ಹೊಸದಿಲ್ಲಿ: ಇಸ್ರೇಲ್ ಮತ್ತು ಹಮಾಸ್ (Israel Hamas War) ನಡುವೆ ನಡೆಯುತ್ತಿರುವ ಸಂಘರ್ಷ, ಪಶ್ಚಿಮ ಏಷ್ಯಾದ ಪ್ರಮುಖ ಸಾಗರ ಕಾರಿಡಾರ್‌ಗಳ ಮೂಲಕ ಸರಕು ಸಾಗಣೆಯ ಸುರಕ್ಷತೆ ಇತ್ಯಾದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel PM Benjamin Netanyahu) ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
“ಈಗ ನಡೆಯುತ್ತಿರುವ ಇಸ್ರೇಲ್- ಹಮಾಸ್ ಸಂಘರ್ಷ ಹಾಗೂ ಸಾಗರ ಸಾರಿಗೆಯ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಒಳಗೊಂಡಂತೆ ನೆತನ್ಯಾಹು ಅವರೊಂದಿಗೆ ಉಪಯುಕ್ತವಾದ ಸಂಭಾಷಣೆ ವಿನಿಮಯ ಮಾಡಿಕೊಂಡೆ. ಸಂತ್ರಸ್ತರಿಗೆ ನಿರಂತರ ಮಾನವೀಯ ನೆರವಿನೊಂದಿಗೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಯ ಪರವಾಗಿ ಭಾರತದ ಸ್ಥಿರ ನಿಲುವನ್ನು ಎತ್ತಿ ತೋರಿಸಿದೆ” ಎಂದು ಮೋದಿ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್‌ನಲ್ಲಿ ಅಂದಾಜು 1,200 ಜನರನ್ನು ಕೊಂದ ಹಮಾಸ್ ದಾಳಿಗೆ ಪ್ರತೀಕಾರ ದಾಳಿ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಇಬ್ಬರೂ ನಾಯಕರು ಅಕ್ಟೋಬರ್ 10ರಂದು ಮಾತನಾಡಿದ್ದರು.
ಯೆಮೆನ್‌ನ ಹೌತಿ ಬಂಡುಕೋರರಿಂದ ಬೆದರಿಕೆಯನ್ನು ಎದುರಿಸುತ್ತಿರುವ ಬಾಬ್-ಎಲ್-ಮಂಡೇಬ್ ಮೂಲಕ ಸಾಗುವ ಹಡಗುಗಳ ಸುರಕ್ಷತೆಯ ಕುರಿತು ಮೋದಿ ಮತ್ತು ನೆತನ್ಯಾಹು ಚರ್ಚಿಸಿದ್ದಾರೆ. ಇತ್ತೀಚೆಗೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿಯಿಂದ ಭಾರತ ತಯಾರಿಸಿದ ಜೆಟ್ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಸ್ವಲ್ಪದಲ್ಲಿ ತಪ್ಪಿಸಿಕೊಂಡಿದೆ. ಗಾಜಾದ ಮೇಲಿನ ದಾಳಿಗೆ ಇಸ್ರೇಲ್ ಮೇಲೆ ಸೇಡು ತೀರಿಸಿಕೊಳ್ಳಲು ಈ ದಾಳಿ ಎಂದು ಹೌತಿಗಳು ಹೇಳಿದ್ದಾರೆ.
ಬಾಬ್-ಎಲ್-ಮಂಡೇಬ್ ಮೆಡಿಟರೇನಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸುವ ನಿರ್ಣಾಯಕ ಜಲಸಂಧಿ. ಇದು ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್‌ನೊಂದಿಗೆ ಭಾರತದ ವ್ಯಾಪಾರಕ್ಕೆ ಪ್ರಮುಖ ಕೊಂಡಿ. ಇಲ್ಲಿನ ಅನಿಶ್ಚಿತತೆಯು ಹಲವಾರು ಜಾಗತಿಕ ಹಡಗು ಕಂಪನಿಗಳಿಗೆ ಬೆದರಿಕೆ ಉಂಟುಮಾಡಿದೆ. ತೈಲದಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಭಯಕ್ಕೆ ಕಾರಣವಾಗಿದೆ.
“ಸಾರಿಗೆ ಸ್ವಾತಂತ್ರ್ಯವು ಅತ್ಯಗತ್ಯ ಜಾಗತಿಕ ಅಗತ್ಯವಾಗಿದ್ದು ಅದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾರತದ ಪ್ರಧಾನಿ ಮೋದಿ ಗಮನಿಸಿದರು. ಭಾರತದಿಂದ ಇಸ್ರೇಲ್‌ಗೆ ಉದ್ಯೋಗಿಗಳ ಆಗಮನವನ್ನು ಮುಂದುವರೆಸುವ ಬಗ್ಗೆ ನಾಯಕರು ಚರ್ಚಿಸಿದರು. ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ತೊಡೆದುಹಾಕಲು ಇಸ್ರೇಲ್ ನಡೆಸುತ್ತಿರುವ ನ್ಯಾಯಯುತ ಯುದ್ಧಕ್ಕೆ ಭಾರತ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ನೆತನ್ಯಾಹು ಅವರು ಭಾರತದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ” ಎಂದು ಇಸ್ರೇಲ್ ಪ್ರಧಾನಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಉಗ್ರರೆಂದು ಭಾವಿಸಿ ಇಸ್ರೇಲ್ ಸೈನ್ಯದಿಂದ 3 ಒತ್ತೆಯಾಳುಗಳ ಹತ್ಯೆ, ಪ್ರಮಾದ ಎಂದ ನೆತನ್ಯಾಹು