ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕ ಮದ್ಯಪಾನ ಮಾಡಿ ಐಷಾರಾಮಿ ಪೋರ್ಷೆ ಕಾರನ್ನು (Porsche Crash) ಚಲಾಯಿಸಿ ಇಬ್ಬರು ಐಟಿ ವೃತ್ತಿಪರರನ್ನು (IT Engineers) ಸಾಯಿಸಿದ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆ ಕಾರಣವಾಗಿದೆ. ಸದ್ಯ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಬಾಲಕನ ತಾಯಿ ಶಿವಾನಿ ಅಗರ್‌ವಾಲ್ ಅವರನ್ನು ಬಂಧಿಸಲಾಗಿದೆ. ಬಾಲಕ ಮದ್ಯಪಾನ ಸೇವಿಸಿದ್ದಾನೆಯೇ ಎಂದು ಪರೀಕ್ಷಿಸಲು ಆತನ ರಕ್ತದ ಮಾದರಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಶಿವಾನಿ ಅಗರ್‌ವಾಲ್ ತಮ್ಮ ರಕ್ತವನ್ನು ನೀಡಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅವರನ್ನೂ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಮತ್ತು ರಕ್ತದ ಮಾದರಿಗಳನ್ನು ತೆಗೆದುಕೊಂಡಾಗ ಆಸ್ಪತ್ರೆಯಲ್ಲಿದ್ದ ಕಾರಣ ಶಿವಾನಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿ ಪುಣೆ ಅಪರಾಧ ವಿಭಾಗವು ಈ ಹಿಂದೆ ಶಿವಾನಿ ಅವರ ಹೇಳಿಕೆಯನ್ನು ದಾಖಲಿಸಿತ್ತು. ಅಲ್ಲದೆ ರಕ್ತ ಪರೀಕ್ಷೆ ನಡೆಸಿದ ಸಸೂನ್ ಆಸ್ಪತ್ರೆಯ ಕೆಲವು ಸಿಬ್ಬಂದಿಗೆ ಪುಣೆ ಅಪರಾಧ ವಿಭಾಗವು ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ರಕ್ತದ ಮಾದರಿಗಳನ್ನು ಬದಲಾಯಿಸಿರುವ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು.
Pune Porsche Car Crash
— Nabila Jamal (@nabilajamal_) June 1, 2024
Teenager's mother Shivani Agarwal arrested by Pune police!
She's accused of swapping her blood samples with that of her drunk son, in an attempt to save him from the crime which killed 2 techies
Teen currently in observation home till 5th June. Father… pic.twitter.com/z16IaNDBWg
ಇಬ್ಬರು ವೈದ್ಯರ ಅರೆಸ್ಟ್
ರಕ್ತದ ಮಾದರಿ ಬದಲಾಯಿಸಿದ ಘಟನೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ಇಬ್ಬರು ವೈದ್ಯರನ್ನು ಬಂಧಿಸಲಾಗಿತ್ತು. ʼʼಪುಣೆಯ ಸಾಸೂನ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಅಜಯ್ ತಾವರೆ ಮತ್ತು ಡಾ. ಶ್ರೀಹರಿ ಹರ್ನೂರ್ ಆರೋಪಿಯ ರಕ್ತದ ಮಾದರಿಯನ್ನೇ ಬದಲಿಸಿದ್ದಾರೆ. ಆಮೂಲಕ ಈ ಪ್ರರಕಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅವರಿಬ್ಬರನ್ನೂ ಇದೀಗ ಬಂಧಿಸಲಾಗಿದೆʼʼ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದರು. ಅಲ್ಲದೆ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಎರವಾಡ ಪೊಲೀಸ್ ಠಾಣೆ ಇಬ್ಬರು ಪೊಲೀಸರನ್ನೂ ಅಮಾನತುಗೊಳಿಸಲಾಗಿತ್ತು.
ಪ್ರಕರಣದ ಹಿನ್ನೆಲೆ
ಇತ್ತೀಚೆಗೆ ಕಲ್ಯಾಣಿನಗರ ಪ್ರದೇಶದಲ್ಲಿನ ಬಾರ್‌ನಲ್ಲಿ ಮದ್ಯ ಸೇವಿಸಿ ಪಾನಮತ್ತನಾಗಿದ್ದ 17 ವರ್ಷದ ಬಾಲಕ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮೃತಪಟ್ಟಿದ್ದರು. ಇದಾದ ಬಳಿಕ ಪೊಲೀಸರು ಬಾಲಾಪರಾಧಿ ನ್ಯಾಯಾಲಯದ ತೀರ್ಪಿನಂತೆ ಬಾಲಕನನ್ನು ಬಂಧಿಸಿ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಬಳಿಕ ತಂದೆ ವಿಶಾಲ್ ಅಗರ್ವಾಲ್ರನ್ನು ಬಂಧಿಸಿದ್ದರು.
ಇದನ್ನೂ ಓದಿ: Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಇಬ್ಬರು ವೈದ್ಯರು ಅರೆಸ್ಟ್
ಎಲ್ಲೆಡೆ ಪೊಲೀಸರ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಾಲಕನ ಜಾಮೀನನ್ನು ರದ್ದುಗೊಳಿಸಿ ಮತ್ತೆ ಬಂಧಿಸಲಾಗಿತ್ತು. ಮೊದಲು ವಿಶಾಲ್ ಅಗರ್ವಾಲ್ ತನ್ನ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಡ್ರೈವರ್ ಇದ್ದಾರೆ ಎಂದು ಹೇಳಿದ್ದರು. ಇನ್ನು ಬಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಘಟನೆಗೂ ಮುನ್ನ ಆತ ಸ್ನೇಹಿತರ ಜತೆಗೂಡಿ ಬಾರ್‌ನಲ್ಲಿ ಕುಡಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಹೀಗಾಗಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.