Site icon Vistara News

PM Narendra Modi: ಮೋದಿಗೆ ಥ್ಯಾಂಕ್ಸ್‌ ಹೇಳಿದ ಬಲ್ಗೇರಿಯಾ ಅಧ್ಯಕ್ಷ, ಮೋದಿ ಉತ್ತರ ಹೀಗಿತ್ತು

narendra modi rumen radev

ಹೊಸದಿಲ್ಲಿ: ತಮ್ಮ ದೇಶದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಗೆ (Indian Navy) ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಬಲ್ಗೇರಿಯಾದ ಅಧ್ಯಕ್ಷ (Bulgarian President) ರುಮೆನ್ ರಾದೇವ್ (Rumen Radev) ಅವರು ಧನ್ಯವಾದ ಸಲ್ಲಿಸಿದ್ದಾರೆ. “ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮುದ್ರಯಾನ ಸ್ವಾತಂತ್ರ್ಯವನ್ನು ರಕ್ಷಿಸಲು, ಕಡಲ್ಗಳ್ಳತನ (Piracy) ಮತ್ತು ಭಯೋತ್ಪಾದನೆಯನ್ನು (terrorism) ಎದುರಿಸಲು ಭಾರತ ಬದ್ಧವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದಾರೆ.

ರುಮೆನ್ ರಾದೇವ್ ಅವರು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. “ಏಳು ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆಯ ಕೆಚ್ಚೆದೆಯ ಕಾರ್ಯಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು” ಎಂದು ಅವರು ಟ್ವೀಟ್‌ ಮಾಡಿದ್ದರು.

ತಮ್ಮ ಪ್ರತ್ಯುತ್ತರದಲ್ಲಿ, ಮೋದಿ ಅವರು, ““ಏಳು ಬಲ್ಗೇರಿಯನ್ ಪ್ರಜೆಗಳು ಸುರಕ್ಷಿತವಾಗಿರುವುದು ಮತ್ತು ಶೀಘ್ರದಲ್ಲೇ ಮನೆಗೆ ಮರಳುತ್ತಿರುವುದು ನಮಗೆ ಸಂತೋಷ ತಂದಿದೆ. ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತ ಬದ್ಧವಾಗಿದೆ” ಎಂದಿದ್ದಾರೆ.

ಅಪಹರಣಕ್ಕೊಳಗಾದ ಎಂವಿ ರುಯೆನ್ ಹಡಗನ್ನು ಯಶಸ್ವಿಯಾಗಿ ರಕ್ಷಿಸಿದ್ದಕ್ಕಾಗಿ ಭಾರತ, ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಬಲ್ಗೇರಿಯಾದ ಉಪಪ್ರಧಾನಿ ಭಾನುವಾರ ಧನ್ಯವಾದಗಳನ್ನು ಅರ್ಪಿಸಿದ್ದರು. “ಅಪಹರಣಕ್ಕೊಳಗಾದ ನೌಕೆ ರೂಯೆನ್‌, 7 ಬಲ್ಗೇರಿಯನ್ ಪ್ರಜೆಗಳು ಸೇರಿದಂತೆ ಸಿಬ್ಬಂದಿಯನ್ನು ರಕ್ಷಿಸಲು ಯಶಸ್ವಿ ಕಾರ್ಯಾಚರಣೆಗಾಗಿ ಭಾರತೀತ ನೌಕಾಪಡೆಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಸಿಬ್ಬಂದಿಯ ಜೀವಗಳನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಬಲ್ಗೇರಿಯನ್ ಸಚಿವ ಮರಿಯಾ ಗೇಬ್ರಿಯಲ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಸ್ನೇಹಿತರು ಇರುವುದೇ ಇದಕ್ಕಾಗಿ” ಎಂದು ಜೈಶಂಕರ್ ಉತ್ತರಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 14ರಂದು ಸೊಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಎಂವಿ ರುಯೆನ್ ಅನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ರಕ್ಷಿಸಿತು. 35 ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿದೆ. ಬಲ್ಗೇರಿಯಾ ಮಾಲೀಕತ್ವದ MV ರುಯೆನ್‌ನ ಅಪಹರಣ, 2017ರಿಂದ ಸೊಮಾಲಿ ಕಡಲ್ಗಳ್ಳರು ಸರಕು ಹಡಗನ್ನು ಹತ್ತಿದ ಮೊದಲ ನಿದರ್ಶನ. ಎಲ್ಲಾ ಸಿಬ್ಬಂದಿಯನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಭಾರತೀಯ ನೌಕಾಪಡೆ ಕಾರ್ಯಾಚರಣೆ

ಐಎನ್‌ಎಸ್ ಕೋಲ್ಕತ್ತಾ ಕಾರ್ಯಾಚರಣೆಯನ್ನು ಮುನ್ನಡೆಸಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ನೌಕಾಪಡೆಯು ತನ್ನ P-8I ಕಡಲ ಗಸ್ತು ವಿಮಾನವನ್ನು, ಮುಂಚೂಣಿ ಹಡಗುಗಳಾದ INS ಕೋಲ್ಕತ್ತಾ ಮತ್ತು INS ಸುಭದ್ರ ಮತ್ತು ಎತ್ತರದ ದೀರ್ಘ-ಸಹಿಷ್ಣುತೆ (HALE) ಮಾನವರಹಿತ ವೈಮಾನಿಕ ವಾಹನವನ್ನು ಬಳಸಿಕೊಂಡಿತು. ಭಾರತೀಯ ವಾಯುಪಡೆಯ C-17 ವಿಮಾನವು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ʼಆಪರೇಷನ್ ಸಂಕಲ್ಪ್’ ಅನ್ನು ಬೆಂಬಲಿಸಿತು.

40 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ, INS ಕೋಲ್ಕತ್ತಾ ಭಾರತೀಯ ಕರಾವಳಿಯಿಂದ ಸುಮಾರು 2600 ಕಿಮೀ ದೂರದಲ್ಲಿ ಕಡಲ್ಗಳ್ಳರ ದಾಳಿಗೆ ಒಳಗಾಗಿದ್ದ MV ರುಯೆನ್ ಅನ್ನು ತಡೆಹಿಡಿಯಿತು. ವ್ಯಾಪಾರಿ ಹಡಗನ್ನು ಡಿಸೆಂಬರ್ 2023ರಲ್ಲಿ ಹೈಜಾಕ್ ಮಾಡಲಾಗಿತ್ತು. ಇಲ್ಲಿಯವರೆಗೂ ಸೊಮಾಲಿಯನ್ ಕಡಲ್ಗಳ್ಳರ ನಿಯಂತ್ರಣದಲ್ಲಿತ್ತು. ಡಿಸೆಂಬರ್‌ನಲ್ಲಿ ಯೆಮೆನ್‌ನ ಸೊಕೊಟ್ರಾ ದ್ವೀಪದಿಂದ ಪೂರ್ವಕ್ಕೆ 380 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸೊಮಾಲಿ ಕಡಲ್ಗಳ್ಳರು ಅದನ್ನು ವಶಪಡಿಸಿಕೊಂಡಿದ್ದರು. ನಂತರ MV ರುಯೆನ್ ಮತ್ತು ಅದರ 17 ಸಿಬ್ಬಂದಿಯನ್ನು ಸೊಮಾಲಿಯಾದ ಅರೆ ಸ್ವಾಯತ್ತ ರಾಜ್ಯವಾದ ಪಂಟ್‌ಲ್ಯಾಂಡ್‌ಗೆ ಕರೆದೊಯ್ದರು.

ಇದನ್ನೂ ಓದಿ: Ship Hijacked: ಸೊಮಾಲಿಯಾ ಬಳಿ 15 ಭಾರತೀಯರಿದ್ದ ಹಡಗು ಹೈಜಾಕ್;‌ ನೌಕಾಪಡೆ ಕಟ್ಟೆಚ್ಚರ

Exit mobile version