ಅಯೋಧ್ಯೆ: ಮೊನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಅಯೋಧ್ಯೆಯಲ್ಲಿ ನವೀಕೃತ ವಿಮಾನ ನಿಲ್ದಾಣ (Ayodhya Airport) ಹಾಗೂ ನವೀಕೃತ ರೈಲ್ವೇ ನಿಲ್ದಾಣದ (Ayodhya Railway Station) ಉದ್ಘಾಟನೆ ಮಾಡಲು ಆಗಮಿಸಿದ ಸಂದರ್ಭದಲ್ಲಿ ನಡೆದ ರೋಡ್ ಶೋ, ಅನಿರೀಕ್ಷಿತ ಅತಿಥಿಯೊಬ್ಬರ ಆಗಮನಕ್ಕೆ ಸಾಕ್ಷಿಯಾಯಿತು.
ಈ ವ್ಯಕ್ತಿ ಇಕ್ಬಾಲ್ ಅನ್ಸಾರಿ (Iqbal Ansari). ಮೋದಿಯವರು ವಿಮಾನ ನಿಲ್ದಾಣದಿಂದ ರೈಲ್ವೇ ನಿಲ್ದಾಣಕ್ಕೆ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಇಕ್ಬಾಲ್ ಅನ್ಸಾರಿ ರಸ್ತೆ ಬದಿ ಹಾಜರಿದ್ದು ಮೋದಿಯವರ ಮೇಲೆ ಪುಷ್ಪವೃಷ್ಟಿ ಮಾಡಿದರು. ಕುತೂಹಲಕಾರಿ ಸಂಗತಿ ಎಂದರೆ, ಇವರು ಪ್ರಸ್ತುತ ಸ್ಥಳದಲ್ಲಿ ರಾಮ ಮಂದಿರ (Ayodhya Ram Mandir) ನಿರ್ಮಾಣ ವಿರೋಧಿಸಿದ್ದ ಕಕ್ಷಿದಾರರಲ್ಲಿ ಒಬ್ಬರು!
ಹೌದು, ಅಯೋಧ್ಯೆ ಪ್ರಕರಣದ ಮಾಜಿ ವ್ಯಾಜ್ಯದಲ್ಲಿ ಇಕ್ಬಾಲ್ ಅನ್ಸಾರಿ, ಹಾಜಿ ಮಹಬೂಬ್ ಮತ್ತು ಮೊಹಮ್ಮದ್ ಉಮರ್ ಎಂಬ ಮೂವರು ಅರ್ಜಿದಾರರಾಗಿದ್ದರು. ಈ ಸ್ಥಳದಲ್ಲಿಯೇ ಮಸೀದಿ ನಿರ್ಮಾಣವಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿದವರಾಗಿದ್ದರು. ಅಯೋಧ್ಯೆ ವಿವಾದ ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಅವರು ಒಪ್ಪಿರಲಿಲ್ಲ. ಸ್ಥಳೀಯ ಮುಸ್ಲಿಮರ ಸಭೆಯಲ್ಲಿ, ಮಸೀದಿ ಸ್ಥಳವನ್ನು ಇಲ್ಲಿಂದ ಬದಲಾಯಿಸುವುದಿಲ್ಲ ಎಂದು ನಿರ್ಣಯವನ್ನು ಅಂಗೀಕರಿಸಿದವರಲ್ಲಿ ಇವರೂ ಒಬ್ಬರಾಗಿದ್ದರು.
ರಾಮ ಜನ್ಮಭೂಮಿ- ಬಾಬರಿ ಮಸೀದಿ ಭೂ ದಾವೆಯಲ್ಲಿ ಇವರು ದಾವೆಗಾರನಾಗಿ ಭಾಗಿಯಾಗಿದ್ದರು. ನವೆಂಬರ್ 9, 2019ರಂದು ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಿತು ಹಾಗೂ ಅಯೋಧ್ಯೆಯ ವಿವಾದಿತ ಸ್ಥಳಕ್ಕೆ ಪರ್ಯಾಯವಾದ ಜಾಗವನ್ನು ಮಸೀದಿಗೆ ನೀಡಿತು. ಅವರ ತಂದೆ ಹಾಶಿಮ್ ಅನ್ಸಾರಿ ಹಿರಿಯ ದಾವೆದಾರರಾಗಿದ್ದು, 2016ರಲ್ಲಿ ನಿಧನರಾದರು. ತಂದೆಯ ಮರಣದ ನಂತರ ಇಕ್ಬಾಲ್ ಕಾನೂನು ಹೋರಾಟ ಕೈಗೆತ್ತಿಕೊಂಡರು.
ಈ ಭೂ ವಿವಾದ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರು ರಾಮ ಮಂದಿರದ ʼಭೂಮಿ ಪೂಜೆ’ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪಡೆದಿದ್ದಾರೆ. ಶನಿವಾರ ಮುಂಜಾನೆ ಅಯೋಧ್ಯೆಯ ಬೀದಿಗಳು ಪ್ರಧಾನಿಯನ್ನು ಸ್ವಾಗತಿಸುವವರಿಂದ ತುಂಬಿದ್ದವು. ವಿಶೇಷವೆಂದರೆ ಈ ಇಕ್ಬಾಲ್ ಅನ್ಸಾರಿ ಕೂಡ ಅವರ ನಡುವೆ ಸೇರಿಕೊಂಡಿದ್ದರು. “ಮೋದಿ ನಮ್ಮ ಊರಿಗೆ ಬಂದಿದ್ದಾರೆ; ಅವರು ನಮ್ಮ ಅತಿಥಿ ಮತ್ತು ನಮ್ಮ ಪ್ರಧಾನಿ” ಎಂದು ಅನ್ಸಾರಿ ಈ ಹೊತ್ತಿನಲ್ಲಿ ಹೇಳಿದರು.
ಇಕ್ಬಾಲ್ ಅವರು ಮೋದಿಯವರ ಅಶ್ವದಳದ ಮೇಲೆ ಗುಲಾಬಿ ದಳಗಳನ್ನು ಸುರಿಸಿದರು. “ನನ್ನ ಮನೆಯ ಮುಂದೆ ಮೋದಿಜೀ ಅವರ ಅಶ್ವದಳ ಹಾದುಹೋಯಿತು. ಅದರ ಮೇಲೆ ನಾನು ಗುಲಾಬಿ ದಳಗಳನ್ನು ಸುರಿಸಿದ್ದೇನೆ. ನನ್ನ ಕುಟುಂಬ ಸದಸ್ಯರು ಸಹ ಹಾಜರಿದ್ದರು” ಎಂದು ಇಕ್ಬಾಲ್ ಅನ್ಸಾರಿ ಹೇಳಿದರು.