Site icon Vistara News

Police Verification: ಸಿಮ್ ಮಾರಾಟಗಾರರಿಗೆ ಪೊಲೀಸ್ ವೆರಿಫಿಕೇಷನ್ ಕಡ್ಡಾಯ, ತಪ್ಪಿದ್ರೆ 10 ಲಕ್ಷ ರೂ. ದಂಡ!

SIM Card and Ashwini Vaishnaw

ನವದೆಹಲಿ: ಸಿಮ್‌ ಮಾರಾಟ ಡೀಲರ್‌ಗಳಿಗೆ (SIM Dealer) ಸಂಬಂಧಿಸಿದಂತೆ ಕೇಂದ್ರ ಸರ್ಕಾರವು (Central Government) ಕಠಿಣ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಸಿಮ್ ಡಿಲರ್‌ಗಳಿಗೆ ಪೊಲೀಸ್ ದೃಢೀಕರಣವನ್ನು (Police Verification) ಕಡ್ಡಾಯಗೊಳಿಸಲಾಗಿದೆ. ವಂಚನೆಯನ್ನು ತಪ್ಪಿಸುವುದಕ್ಕಾಗಿ ಬಲ್ಕ್ ಆಗಿ ಸಿಮ್‌ ಮಾರಾಟವನ್ನೂ (SIM bulk Sale) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸಿಮ್ ಮೂಲಕ ಮಾಡಲಾಗುವ ಮೋಸವನ್ನು ಗಣನೀಯವಾಗಿ ತಗ್ಗಿಸಲು ನೆರವು ದೊರೆಯಲಿದೆ. ಸಿಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇನ್ನು ಮುಂದೆ ಹೊಸ ಮೊಬೈಲ್ ಸಿಮ್ ಡೀಲರ್‌ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯ ಕಡ್ಡಾಯವಾಗಿದೆ. ಈಗ ಎಲ್ಲಾ ಪಾಯಿಂಟ್ ಆಫ್ ಸೇಲ್ ಡೀಲರ್‌ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.

52 ಲಕ್ಷ ಸಿಮ್ ಕಾರ್ಡ್ ನಿಷ್ಕ್ರಿಯ

ವಂಚನೆಯ ಮೂಲಕ ಪಡೆದ ಸುಮಾರು 52 ಲಕ್ಷ ಸಿಮ್‌ ಕಾರ್ಡ್ ಸಂಪರ್ಕಗಳನ್ನು ಸಂಚಾರ್ ಸಾಥಿ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ. ಇದೇ ಕಾರಣಕ್ಕಾಗಿ ಮೊಬೈಲ್ ಸಿಮ್ ಮಾರಾಟ ಮಾಡುವ ಸುಮಾರು 67 ಸಾವಿರ ಡೀಲರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 2023ರ ಮೇ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 300 ಸಿಮ್ ಕಾರ್ಡ್ ವಿತರಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದರು.

ಈ ಮೊದಲು ಜನರು ಸಿಮ್ ಕಾರ್ಡ್‌ಗಳನ್ನು ಬಲ್ಕ್ ಆಗಿ ಖರೀದಿಸುತ್ತಿದ್ದರು. ಸಿಮ್‌ ಕಾರ್ಡ್‌ಗಳನ್ನು ಬಲ್ಕ್ ಆಗಿ ಖರೀದಿಸಲು ಅವಕಾಶವಿದೆ. ಆದರೆ, ಈ ಅವಕಾಶವನ್ನು ಇನ್ನು ಮುಂದೆ ನಿಲ್ಲಿಸಲು ತೀರ್ಮಾನಿಸಲಾಗಿದೆ. ಬದಲಿಗೆ, ಸರಿಯಾದ ವ್ಯಾಪಾರ ನಿಬಂಧನೆಗಳ ಮೂಲಕ ಸಿಮ್ ಖರೀದಿಗೆ ಅವಕಾಶ ಕಲ್ಪಿಸುತ್ತೇವೆ. ಇದರಿಂದ ಮೋಸದ ಕರೆಗಳನ್ನು ನಿಲ್ಲಿಸಲು ಸಾಧ್ಯವಾಗಲಿದೆ, ದೇಶದಲ್ಲಿ 10 ಲಕ್ಷ ಸಿಮ್ ಕಾರ್ಡ್ ಡೀಲರ್‌ಗಳಿದ್ದಾರೆ. ಅವರಿಗೆ ಪೊಲೀಸ್ ಪರಿಶೀಲನೆಗಾಗಿ ಸಾಕಷ್ಟು ಕಾಲಾವಕಾಶವನ್ನು ಒದಗಿಸಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Digital KYC For SIM Cards: ಸಿಮ್‌ ಕಾರ್ಡ್‌ ಕೆವೈಸಿ ಆಗಲಿದೆ ಸಂಪೂರ್ಣ ಡಿಜಿಟಲ್‌, ಒಂದು ಐಡಿಗೆ ಸಿಗಲಿದೆ ಐದೇ ಸಿಮ್

ಬಲ್ಕ್ ಸಿಮ್ ಮಾರಾಟ ನಿಷೇಧ

ದೂರಸಂಪರ್ಕ ಇಲಾಖೆಯೂ ಬಲ್ಕ್ ಸಿಮ್ ಸಂಪರ್ಕ ನೀಡುವುದನ್ನು ಸ್ಥಗಿತಗೊಳಿಸಿದ್ದು, ಅದರ ಬದಲಾಗಿ ವ್ಯಾಪಾರ ಸಂಪರ್ಕದ (Business Connection) ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು. ಬಿಸಿನೆಸ್‌ ಕೆವೈಸಿ ಮಾತ್ರವಲ್ಲದೇ, ಆ ಸಿಮ್ ಪಡೆದುಕೊಳ್ಳುವ ವ್ಯಕ್ತಿಯ ಕೆವೈಸಿ ಕೂಡ ಪಡೆಯಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ. ಕಳೆದ ಮೇ ತಿಂಗಳಲ್ಲಿ ಪಂಜಾಬ್ ಪೊಲೀಸರು, ಫೇಕ್ ಗುರುತುಗಳ ಮೂಲಕ ಸಕ್ರಿಯಗೊಳಿಸಲಾಗಿದ್ದ 1.8 ಲಕ್ಷ ಸಿಮ್ ಕಾರ್ಡ್‌‌ಗಳನ್ನು ಬ್ಲಾಕ್ ಮಾಡಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಮ್ ಮಾರಾಟ ಮಾಡಿದ್ದ 17 ಜನರನ್ನು ಬಂಧಿಸಿದ್ದರು.

Exit mobile version