Site icon Vistara News

PM Narendra Modi: “ನೀವೆಲ್ಲಾದರೂ ಬಿದ್ದರೆ…” ಟವರ್‌ ಏರಿದವರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದು ಹೀಗೆ

modi in telangana

ಹೈದರಾಬಾದ್:‌ ʼʼದಯವಿಟ್ಟು ಕೆಳಗೆ ಬನ್ನಿ.. ನಾನು ನಿಮಗೆ ಕಾಣಿಸಲಿಕ್ಕಿಲ್ಲ.. ಆದರೆ ನನ್ನ ಧ್ವನಿಯಂತೂ ನಿಮ್ಮನ್ನು ತಲುಪುತ್ತದೆ..ʼʼ ರ್ಯಾಲಿಯಲ್ಲಿ ತಮ್ಮನ್ನು ವೀಕ್ಷಿಸಲು ಗೋಪುರ ಏರಿದ ಜನರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಬೇಡಿಕೊಂಡ ಪರಿ ಹೀಗೆ.

ತೆಲಂಗಾಣದಲ್ಲಿ ನಿನ್ನೆ ನಡೆದ ಚುನಾವಣಾ (Telangana Assembly Election) ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಕ್ಕೆ ಕೊಂಚ ಹೊತ್ತು ತಡೆ ನೀಡಿ, ಮೇಲೇರಿದ ಜನರು ಗೋಪುರಗಳಿಂದ ಕೆಳಗಿಳಿಯುವಂತೆ ಕೇಳಿಕೊಂಡರು. ಏರಿದವರು ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ವಾರದ ಹಿಂದೆ ಪ್ರಧಾನ ಮಂತ್ರಿಗಳು ಹೈದರಾಬಾದ್ ಚುನಾವಣಾ ರ್ಯಾಲಿಯಲ್ಲಿ ಗೋಪುರವೇರಿದ ಮಹಿಳೆಯನ್ನು ಕೆಳಗಿಳಿಯಲು ಕೇಳಿಕೊಂಡ ವಿಡಿಯೋ ವೈರಲ್‌ ಆಗಿತ್ತು. ಇದೀಗ ತೆಲಂಗಾಣದ ನಿರ್ಮಲ್‌ನಲ್ಲಿ ನಡೆದ ರ್ಯಾಲಿಯಲ್ಲಿ ಕೂಡ ಪ್ರಧಾನಿ ಹೀಗೆ ಮಾಡಿದ್ದಾರೆ.

“ಟವರ್‌ ಹತ್ತಿದವರು ಕೆಳಗಿಳಿಯುವಂತೆ ನಾನು ವಿನಂತಿಸುತ್ತೇನೆ. ತುಂಬಾ ಜನದಟ್ಟಣೆಯಿದೆ ಎಂಬುದು ನನಗೆ ಗೊತ್ತು. ನೀವು ನನ್ನನ್ನು ನೋಡಲು ಇಷ್ಟಪಟ್ಟಿದ್ದೀರಿ, ಆದರೆ ಸಾಧ್ಯವಾಗುತ್ತಿಲ್ಲ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಯಾರಾದರೂ ಬಿದ್ದರೆ ನನಗೆ ತುಂಬಾ ದುಃಖವಾಗುತ್ತದೆ. ದಯವಿಟ್ಟು ಕೆಳಗೆ ಬನ್ನಿ” ಎಂದು ಪ್ರಧಾನ ಮಂತ್ರಿ ಕೇಳಿಕೊಂಡರು. ವೇದಿಕೆಯಲ್ಲಿದ್ದ ದುಭಾಷಿಯೊಬ್ಬರು ಅದನ್ನು ತೆಲುಗಿಗೆ ಭಾಷಾಂತರಿಸಿದರು.

“ನಾನು ನಿಮ್ಮ ಪ್ರೀತಿಯನ್ನು ಗೌರವಿಸುತ್ತೇನೆ. ಆದರೆ ದಯವಿಟ್ಟು ಕೆಳಗೆ ಬನ್ನಿ. ಯಾರಿಗಾದರೂ ಏಟಾಗಬಹುದು. ನೀವು ನನ್ನನ್ನು ನೋಡಲು ಸಾಧ್ಯವಾಗದಷ್ಟು ಜನಸಂದಣಿಯಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಆದರೆ ನನ್ನ ಹೃದಯದ ಧ್ವನಿಯು ನಿಮ್ಮನ್ನು ತಲುಪುತ್ತದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಪ್ರಧಾನಿ ಹೇಳಿದರು.

ಜನರ ಗುಂಪಿನ ನಡುವೆ ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದ ಪುಟ್ಟ ಹುಡುಗಿಯೊಬ್ಬಳ ಬಗ್ಗೆಯೂ ಅವರು ಉಲ್ಲೇಖಿಸಿದರು. “ಇವಳು ಇಂದು ಭಾರತ್ ಮಾತೆಯಾಗಿ ಬಂದಿದ್ದಾಳೆ. ಚಪ್ಪಾಳೆ ತಟ್ಟಿ” ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ನವೆಂಬರ್ 11ರಂದು ಹೈದರಾಬಾದ್‌ನಲ್ಲಿ ಮಾಡಿದ ಭಾಷಣದ ವೇಳೆ, ದೀಪಗಳನ್ನು ಅಳವಡಿಸಲಾಗಿರುವ ತಾತ್ಕಾಲಿಕ ಗೋಪುರದಿಂದ ಕೆಳಗೆ ಇಳಿಯಲು ಯುವತಿಯೊಬ್ಬಾಕೆಗೆ ಸೂಚಿಸಿದ್ದರು. ಆಕೆ ಪ್ರಧಾನಿಗೆ ಏನನ್ನೋ ತಿಳಿಸಲು ಪ್ರಯತ್ನಿಸುತ್ತಿದ್ದಾಗ ಹಿಂದಿಯಲ್ಲಿ “ಬೇಟಾ, ನಾನು ನಿನ್ನ ಮಾತು ಕೇಳುತ್ತೇನೆ. ಕೆಳಗೆ ಬಂದು ಕುಳಿತುಕೋ. ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದು ಸರಿಯಲ್ಲ. ನಾನು ನಿಮಗಾಗಿ ಬಂದಿದ್ದೇನೆ. ಇಂತಹ ಕೆಲಸಗಳಿಂದ ಪ್ರಯೋಜನವಿಲ್ಲ” ಎಂದಿದ್ದರು.

ನವೆಂಬರ್ 30ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿಯವರು ವ್ಯಾಪಕ ಪ್ರಚಾರ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಕೆ. ಚಂದ್ರಶೇಖರ ರಾವ್ (K Chandrashekar Rao) ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi – ಬಿಆರ್‌ಎಸ್) ಪಕ್ಷಕ್ಕೆ ಸವಾಲೆಸೆಯಲು ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ವಪ್ರಯತ್ನ ನಡೆಸುತ್ತಿವೆ. ಬಿಆರ್‌ಎಸ್‌ ಅಧಿಕಾರಕ್ಕೆ ಮರಳಲು ಶ್ರಮಿಸುತ್ತಿದೆ.

“ಕೆಸಿಆರ್ ಬಡವರ ಶತ್ರು. ಅವರ ಮನೆಗಳನ್ನು ಒಡಿದಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಬಡವರಿಗೆ ಮನೆ ನೀಡಲಾಗುವುದುʼʼ ಎಂದು ನಿರ್ಮಲ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ICC World Cup 2023 : ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನು ಅಪ್ಪಿ ಸಂತೈಸಿದ ಪ್ರಧಾನಿ ಮೋದಿ

Exit mobile version