ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜೂನ್ 22ರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಅಮೆರಿಕದ (America) ಸಂಸತ್ತಿನ ಎರಡೂ ಮನೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅಮೆರಿಕದ ನಾಯಕರು ಹೇಳಿದ್ದಾರೆ. ಅಮೆರಿಕ ಸಂಸತ್ (US Congress) ಉದ್ದೇಶಿಸಿ ಮಾತನಾಡಲು ಅವಕಾಶ ಕಲ್ಪಿಸುವುದು ಯಾವುದೇ ವಿದೇಶಿ ನಾಯಕನಿಗೆ ನೀಡುವ ಅತ್ಯುನ್ನತ ಗೌರವವಾಗಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕದ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನ ಉಭಯಪಕ್ಷೀಯ ನಾಯಕತ್ವದ ಪರವಾಗಿ ಜೂನ್ 22, ಗುರುವಾರದಂದು ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿಯನ್ನು ಆಹ್ವಾನಿಸುವುದು ನಮ್ಮ ಗೌರವವಾಗಿದೆ ಎಂದು ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ, ಸೆನೆಟ್ ನಾಯಕ ಚಕ್ ಶುಮರ್, ಸೆನೆಟ್ ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ ಮತ್ತು ಹೌಸ್ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್ ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನಿಮ್ಮ ಭಾಷಣದ ಸಮಯದಲ್ಲಿ, ಭಾರತದ ಭವಿಷ್ಯದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಮತ್ತು ಉಭಯ ರಾಷ್ಟ್ರಗಳು ಎದುರಿಸುತ್ತಿರುವ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಲು ನಿಮಗೆ ಅವಕಾಶವಿದೆ. ನಿಮ್ಮ ಈ ಭಾಷಣವು ಅಮೆರಿಕ ಮತ್ತು ಭಾರತದ ನಡುವಿನ ನಿರಂತರ ಸ್ನೇಹವನ್ನು ಕಾಪಿಡಲಿದೆ ಎಂದು ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಜೋ ಬೈಡೆನ್ ಅವರು ಆತಿಥ್ಯವನ್ನು ನೀಡಲಿದ್ದಾರೆ. ಇದರಲ್ಲಿ ಔತಣಕೂಟ ಕೂಡ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಅಮೆರಿಕದ ಸಂಸತ್ತು ಉದ್ದೇಶಿಸಿ ಮಾತನಾಡಲಿದ್ದಾರೆ. 2009ರಲ್ಲಿ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಆತಿಥ್ಯ ವಹಿಸಿದ್ದ ಮನಮೋಹನ್ ಸಿಂಗ್ ಅವರು ಅಮೆರಿಕ ಪ್ರವಾಸ ಕೈಗೊಂಡಕೊನೆಯ ಭಾರತೀಯ ಪ್ರಧಾನಿಯಾಗಿದ್ದರು.
ಈ ಸುದ್ದಿಯನ್ನೂ ಓದಿ: Rahul Gandhi: 2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ; ರಾಹುಲ್ ಗಾಂಧಿ ಭವಿಷ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಭೇಟಿ ಮೊದಲೇ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ, ನಾನಾ ನಗರಗಳಲ್ಲಿ ವಿವಿಧ ಸ್ತರದ ಜನರು, ವಿವಿಗಳು ಮತ್ತು ನೀತಿ ನಿರೂಪಕರ ಜತೆ ಸಂವಾದ ನಡೆಸಿದ್ದರು.
ಇನ್ನಷ್ಟು ಕುತೂಹಲಕರ ವಿದೇಶಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.