ಹೊಸದಿಲ್ಲಿ: ಮಹಾರಾಷ್ಟ್ರ ಕೇಡರ್‌ನ ಐಎಎಸ್ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್ (Pooja Khedkar) ವಿರುದ್ಧ ಕೇಂದ್ರ ಲೋಕ ಸೇವಾ ಆಯೋಗ(UPSC) ಎಫ್‌ಐಆರ್ ದಾಖಲಿಸಿದೆ. ಅಲ್ಲದೇ ನಾಗರಿಕ ಸೇವಾ ಪರೀಕ್ಷೆ-2022 ರ ಉಮೇದುವಾರಿಕೆಯನ್ನು ರದ್ದುಗೊಳಿಸುವಂತೆ ಶೋಕಾಸ್ ನೊಟೀಸ್ ಜಾರಿಗೊಳಿಸಲಾಗಿದೆ.
UPSC ತನ್ನ ಅಧಿಕೃತ ಪ್ರಕಟಣೆ ಹೊರಡಿಸಿದ್ದು, 2022ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರು ನಕಲಿ ದಾಖಲೆ ಸೃಷ್ಟಿಸಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ವಿವರವಾದ ಮತ್ತು ಸಂಪೂರ್ಣ ತನಿಖೆ ನಡೆಸಿದೆ. ಅವರನ್ನು ಮುಂಬರುವ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗಿದೆ ಎನ್ನಲಾಗಿದೆ.
UPSC has, initiated a series of actions against her, including Criminal Prosecution by filing an FIR with the Police Authorities and has issued a Show Cause Notice (SCN) for cancellation of her candidature of the Civil Services Examination-2022/ debarment from future… pic.twitter.com/ho417v93Ek
— ANI (@ANI) July 19, 2024
ಪೂಜಾ ಅವರು ಅಂಗವೈಕಲ್ಯ ಪ್ರಮಾಣಪತ್ರವನ್ನು ಪಡೆಯಲು ಸುಳ್ಳು ವಿಳಾಸ ಮತ್ತು ನಕಲಿ ಪಡಿತರ ಚೀಟಿಯನ್ನು ಬಳಸಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಪುಣೆಯ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆ 2022ರ ಆಗಸ್ಟ್ 24ರಂದು ಪೂಜಾಗೆ ಅಂಗವೈಕಲ್ಯ ಪ್ರಮಾಣಪತ್ರವನ್ನು ನೀಡಿದೆ. ಅದರಲ್ಲಿ ಪೂಜಾ ಖೇಡ್ಕರ್ ಅವರ ವಿಳಾಸವನ್ನು ʼʼಪುಣೆ ಜಿಲ್ಲೆಯ ಪ್ಲಾಟ್ ಸಂಖ್ಯೆ 53, ದೇಹು ಅಲಂಡಿ ರಸ್ತೆ, ತಲವಾಡೆ, ಪಿಂಪ್ರಿ ಚಿಂಚ್ವಾಡ್” ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸ್ಥಳದಲ್ಲಿ ಯಾವುದೇ ಮನೆ ಇಲ್ಲ. ಬದಲಾಗಿ ಥರ್ಮೋವರ್ಟಾ ಎಂಜಿನಿಯರಿಂಗ್ ಕಂಪನಿ ಎಂಬ ಕಾರ್ಖಾನೆ ಇದೆ. ಕುತೂಹಲಕಾರಿ ಸಂಗತಿಯೆಂದರೆ, ಕೆಂಪು-ನೀಲಿ ದೀಪವನ್ನು ಅಕ್ರಮವಾಗಿ ಬಳಸಿದ ನಂತರ ವಶಪಡಿಸಿಕೊಳ್ಳಲಾದ ಖೇಡ್ಕರ್ ಅವರ ಆಡಿ ಕಾರು ಈ ಕಂಪನಿಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ.
ಅಲ್ಲದೆ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಪಡೆಯಲು ಸರ್ಕಾರವು ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದ್ದರೂ ಪೂಜಾ ಅದರ ಬದಲು ಪಡಿತರ ಚೀಟಿ ಹಾಜರುಪಡಿಸಿದ್ದರು ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ನಕಲಿ ಪಡಿತರ ಚೀಟಿಯನ್ನು ತಯಾರಿಸಲು ಪೂಜಾ ನಕಲಿ ವಿಳಾಸವನ್ನು ಬಳಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪೂಜಾ ಖೇಡ್ಕರ್ ಮೊಣಕಾಲಿನಲ್ಲಿ ಶೇ. 7ರಷ್ಟು ಅಂಗವೈಕಲ್ಯವನ್ನು ಹೊಂದಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಸಿವಿಲ್ ಸರ್ವಿಸ್ ಆಯ್ಕೆಯ ಸಮಯದಲ್ಲಿ ಈ ಅಂಗವೈಕಲ್ಯ ಪ್ರಮಾಣಪತ್ರದಿಂದ ಪೂಜಾ ಅವರಿಗೆ ಅದು ಹೇಗೆ ರಿಯಾಯಿತಿ ಸಿಕ್ಕಿತು ಎನ್ನುವ ಪ್ರಶ್ನೆಯೂ ಎದ್ದಿದೆ. ಯಾಕೆಂದರೆ ಪೂಜಾ ʼಬೆಂಚ್‌ಮಾರ್ಕ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿʼ ವಿಭಾಗದಲ್ಲಿ ವಿನಾಯಿತಿ ಕೋರಿದ್ದರು. ಆದರೆ ಯುಪಿಎಸ್‌ಸಿ ನಿಯಮದ ಪ್ರಕಾರ ಈ ರಿಯಾಯಿತಿ ಶೇ. 40ಕ್ಕಿಂತ ಕಡಿಮೆ ಇಲ್ಲದ ವ್ಯಕ್ತಿಗೆ ದೊರೆಯಬೇಕು. ಆದರೆ ಪೂಜಾ ಅವರ ಪ್ರಮಾಣಪತ್ರದಲ್ಲಿ ಅವರ ಅಂಗವೈಕಲ್ಯದ ಪ್ರಮಾಣವನ್ನು ಶೇ. 7 ಎಂದು ಉಲ್ಲೇಖಿಸಲಾಗಿದ್ದು, ಇದು ಯುಪಿಎಸ್‌ಸಿ ಮಿತಿಗಿಂತ ತುಂಬಾ ಕಡಿಮೆ ಇದೆ.
ಈ ಹಿಂದೆ ಅವರು ತಮ್ಮ ಅಂಗವೈಕಲ್ಯ ಪ್ರಮಾಣಪತ್ರವನ್ನು ಪರಿಶೀಲಿಸುವ ವೈದ್ಯಕೀಯ ತಪಾಸಣೆಯನ್ನು ತಪ್ಪಿಸಿಕೊಂಡಿದ್ದರು. ನಂತರ ಖಾಸಗಿ ವರದಿಯನ್ನು ಸಲ್ಲಿಸಿದ್ದರು. ಸದ್ಯ ಪೂಜಾ ಸಲ್ಲಿಸಿದ ಪ್ರಮಾಣಪತ್ರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಪುಣೆಯ ಅಂಗವಿಕಲರ ಆಯುಕ್ತರ ಕಚೇರಿ ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ:Pooja Khedkar: ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ನಕಲಿ ವಿಳಾಸ ನೀಡಿದ್ದ ಪೂಜಾ ಖೇಡ್ಕರ್; ಮತ್ತೊಂದು ಕಳ್ಳಾಟ ಬಯಲು