ಶ್ರೀನಗರ: ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎನಿಸಿರುವ, ಸರ್ಕಾರದಿಂದಲೂ ಈ ಹಿಂದೆ ಮನ್ನಣೆಗೆ ಪಾತ್ರವಾಗಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಶೇಖ್ ಆದಿಲ್ ಮುಷ್ತಾಕ್ ( Sheikh Adil Mushtaq) ಎಂಬವರನ್ನು ಭಯೋತ್ಪಾದನೆ ಸಂಬಂಧಿತ ಭ್ರಷ್ಟಾಚಾರ (police corruption) ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶ್ರೀನಗರದಲ್ಲಿ ಬಂಧಿಸಿದ್ದಾರೆ.
ಬಾರಾಮುಲ್ಲಾದ ನಿವಾಸಿ ಶೇಖ್ ಆದಿಲ್ ಅವರು ಉತ್ತರ ಕಾಶ್ಮೀರದ ಸುಂದರ ತಾಣವಾದ ಗುರೆಜ್‌ನಲ್ಲಿ ಪ್ರವಾಸೋದ್ಯಮಕ್ಕೆ ನೀಡಿದ ಒತ್ತು, ಪ್ರಚಾರದಿಂದ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆದಿದ್ದಾರೆ. ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ ತನಿಖೆಯನ್ನು ಮುಚ್ಚಿಹಾಕಲು ಲಷ್ಕರ್-ಎ-ತೊಯ್ಬಾ (Lashkar-e-Taiba – LeT) ಕಾರ್ಯಕರ್ತ ಮುಜಾಮಿಲ್ ಜಹೂರ್ ಎಂಬಾತನಿಂದ ಹಣ ಪಡೆದ ಆರೋಪವೂ ಇವರ ಮೇಲೆ ಇದೆ. ಬಂಧನಕ್ಕೊಳಗಾಗಿರುವ ಇವರು ಈಗ ಜೈಲಿನಲ್ಲಿದ್ದಾರೆ.
ಫೆಬ್ರವರಿ 7ರಂದು ನೌಗಾಮ್ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ಲಸ್ಜನ್ ಕ್ರಾಸಿಂಗ್‌ನಲ್ಲಿ ಮೂವರು ಶಂಕಿತರನ್ನು ಬಂಧಿಸಿ ಉಮರ್ ಆದಿಲ್ ದಾರ್ ಎಂಬಾತ ಸಾಗಿಸುತ್ತಿದ್ದ 31,65,200 ರೂ. ಹಣ, 1 ಮೊಬೈಲ್ ಫೋನ್, ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಸಾಹಿತ್ಯವನ್ನು ವಶಪಡಿಸಿಕೊಂಡಿದ್ದರು. ಆಗ ಶ್ರೀನಗರದ ಉಪವಿಭಾಗೀಯ ಪೊಲೀಸ್ ಅಧಿಕಾರಿಯಾಗಿದ್ದ ಶೇಖ್ ಆದಿಲ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದರು.
ನಂತರ ಈ ಪ್ರಕರಣದ ತನಿಖೆಯು ಬೇರೊಬ್ಬ ಅಧಿಕಾರಿಗೆ ವರ್ಗಾವಣೆಯಾಗಿತ್ತು. ಈ ಸಂದರ್ಭದಲ್ಲಿ 3 ಲಕ್ಷ ರೂ.ಗಳಷ್ಟು ಅಕ್ರಮ ಹಣ ಅನುಮಾನಾಸ್ಪದ ಖಾತೆಯೊಂದಕ್ಕೆ ವರ್ಗಾವಣೆಯಾಗಿರುವುದು ಕಂಡುಬಂದಿತ್ತು. ಇದರ ಮೂಲವನ್ನು ಶೋಧಿಸಿದಾಗ ಅದು ಶೇಖ್ ಆದಿಲ್ ಬುಡಕ್ಕೆ ಬಂದಿದೆ. ಹಣ ಸಾಗಣೆ ಪ್ರಕರಣದ ಆರೋಪಿಯಾಗಿರುವ ಆದಿಲ್ ದರ್ ಕೂಡ, ಪ್ರಕರಣವನ್ನು ಸೀಮಿತಗೊಳಿಸಲು ಅಥವಾ ಮುಚ್ಚಿಹಾಕಲು ತನಗೆ ಹಣವನ್ನು ನೀಡುವಂತೆ ಶೇಖ್ ಆದಿಲ್ ಹೇಳಿದ್ದುದಾಗಿ ಆರೋಪಿಸಿದ್ದಾನೆ.
ಬಂಧಿತರ ಪ್ರಾಥಮಿಕ ವಿಚಾರಣೆಯಲ್ಲಿ ಅವರು ಲಷ್ಕರೆ ತಯ್ಬಾದ ಪ್ರಾಥಮಿಕ ಕಾರ್ಯಕರ್ತರು ಎಂಬುದು ತಿಳಿದುಬಂದಿದೆ. ಕಾಶ್ಮೀರದಲ್ಲಿ ಮತ್ತು ಗಡಿಯುದ್ದಕ್ಕೂ ಎಲ್‌ಇಟಿಯು ರೂಪಿಸಿದ ದೊಡ್ಡ ಕ್ರಿಮಿನಲ್ ಪಿತೂರಿಯ ಭಾಗವಾಗಿ ಪಾಕಿಸ್ತಾನ ಮೂಲದ ಅವರ ಹ್ಯಾಂಡ್ಲರ್‌ಗಳ ನಿರ್ದೇಶನದ ಮೇರೆಗೆ ಈ ಹಣವನ್ನು ಒಯ್ಯಲಾಗುತ್ತಿತ್ತು. ಈ ವಿಚಾರವನ್ನು ಮುಚ್ಚಿಹಾಕಲು ಪೊಲೀಸ್ ಅಧಿಕಾರಿ ಪ್ರಯತ್ನಿಸಿದ್ದು, ಅದು ಈಗ ಆತನಿಗೆ ಮುಳುವಾಗಿದೆ.
ಶೇಖ್ ಆದಿಲ್, ಗುರೆಜ್‌ನಲ್ಲಿ ಪ್ರವಾಸೋದ್ಯಮಕ್ಕೆ ಪ್ರಚಾರ ನೀಡುತ್ತಿದ್ದುದಲ್ಲದೆ, ಆಕ್ಟ್ ಆಫ್ ಕೈಂಡ್‌ನೆಸ್ ಮತ್ತಿತರ ಕಾರ್ಯಕ್ರಮಗಳನ್ನೂ ಕೈಗೊಂಡು ಅದಕ್ಕೆ ಸಂಬಂಧಿಸಿದ ಫೋಟೋ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಥಳೀಯರಲ್ಲಿ ಹೀರೋ ಎನಿಸಿಕೊಂಡಿದ್ದರು.
ಇದನ್ನೂ ಓದಿ: Police Corruption | ಬೆಂಗಳೂರು ಪೋಲೀಸ್ ಸಿಬ್ಬಂದಿಯಿಂದ ಮತ್ತೆ ಸುಲಿಗೆ? ಮಾನವ ಹಕ್ಕು ಆಯೋಗದಿಂದ ತನಿಖೆ