Site icon Vistara News

PM Narendra Modi: ನಾನೇಕೆ ನರೇಂದ್ರ ಮೋದಿಯವರ ಪಾದ ಸ್ಪರ್ಶಿಸಿದೆ? ಅಮೆರಿಕನ್‌ ಗಾಯಕಿ ಮೇರಿ ಮಿಲ್ಬೆನ್ ಸಂದರ್ಶನ

mary milben and narendra modi

ಹೊಸದಿಲ್ಲಿ: ಭಾರತದ ಪ್ರಧಾನ ಮಂತ್ರಿ ಮೋದಿ (PM Narendra Modi) ಅವರು ಧಾರ್ಮಿಕ ಸ್ವಾತಂತ್ರ್ಯವನ್ನು ಪೂರ್ಣ ಹೃದಯದಿಂದ ಗೌರವಿಸುತ್ತಾರೆ ಮತ್ತು ನಾಗರಿಕರು ತಮ್ಮ ನಂಬಿಕೆಯನ್ನು ಆಚರಿಸುವ ಹಕ್ಕುಗಳನ್ನು ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ (Mary Milben).

ಆಫ್ರಿಕನ್-ಅಮೆರಿಕನ್ ಹಿನ್ನೆಲೆಯ ಗಾಯಕಿಯಾಗಿರುವ ಮೇರಿ ಮಿಲ್ಬೆನ್ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಬಾಗಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು. ಮತ್ತು ಭಾರತದ ರಾಷ್ಟ್ರಗೀತೆ ʼಜನ ಗಣ ಮನʼವನ್ನು ಹಾಡಿದ್ದರು. ಆ ಮೂಲಕ ಸುದ್ದಿಯಾಗಿದ್ದರಲ್ಲದೆ, ಮೋದಿವಿರೋಧಿಗಳ ಹುಬ್ಬೇರುವಂತೆ ಮಾಡಿದ್ದರು.

ಇದರ ಬಳಿಕ ಖಾಸಗಿ ಸುದ್ದಿಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಾನೇಕೆ ಮೋದಿಯವರ ಪಾದ ಸ್ಪರ್ಶಿಸಿದೆ ಮತ್ತಿತರ ವಿಚಾರಗಳನ್ನು ಮನ ಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ, ʼಭಾರತೀಯ ಮುಸ್ಲಿಮರನ್ನು ಮೋದಿ ಆಡಳಿತ ಕೆಟ್ಟದಾಗಿ ನಡೆಸಿಕೊಳ್ಳುತ್ತದೆʼ ಎಂಬರ್ಥದಲ್ಲಿ ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ನೀಡಿದ ಹೇಳಿಕೆಯನ್ನು ಮಿಲ್ಬೆನ್‌ ಬಲವಾಗಿ ಟೀಕಿಸಿದ್ದಾರೆ.

ಅವರು ನೀಡಿದ ಸಂದರ್ಶನದ ಪ್ರಮುಖ ಭಾಗಗಳು ಇಲ್ಲಿವೆ.

ನೀವು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಸ್ಪರ್ಶಿಸುವುದರ ಹಿನ್ನೆಲೆಯಲ್ಲಿರುವ ಅರ್ಥ ಏನಾಗಿತ್ತು?

ಅಮೆರಿಕ ಮತ್ತು ಭಾರತದ ಹಲವು ಸುಂದರವಾದ ಸಾಮ್ಯತೆಗಳಿವೆ. ಆಫ್ರಿಕನ್-ಅಮೆರಿಕನ್ ಸಮುದಾಯ ಮತ್ತು ಭಾರತೀಯ ಅಮೇರಿಕನ್ ಸಮುದಾಯದ ನಡುವೆಯೂ ಹಲವು ಸುಂದರವಾದ ಹೋಲಿಕೆಗಳಿವೆ. ಅವುಗಳಲ್ಲಿ ಒಂದು ಹಿರಿಯರಿಗೆ ಗೌರವ ನೀಡುವ ಕ್ರಮ. ಭಾರತೀಯ ಸಂಸ್ಕೃತಿಯಲ್ಲಿರುವಂತೆಯೇ, ಆಫ್ರಿಕನ್-ಅಮೇರಿಕನ್ ಸಂಸ್ಕೃತಿಯಲ್ಲಿ, ನಾವು ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ಹಿರಿಯರನ್ನು ಹೇಗೆ ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಳ್ಳುತ್ತೇವೆ. ಪಾದಗಳನ್ನು ಸ್ಪರ್ಶಿಸುವುದು ಗೌರವ ನೀಡುವ ಸಂಕೇತ. ಆ ಮೂಲಕ ನೀವು ಅವರ ಆಶೀರ್ವಾದ ಪಡೆಯುತ್ತೀರಿ.

ಕೆಲವು ಟೀಕಾಕಾರರು ಇದು ವೇದಿಕೆಗಾಗಿ (ಸ್ಟೇಜ್‌ ಮ್ಯಾನೇಜ್ಡ್‌) ಎಂದು ಟೀಕಿಸಿದ್ದಾರೆ?

ಪ್ರಧಾನಿ ಮೋದಿ ಭಾರತದ ರಾಷ್ಟ್ರಗೀತೆ ಹಾಡಲು ವೇದಿಕೆಗೆ ಬರುತ್ತಾರೆ ಎಂದು ನನಗೆ ತಿಳಿದೇ ಇರಲಿಲ್ಲ. ವಾಸ್ತವವಾಗಿ, ಅವರು ವೇದಿಕೆಯ ಮೇಲೆ ಬರುವವರೆಗೂ ನನಗೆ ಅದು ಗೊತ್ತಿರಲೇ ಇಲ್ಲ. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಎಲ್ಲಾ ಕಡೆ ಕಣ್ಣಿಟ್ಟಿದ್ದರು. ಸಾಮಾನ್ಯವಾಗಿ ಜಾಗತಿಕ ನಾಯಕರ ಅಸುಪಾಸಿನಲ್ಲಿ ಅಂತಹ ವರ್ತನೆಗೆ ಅನುಮತಿ ಇರುವುದಿಲ್ಲ.

ಭಾರತದ ರಾಷ್ಟ್ರಗೀತೆ, ಓಂ ಜೈ ಜಗದೀಶ್ ಹರೇ ಮತ್ತು ಇತರ ಭಾರತೀಯ ಸ್ತೋತ್ರಗಳು ನಿಮ್ಮ ಅಮೇರಿಕನ್ ಜೀವನದಲ್ಲಿ ಹೇಗೆ ಬಂದವು?

ನಮ್ಮ ಜತೆ ಭಾರತೀಯರಾದ ಸ್ಮಿತಾ ಪಟೇಲ್ ಇದ್ದರು. ಅವರು ಮಕ್ಕಳಾಗಿದ್ದ ನಮ್ಮ ಬೆಳವಣಿಗೆ ಸಂದರ್ಭ ನಮ್ಮನ್ನು ನೋಡಿಕೊಂಡರು. ಹಾಗಾಗಿ ನಾನು ಚಿಕ್ಕ ವಯಸ್ಸಿನಲ್ಲೇ ಭಾರತೀಯ ಸಂಗೀತ ಮತ್ತು ಭಾರತೀಯ ಸಂಸ್ಕೃತಿಗೆ ತೆರೆದುಕೊಂಡೆ. ಆ ಸಂಸ್ಕೃತಿಯನ್ನು ಹಂಚಿಕೊಂಡದ್ದಕ್ಕೆ ನಾನು ಸ್ಮಿತಾ ಅವರಿಗೆ ಆಭಾರಿ. 2022ರಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ರಾಷ್ಟ್ರಗೀತೆ ಪ್ರಸ್ತುತಪಡಿಸಲು, ದೀಪಾವಳಿ ಆಚರಣೆಗೆ ಪ್ರದರ್ಶನ ನೀಡಲು ನನ್ನನ್ನು ಆಹ್ವಾನಿಸಲಾಯಿತು. ಹಾಗಾಗಿ ಭಾರತೀಯ ಸಂಗೀತ ಮತ್ತು ದೇಶಭಕ್ತಿ ಗೀತೆಗಳೊಂದಿಗೆ ನನ್ನ ಸಂಬಂಧ ಗಾಢವಾಯಿತು.

singer Mary Millben touches PM Modi feet

ಭಾರತದಲ್ಲಿ ಧಾರ್ಮಿಕ ತಾರತಮ್ಯ ನಡೆಯುತ್ತಿದೆ ಎಂದು ಕೆಲವು ಅಮೆರಿಕನ್‌ ಸಂಸದರು ಹೇಳುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರಪಂಚದಾದ್ಯಂತ ಧಾರ್ಮಿಕ ಕಿರುಕುಳ ನಡೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಮೆರಿಕದ ಅಧ್ಯಕ್ಷರು ಸೇರಿದಂತೆ ವಿಶ್ವ ನಾಯಕರು ಪ್ರಪಂಚದಾದ್ಯಂತ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಗಮನ ಹರಿಸಬೇಕು. ಪ್ರಜಾಪ್ರಭುತ್ವದ ನಿಜವಾದ ಲಕ್ಷಣವೆಂದರೆ ಸ್ವಾತಂತ್ರ್ಯ. ನಂಬಿಕೆಯ ಕಾರಣದಿಂದ ಯಾವುದೇ ವ್ಯಕ್ತಿಗೆ ಕಿರುಕುಳ ನೀಡಬಾರದು.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ನೀವು ಭಾವಿಸುತ್ತೀರಾ?

ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ಸ್ವಾತಂತ್ರ್ಯವನ್ನು ಪೂರ್ಣ ಹೃದಯದಿಂದ ಗೌರವಿಸುತ್ತಾರೆ; ಯಾವುದೇ ಪ್ರಜೆಯ ನಂಬಿಕೆಯನ್ನು ಚಲಾಯಿಸುವ ಹಕ್ಕುಗಳನ್ನು ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಯಾಕೆಂದರೆ ಸ್ವತಃ ಅವರೂ ಧಾರ್ಮಿಕ ನಂಬಿಕೆಯ ವ್ಯಕ್ತಿ. ಪ್ರತಿ ದೇಶವೂ ಧಾರ್ಮಿಕ ಸಂಘರ್ಷದ ಕಾಲವನ್ನು ಎದುರಿಸುತ್ತಿದೆ. ಪ್ರಪಂಚದ ಇತರ ಕಡೆಗಳಲ್ಲಿ ಇರುವಂತೆಯೇ ಭಾರತದಲ್ಲೂ, ಅಮೆರಿಕದಲ್ಲೂ ಅದನ್ನು ನಾವು ಕಾಣಬಲ್ಲೆವು. ಭಾರತದಲ್ಲಿ ಧಾರ್ಮಿಕ ಕಿರುಕುಳದ ಬಗ್ಗೆ ಅಮೆರಿಕದ ಸಂಸದರು ತಕರಾರು ಹೊಂದಿದ್ದಾರೆ ಎಂದು ನಾನು ಬಲ್ಲೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಈ ಬಗ್ಗೆ ಟೀಕೆ ಮಾಡಿದ್ದಾರೆ. ಅಮೆರಿಕಕ್ಕೆ ಮೋದಿಯವರ ಐತಿಹಾಸಿಕ ಭೇಟಿಯ ವೇಳೆಯಲ್ಲಿ ಇಂಥ ಕಾಮೆಂಟ್‌ ಮಾಡುವುದು ಮಾಜಿ ಅಧ್ಯಕ್ಷರ ದುರಹಂಕಾರ ಎಂದು ನಾನು ಭಾವಿಸುತ್ತೇನೆ. ಅವರಿಗೆ ಇದನ್ನು ಮಾಡಲು ಬೇರೆ ಸಮಯ, ಬೇರೆ ವೇದಿಕೆ ಇತ್ತು

ಭಾರತದಲ್ಲಿ ರಾಜಕೀಯ ವಿರೋಧವನ್ನು ದಮನಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಏನು ಹೇಳುವಿರಿ?

ನಾನು ಆ ಮಾತುಗಳನ್ನು ಒಪ್ಪುವುದಿಲ್ಲ. ಭಾರತವು ಯಾವುದೇ ರೀತಿಯಲ್ಲಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ನಾನು ನಂಬುವುದಿಲ್ಲ. ಏಕೆಂದರೆ ಭಾರತವು ಸ್ವಾತಂತ್ರ್ಯದಲ್ಲಿ ಬೇರೂರಿರುವ ದೇಶವಾಗಿದೆ. ಸ್ವಾತಂತ್ರ್ಯವು ಮುಕ್ತ ಸಮಾಜಕ್ಕೆ ಮತ್ತು ಮುಕ್ತ ನಾಗರಿಕರಿಗೆ ನೀಡುವ ಎಲ್ಲಾ ಅವಕಾಶಗಳನ್ನು ಅರ್ಥ ಮಾಡಿಕೊಳ್ಳುವ, ಮೌಲ್ಯಯುತವಾದ ನಾಯಕರಾಗಿದ್ದಾರೆ ಮೋದಿ. ಪ್ರತಿಯೊಬ್ಬ ಜಾಗತಿಕ ನಾಯಕರಂತೆ ಪ್ರಧಾನಿ ಮೋದಿಯವರಿಗೂ ಕೆಲವು ಸವಾಲುಗಳಿವೆ. ಆ ರೀತಿಯ ಸಂಘರ್ಷಗಳನ್ನು ಎದುರಿಸಲು ಹೆಚ್ಚಿನ ಶಕ್ತಿಯೊಂದಿಗೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಉತ್ತಮ ತಿಳುವಳಿಕೆಯೊಂದಿಗೆ ವ್ಯವಹರಿಸುವುದು ಮುಖ್ಯ. ಭಾರತ ಪ್ರಧಾನಿ ಮೋದಿಯವರ ಮೂಲಕ ಸರಿಯಾದ ನಾಯಕನನ್ನು ಹೊಂದಿದೆ. ಪ್ರಜಾಪ್ರಭುತ್ವ ಎಂದರೇನು ಮತ್ತು ಅದನ್ನು ಎತ್ತಿಹಿಡಿಯಲು ಏನು ಮಾಡಬೇಕು ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ

Exit mobile version