ಹೊಸದಿಲ್ಲಿ: ಕೋವಿಡ್ ಬಳಿಕ ಚೀನಾದಲ್ಲಿ ಕೋಲಾಹಲ ಸೃಷ್ಟಿಸಿರುವ ನ್ಯುಮೋನಿಯಾ ರೀತಿಯ ಸೋಂಕು (Pneumonia Outbreak) ಇದೀಗ ಭಾರತಕ್ಕೂ ಹರಡಿರುವುದು ಖಚಿತವಾಗಿದೆ. ದೆಹಲಿಯ ಏಮ್ಸ್ (AIIMS Delhi) ಆಸ್ಪತ್ರೆಯಲ್ಲಿ ಇದರ 7 ಪ್ರಕರಣ ಪತ್ತೆಯಾಗಿದೆ.
ದಿಲ್ಲಿಯಲ್ಲಿ ಕಾಣಿಸಿಕೊಂಡಿರುವುದು ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಬ್ಯಾಕ್ಟೀರಿಯಾ (Pneumonia Outbreak) ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್ ಘೋಷಿಸಿದ ಭಾರತ ತೀವ್ರ ಮುನ್ನೆಚ್ಚರಿಕೆ ವಹಿಸಿತ್ತು. ಒಟ್ಟು 67 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಮಾದರಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. 2023ರ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ.
ಲ್ಯಾನ್ಸೆಟ್ ಮೈಕ್ರೋಬ್ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 7 ಪ್ರಕರಣ ಪೈಕಿ ಒಂದು ಪ್ರಕರಣ ಪಿಸಿಆರ್ ಪರೀಕ್ಷೆ ವೇಳೆ ದೃಢಪಟ್ಟಿದೆ. ಇನ್ನುಳಿದ 6 ಪ್ರಕರಣ ಐಜಿಎಂ ಎಲಿಸಾ ಟೆಸ್ಟ್ ವೇಳೆ ಪತ್ತೆಯಾಗಿದೆ. ಇದೀಗ ಹೆಚ್ಚಿನ ಮಾದರಿಗಳನ್ನು ಪರೀಕ್ಷಿಸಿ, ಪ್ರಕರಣದ ತೀವ್ರತೆಯನ್ನು ಅಳೆಯಲು ಏಮ್ಸ್ ಮುಂದಾಗಿದೆ.
ಚೀನಾದಲ್ಲಿ ಇದು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯಗಳ ಆಸ್ಪತ್ರೆ ಗಳು ಭರ್ತಿಯಾಗಿವೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಆತಂಕ ಹುಟ್ಟಿಸಿದ ಈ ಸೋಂಕಿನಿಂದಾಗಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ ಮತ್ತೆ ಜಾರಿ ಮಾಡಲಾಗಿದೆ.
ಈ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಭಾರತಕ್ಕೂ ಮೊದಲು ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್ ರಾಜ್ಯದ 3-14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರಿ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿತ್ತು. ಓಹಿಯೋ ವೈದ್ಯಕೀಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಗುರುವಾರ ಒಂದೇ ದಿನ 145 ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ಇಲಾಖೆ ಇದನ್ನು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದನ್ನು ಪರಿಗಣಿಸಿ ಕೆಲವೇ ದಿನಗಳ ಹಿಂದೆ ಆಸ್ಪತ್ರೆಗಳ ಸನ್ನದ್ಧತೆ ಪರಿಶೀಲಿಸುವಂತೆ ಭಾರತದಲ್ಲಿ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿತ್ತು. ಭಾರತದಲ್ಲಿ ಪತ್ತೆಯಾದ ನ್ಯುಮೋನಿಯಾ ಬ್ಯಾಕ್ಟೀರಿಯಾ (pneumonia bacteria) ಕೊರೋನಾವೈರಸ್ (Corona Virus, Covid-19) ರೀತಿ ಪಸರಿಸುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜ್ವರ, ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಇದರ ಲಕ್ಷಣಗಳಾಗಿದ್ದು, ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: Pneumonia Outbreak: ಚೀನಾಗೆ ಪ್ರಯಾಣ ನಿಷೇಧಿಸಲು ಅಮೆರಿಕದ ಅಧ್ಯಕ್ಷ ಬೈಡೆನ್‌ಗೆ ಸೆನೆಟರ್‌ಗಳ ಒತ್ತಾಯ