ್ಟದಲ್ಲಿ ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಭಾರತೀಯ ಷೇರು ಮಾರುಕಟ್ಟೆಗೆ ಕಳೆದ ಮಾರ್ಚ್ ಬಳಿಕ ಬಹುತೇಕ 10 ಶತಕೋಟಿ ಡಾಲರ್ (82,000 ಕೋಟಿ ರೂ.) ವಿದೇಶಿ ಹಣದ ಹರಿವು ಲಭಿಸಿದೆ. ಬ್ಯಾಂಕ್ ಆಫ್ ಅಮೆರಿಕದ ಪ್ರಕಾರ ಈ ವರ್ಷ ಏಷ್ಯಾದಲ್ಲಿ ಅತ್ಯುತ್ತಮವಾಗಿ ರಿಟರ್ನ್ ನೀಡಿದ ಎರಡನೇ ಕರೆನ್ಸಿ ರೂಪಾಯಿ ಆಗಿದೆ. ಮೋದಿಯವರ ಅಮೆರಿಕ ಪ್ರವಾಸದ ಪರಿಣಾಮ ಮುಂಬರುವ ದಿನಗಳಲ್ಲಿ ಹೂಡಿಕೆಯ ಪ್ರವಾಹ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಉದ್ಯಮಿ ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ಗಣನೀಯ ಹೂಡಿಕೆ ಮಾಡುವ ಭರವಸೆ ನೀಡಿದೆ. ಪ್ರಧಾನಿ ಮೋದಿ ಜತೆಗೆ ಬುಧವಾರ ಮಾತುಕತೆ ನಡೆಸಿದ ಬಳಿಕ ಮಸ್ಕ್ ಈ ವಿವರ ನೀಡಿದ್ದಾರೆ. ಅಮೆರಿಕದ ಖ್ಯಾತ ಹೂಡಿಕೆದಾರ ರೇ ಡಲಿಯೊ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಮಾತುಕತೆ ನಡೆಸಿದ್ದಾರೆ. ಜನರಲ್ ಎಲೆಕ್ಟ್ರಿಕ್ ಮತ್ತು ಹಿಂದೂಸ್ತಾನ್ ಏರೊನಾಟಿಕ್ಸ್ , ಭಾರತದ ಯುದ್ಧ ವಿಮಾನ (fighter jets) ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ.
ಭಾರತ ಈಗ ಗೋಲ್ಡಿಲಾಕ್ಸ್ (Goldiloks) ಹಂತದಲ್ಲಿದೆ. ಅಂದರೆ ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ ಎಂಬುದನ್ನು ಜಾಗತಿಕ ಹೂಡಿಕೆದಾರರೇ ಒಪ್ಪಿಕೊಳ್ಳುತ್ತಿದ್ದಾರೆ. ಕೋವಿಡ್ ಬಿಕ್ಕಟ್ಟು ಉಪಶಮನವಾದ ಬಳಿಕ ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್ ಸಾರ್ವಕಾಲಿಕ ಎತ್ತರಕ್ಕೇರಿವೆ. ಹೀಗಾಗಿ ಜಗತ್ತು ಆರ್ಥಿಕತೆಯ ಮಂದಗತಿಯಲ್ಲಿದ್ದರೂ ಭಾರತದಲ್ಲಿ 140 ಕೋಟಿ ಮಂದಿ ಇದರ ಅಪಾಯದಿಂದ ಪಾರಾಗಿದ್ದಾರೆ. ಫಿಚ್ ರೇಟಿಂಗ್ಸ್ ಸೇರಿದಂತೆ ಜಾಗತಿಕ ರೇಟಿಂಗ್ ಏಜೆನ್ಸಿಗಳು ಭಾರತದ ಗ್ರೋತ್ ರೇಟ್ ಅನ್ನು ಪರಿಷ್ಕರಿಸುತ್ತಿವೆ. ಸರ್ಕಾರಿ ಬಾಂಡ್‌ಗಳಲ್ಲಿ ವಿದೇಶಿ ಹೂಡಿಕೆ ಹೆಚ್ಚುತ್ತಿದೆ. ಮೋದಿಯವರ ಅಮೆರಿಕ ಪ್ರವಾಸದ ಪರಿಣಾಮ ಭಾರತ-ಅಮೆರಿಕ ತಂತ್ರಜ್ಞಾನ ಸಹಭಾಗಿತ್ವ ಕೂಡ ವೃದ್ಧಿಸುವ ಸಾಧ್ಯತೆ ಇದೆ. ಹೊಸ ಸೆಮಿಕಂಡಕ್ಟರ್ ಸಪ್ಲೈ ಚೈನ್ ಕೂಡ ಸುಧಾರಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: Investment Tips : ಮೊದಲ ಸಲ ಹೂಡಿಕೆ ಮಾಡುವವರಿಗೆ ಟಾಪ್ 10 ಟಿಪ್ಸ್