ಮುಂಬೈ: ಮಹಾರಾಷ್ಟ್ರ ಕೇಡರ್‌ನ ಐಎಎಸ್ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್ (Pooja Khedkar) ಅವರ ಒಂದೊಂದೇ ಕಳ್ಳಾಟಗಳು ಬಯಲಾಗುತ್ತಿವೆ. ಇದರ ಬೆನ್ನಲ್ಲೇ ಪೂಜಾಗೆ ಮತ್ತೊಂದು ಶಾಕ್ ಎದುರಾಗಿದ್ದು, ಅವರ ತರಬೇತಿಯನ್ನ ತಡೆ ಹಿಡಿಯಲಾಗಿದೆ. ನಕಲಿ ದಾಖಲ್ ಸೃಷ್ಟಿ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್ ವಿರುದ್ಧ ಇದು ಮೊದಲ ಕ್ರಮವಾಗಿದೆ.
ಮಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಸೇವಾ ಅಕಾಡೆಮಿ ಖೇಡ್ಕರ್ ಅವರನ್ನು ತರಬೇತಿ ಶಿಬಿರಕ್ಕೆ ಕರೆದು ಅವರ ತರಬೇತಿಯನ್ನು ತಡೆ ಹಿಡಿದಿರುವ ಬಗ್ಗೆ ಆದೇಶ ಹೊರಡಿಸಲಾಗಿದೆ. ಮಹಾರಾಷ್ಟ್ರದ ರಾಜ್ಯ ಸರ್ಕಾರದ ಜಿಲ್ಲಾ ತರಬೇತಿ ಕಾರ್ಯಕ್ರಮದಿಂದ “ನಿಮ್ಮನ್ನು ತರಬೇತಿಯಿಂದ ರಿಲೀವ್ ಮಾಡಲಾಗಿದೆ. ಆದಷ್ಟು ಬೇಗ ಅಕಾಡೆಮಿಗೆ ಬಂದು ಸೇರಿಕೊಳ್ಳಿ” ಎಂದು ಅಕಾಡೆಮಿ ಖೇಡ್ಕರ್ ಅವರಿಗೆ ಹೇಳಿದೆ.
ತಮ್ಮ ಖಾಸಗಿ ಕಾರಿಗೆ ‘ಕೆಂಪು ಗೂಟ’ ಅಳವಡಿಸಿದ್ದು ಸೇರಿ ಹಲವು ರೀತಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಪೂಜಾ ಖೇಡ್ಕರ್ ಅವರು ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್ ಡಾಕ್ಯುಮೆಂಟ್ ತಯಾರಿಸಿದ ಆರೋಪಗಳನ್ನೂ ಎದುರಿಸುತ್ತಿದ್ದಾರೆ.
ನಿಯಮಿತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪುಣೆಯಿಂದ (ಅಸಿಸ್ಟಂಟ್ ಕಲೆಕ್ಟರ್) ವಾಶಿಂಗೆ ವರ್ಗಾವಣೆಗೊಂಡಿರುವ 34 ವರ್ಷದ ಅಧಿಕಾರಿಯು, ಒಬಿಸಿ ಜಾತಿ ಪ್ರಮಾಣಪತ್ರ ಲಗತ್ತಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಆದರೆ, ಅವರು ಒಬಿಸಿ ಜಾತಿ ಪ್ರಮಾಣಪತ್ರದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ವಿಶೇಷ ಚೇತನ ಎಂಬುದಾಗಿಯೂ ಫೇಕ್ ಡಾಕ್ಯುಮೆಂಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಡಿಕಲ್ ಟೆಸ್ಟ್ ಪ್ರಕಾರ ಪೂಜಾ ಖೇಡ್ಕರ್ ಅವರು ಫಿಟ್ ಇದ್ದಾರೆ ಎಂದು ಹೇಳಲಾಗುತ್ತಿದೆ. 2007ರಲ್ಲಿ ಅವರು ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸಿದಾಗ ದೈಹಿಕವಾಗಿ ಫಿಟ್ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಯಸ್ಸಿನ ಕುರಿತೂ ಸುಳ್ಳು ದಾಖಲೆ
ಜಾತಿ, ವಿಶೇಷ ಚೇತನ ಪ್ರಮಾಣಪತ್ರದ ಜತೆಗೆ ಪೂಜಾ ಖೇಡ್ಕರ್ ಅವರು ವಯಸ್ಸಿನ ಕುರಿತು ಕೂಡ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2020ರಿಂದ 2023ರ ಅವಧಿಯಲ್ಲಿ ಅವರು ಸಲ್ಲಿಸಿದ ದಾಖಲೆಗಳ ಪ್ರಕಾರ, ಮೂರು ವರ್ಷದಲ್ಲಿ ಅವರ ವಯಸ್ಸು ದಾಖಲೆಯಲ್ಲಿ ಒಂದೇ ವರ್ಷ ಹೆಚ್ಚಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಯಸ್ಸಿನ ಮಿತಿ ಇರುವ ಕಾರಣ ಅವರು ವಯಸ್ಸಿನ ಕುರಿತು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ.
27 ಸಾವಿರ ರೂ. ದಂಡ ಬಿದ್ದಿದ್ದೇಕೆ?
ಅಧಿಕಾರದ ದುರುಪಯೋಗ, ನಕಲಿ ದಾಖಲೆ ಸೃಷ್ಟಿ ಜತೆಗೆ ಸಂಚಾರ ದಟ್ಟಣೆ ನಿಯಮಗಳ ಉಲ್ಲಂಘನೆಯಲ್ಲೂ ಮುಂದಿದ್ದಾರೆ. ವಾಶಿಂ ಮಹಿಳಾ ಪೊಲೀಸರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಪೂಜಾ ಖೇಡ್ಕರ್ ಅವರು ಎರಡು ತಾಸು ಚರ್ಚಿಸಿದ್ದಾರೆ. ಯಾವ ವಿಷಯದ ಕುರಿತು ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗದಿದ್ದರೂ, ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 27 ಸಾವಿರ ರೂ. ದಂಡ ವಿಧಿಸಲಾಗಿದ್ದು, ಅದರ ನೋಟಿಸ್ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಪೂಜಾ ಖೇಡ್ಕರ್ ಪ್ರತಿಕ್ರಿಯೆ ಏನು?
ನಕಲಿ ದಾಖಲೆ, ಅಧಿಕಾರ ದುರುಪಯೋಗ ಸೇರಿ ಹಲವು ಆರೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಮೊದಲ ಬಾರಿಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಯಾರೇ ಆಗಲಿ, ಆರೋಪ ಸಾಬೀತಾಗುವವರೆಗೆ ಅವರು ಆರೋಪಿಯೇ. ಮಾಧ್ಯಮಗಳ ವರದಿಗಳು, ತೀರ್ಪುಗಳು ನಾನು ಏನೆಂಬುದನ್ನು ತೀರ್ಮಾನಿಸುವುದಿಲ್ಲ. ತನಿಖೆಗೆ ರಚನೆಯಾಗಿರುವ ಸಮಿತಿಯ ತೀರ್ಮಾನದ ಬಳಿಕವೇ ಸತ್ಯ ಏನೆಂಬುದು ಗೊತ್ತಾಗುತ್ತದೆ. ಮಾಧ್ಯಮಗಳು ಅಥವಾ ಜನರು ನನ್ನನ್ನು ತೀರ್ಮಾನಿಸುವುದಿಲ್ಲ” ಎಂದು ಮಾಧ್ಯಮಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Sadananda Suvarna : ʼಗುಡ್ಡದ ಭೂತʼ ಖ್ಯಾತಿಯ ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ