ನವದೆಹಲಿ: ಭಾರತದಲ್ಲಿ ಕೆಲ ವರ್ಷಗಳಿಂದ ತಲಾದಾಯ ಜಾಸ್ತಿಯಾಗುತ್ತಿದ್ದು, ಜನ ಬಡತನದಿಂದ ಹೊರಬರುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತದಲ್ಲಿರುವ ಬಡತನ (Poverty In India) ಪ್ರಮಾಣದ ಕುರಿತು ಆರ್ಥಿಕ ಅಂಶಗಳ ಮೇಲೆ ಗಮನ ಇರಿಸುವ ಎನ್‌ಸಿಎಇಆರ್ ಸಂಸ್ಥೆಯು(NCAER Report) ನೂತನ ವರದಿಯನ್ನು ಬಿಡುಗಡೆಗೊಳಿಸಿದ್ದು, ಭಾರತದ ಬಡತನ ಪ್ರಮಾಣವು ಒಂದು ದಶಕದಲ್ಲಿ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ. 2011-12ನೇ ಸಾಲಿನಲ್ಲಿ ಭಾರತದ ಬಡತನ ಪ್ರಮಾಣವು ಶೇ.21.2ರಷ್ಟು ಇತ್ತು. ಈಗ ಅದು ಶೇ.8.5ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.
ಎನ್‌ಸಿಎಇಆರ್‌ನ ಸೊನಾಲ್ಡೆ ದೇಸಾಯಿ ಅವರು ಇಂಡಿಯಾ ಹ್ಯುಮನ್ ಡೆವಲೆಪ್‌ಮೆಂಟ್ ಸರ್ವೇ (IHDS) ಡೇಟಾವನ್ನು ಆಧರಿಸಿ ‘ಬದಲಾಗುತ್ತಿರುವ ಸಮಾಜದಲ್ಲಿ ಸಾಮಾಜಿಕ ಸುರಕ್ಷತಾ ಜಾಲಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ತಯಾರಿಸಿದ್ದು, ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. “ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ದೇಶದಲ್ಲಿ ಬಡತನದಿಂದ ಹೊರಬಂದಿರುವವರ ಸಂಖ್ಯೆ ಜಾಸ್ತಿ ಇದೆ” ಎಂಬುದಾಗಿ ವರದಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.
“ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಬಡತನ ರೇಖೆಯಿಂದ ಮೇಲೆ ಬರುತ್ತಿರುವವರ ಪ್ರಮಾಣ ಗಣನೀಯವಾಗಿ ಜಾಸ್ತಿಯಾಗುತ್ತಿದೆ. 2004-05ನೇ ಸಾಲಿನಲ್ಲಿ ಬಡತನ ಪ್ರಮಾಣವು ಶೇ.38.6ರಷ್ಟು ಇತ್ತು. ಇದು 2011-12ರಲ್ಲಿ ಶೇ.21.2ಕ್ಕೆ ಇಳಿಯಿತು. ಇನ್ನು 2022-24ರ ಅವಧಿಯಲ್ಲಿ ಶೇ.8.5ಕ್ಕೆ ಇಳಿಕೆಯಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆಯೂ ಬಡತನ ಪ್ರಮಾಣ ಇಳಿದಿರುವುದು ಉತ್ತಮ ಬೆಳವಣಿಗೆಯಾಗಿದೆ” ಎಂದು ವರದಿ ತಿಳಿಸಿದೆ.
24.82 ಕೋಟಿ ಜನ ಬಡತನದಿಂದ ಪಾರು
ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗಿದ್ದಾರೆ ಎಂದು ಆರು ತಿಂಗಳ ಹಿಂದೆಯೇ ನೀತಿ ಆಯೋಗದ ವರದಿ ತಿಳಿಸಿತ್ತು. ಭಾರತದಲ್ಲಿ ಬಹುಆಯಾಮದ ಬಡತನವು 2013-14ರಿಂದ 2022-23ರ ಅವಧಿಯಲ್ಲಿ 29.17% ರಿಂದ 11.28% ಕ್ಕೆ ಇಳಿದಿದೆ ಹಾಗೂ 24..82 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ತಿಳಿಸಿತ್ತು.
ಉತ್ತರ ಪ್ರದೇಶವು ಕಳೆದ ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. 5.94 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗುವುದರೊಂದಿಗೆ ಬಡವರ ಸಂಖ್ಯೆಯಲ್ಲಿ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ. ನಂತರ ಸ್ಥಾನದಲ್ಲಿ ಬಿಹಾರ ಇದ್ದು, 3.77 ಕೋಟಿ, ಮಧ್ಯಪ್ರದೇಶ 2.30 ಕೋಟಿ ಮತ್ತು ರಾಜಸ್ಥಾನ 1.87 ಕೋಟಿ ಜನರು ಬಡತನದಿಂದ ಪಾರಾಗಿದ್ದಾರೆ ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: Narendra Modi: ಮುಂದಿನ 5 ವರ್ಷ ಬಡತನ ವಿರುದ್ಧದ ಹೋರಾಟಕ್ಕೆ ಮೀಸಲು; ರಾಜ್ಯಸಭೆಯಲ್ಲಿ ಮೋದಿ ಭರವಸೆ