Site icon Vistara News

Modi In Qatar: 8 ಭಾರತೀಯರ ಬಿಡುಗಡೆ ಬೆನ್ನಲ್ಲೇ ಮೋದಿ ಕತಾರ್‌ ಭೇಟಿ; ಅದ್ಧೂರಿ ಸ್ವಾಗತ

Narendra Modi

PM Narendra Modi Arrives In Doha, Holds Meeting With Qatar Counterpart On Boosting Bilateral Ties

ದೋಹಾ: ಕತಾರ್‌ನಲ್ಲಿ ಬಂಧಿತರಾಗಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕತಾರ್‌ಗೆ ಭೇಟಿ ನೀಡಿದ್ದಾರೆ. ದುಬೈನಲ್ಲಿ ದ್ವಿಪಕ್ಷೀಯ ಮಾತುಕತೆ, ಹಿಂದು ದೇವಾಲಯ ಉದ್ಘಾಟನೆ ಬಳಿಕ ನರೇಂದ್ರ ಮೋದಿ ಅವರು ಕತಾರ್‌ (Modi In Qatar) ತಲುಪಿದ್ದು, ಅನಿವಾಸಿ ಭಾರತೀಯರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ಫೋಟೊಗಳನ್ನು ನರೇಂದ್ರ ಮೋದಿ ಅವರೇ ಶೇರ್‌ ಮಾಡಿದ್ದಾರೆ.

ನರೇಂದ್ರ ಮೋದಿ ಅವರು ಕತಾರ್‌ ರಾಜಧಾನಿ ದೋಹಾ ತಲುಪುತ್ತಲೇ ನೂರಾರು ಅನಿವಾಸಿ ಭಾರತೀಯರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನರೇಂದ್ರ ಮೋದಿ ಪರ ಘೋಷಣೆ ಕೂಗಿದರು. ಮಹಿಳೆಯರು, ಮಕ್ಕಳು ಕೂಡ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಕಾದಿದ್ದರು. ಪ್ರಧಾನಿಯವರು ಕೂಡ ಅನಿವಾಸಿ ಭಾರತೀಯರತ್ತ ಕೈಬೀಸಿ, ಅವರ ಕೈಕುಲುಕಿ ಸಂತಸ ವ್ಯಕ್ತಪಡಿಸಿದರು. ಇನ್ನೂ ಒಂದಷ್ಟು ಜನರಿಗೆ ಸೆಲ್ಫಿಯನ್ನೂ ನೀಡಿದರು.

ಕತಾರ್‌ ತಲುಪಿದ ನರೇಂದ್ರ ಮೋದಿ ಅವರು ಪ್ರಧಾನಿ ಮೊಹಮ್ಮದ್‌ ಬಿನ್‌ ಅಬ್ದುಲ್‌ರೆಹಮಾನ್‌ ಬಿನ್‌ ಜಸ್ಸೀಮ್‌ ಅಲ್‌ ಥಾನಿ (Mohammed bin Abdulrahman bin Jassim Al Thani) ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. “ಕತಾರ್‌ ಪ್ರಧಾನಿ ಮೊಹಮ್ಮದ್‌ ಬಿನ್‌ ಅಬ್ದುಲ್‌ರೆಹಮಾನ್‌ ಬಿನ್‌ ಜಸ್ಸೀಮ್‌ ಅಲ್‌ ಥಾನಿ ಅವರ ಜತೆಗಿನ ಭೇಟಿಯು ಫಲಪ್ರದವಾಗಿತ್ತು” ಎಂದು ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: UAE Temple Inauguration: ಅಬುಧಾಬಿಯಲ್ಲಿ ಪ್ರಧಾನಿ ಮೋದಿಯಿಂದ ಹಿಂದೂ ದೇಗುಲ ಉದ್ಘಾಟನೆಯ ಲೈವ್ ವಿಡಿಯೋ ಇಲ್ಲಿ ನೋಡಿ…

ಕತಾರ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ಎಂಟು ಭಾರತೀಯ ನೌಕಾಪಡೆ ಯೋಧರನ್ನು ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿದೆ. ಮಾಜಿ ಅಧಿಕಾರಿಗಳಿಗೆ ಕತಾರ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರನ್ನು ಆಗಸ್ಟ್‌ನಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ರಾಜತಾಂತ್ರಿಕ ನೀತಿ ಬಳಸಿ ಎಲ್ಲ ಅಧಿಕಾರಿಗಳನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version