ಹೊಸದಿಲ್ಲಿ: ಕಳೆದ 15 ವರ್ಷಗಳಲ್ಲಿ 41.5 ಕೋಟಿ ಮಂದಿಯನ್ನು ಬಡತನ ರೇಖೆಯಿಂದ (Poverty in India) ಮೇಲೆತ್ತಿರುವ ಸಾಧನೆ ಮಾಡಿರುವುದಕ್ಕಾಗಿ ಭಾರತವನ್ನು ವಿಶ್ವಸಂಸ್ಥೆ (united nations) ಮುಕ್ತಕಂಠದಿಂದ ಶ್ಲಾಘಿಸಿದೆ.
2005ರಿಂದ 2021ರವರೆಗಿನ ಕೇವಲ 15 ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 41.5 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ (poverty elimination) ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದ್ದು, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ಮಾಡಿರುವ ಗಮನಾರ್ಹ ಸಾಧನೆಯನ್ನು ಎತ್ತಿ ತೋರಿಸಿದೆ.
ʼಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕʼದ (MPI) ಇತ್ತೀಚಿನ ಅಂಕಿಸಂಖ್ಯೆಗಳನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (OPHI) ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಸಾಧನೆ ಎದ್ದು ಕಂಡಿದೆ.
ಭಾರತ ಸೇರಿದಂತೆ 25 ದೇಶಗಳು ತಮ್ಮ ಜಾಗತಿಕ ಎಂಪಿಐ ಸೂಚ್ಯಂಕಗಳನ್ನು 15 ವರ್ಷಗಳಲ್ಲಿ ಯಶಸ್ವಿಯಾಗಿ ಅರ್ಧಕ್ಕೆ ಇಳಿಸಿವೆ. ಕಾಂಬೋಡಿಯಾ, ಚೀನಾ, ಕಾಂಗೋ, ಹೊಂಡುರಾಸ್, ಭಾರತ, ಇಂಡೋನೇಷಿಯಾ, ಮೊರಾಕೊ, ಸೆರ್ಬಿಯಾ ಮತ್ತು ವಿಯೆಟ್ನಾಂ ಈ ದೇಶಗಳಲ್ಲಿ ಸೇರಿವೆ.
ವಿಶ್ವಸಂಸ್ಥೆ ಅಂಕಿಅಂಶಗಳ ಪ್ರಕಾರ ಏಪ್ರಿಲ್‌ನಲ್ಲಿ ಭಾರತದ ಜನಸಂಖ್ಯೆ 142.86 ಕೋಟಿ ತಲುಪಿದ್ದು, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ ಹಾಗೂ ಚೀನಾವನ್ನು ಹಿಂದಿಕ್ಕಿದೆ. ಬಹುಮುಖಿ ಹಾಗೂ ದೃಢ ಆಡಳಿತದ ಮೂಲಕ ಬಡತನವನ್ನು ಗಣನೀಯವಾಗಿ ಕಡಿತಗೊಳಿಸಬಹುದು ಎಂದು ಇದು ತೋರಿಸಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯ ಕೆಲ ಅಂಕಿಅಂಶಗಳು ಅಲಭ್ಯವಾಗಿವೆ.
ಭಾರತದಲ್ಲಿ 2005/2006ರಿಂದ 2019/2021ರವರೆಗೆ 41.5 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದು, 2005/2006ರಲ್ಲಿ 55.1 ಪ್ರತಿಶತ ಇದ್ದ ದೇಶದ ಬಡತನ ದರ 2019/2021ರಲ್ಲಿ 16.4 ಪ್ರತಿಶತಕ್ಕೆ ಇಳಿದಿದೆ. 2005/2006ರಲ್ಲಿ, ಭಾರತದಲ್ಲಿ ಸುಮಾರು 64.5 ಕೋಟಿ ಜನರು ಬಹು ಆಯಾಮದ ಬಡತನದಲ್ಲಿ ಇದ್ದರು. ಈ ಸಂಖ್ಯೆಯು 2015/2016ರಲ್ಲಿ ಸುಮಾರು 37 ಕೋಟಿ ಮತ್ತು 2019/2021ರಲ್ಲಿ 23 ಕೋಟಿಗೆ ಇಳಿದಿದೆ.
ಭಾರತದಲ್ಲಿ ಬಡತನದ ವಿವಿಧ ಸೂಚಕಗಳಲ್ಲಿ ಇಳಿಮುಖವಾಗಿದೆ. ಅತ್ಯಂತ ಬಡ ರಾಜ್ಯಗಳ ಹಿಂದುಳಿದ ಜಾತಿ, ಸಮುದಾಯಗಳು, ಅತ್ಯಂತ ಹಿಂದುಳಿನ ಪ್ರದೇಶಗಳ ಸಮುದಾಯಗಳು ಅತಿ ವೇಗವಾಗಿ ಪ್ರಗತಿಯನ್ನು ಹೊಂದಿದ್ದಾರೆ. ಈ ಅವಧಿಯಲ್ಲಿ ಭಾರತದಲ್ಲಿ ಮಕ್ಕಳ ಮರಣ ಪ್ರಮಾಣ ಶೇಕಡಾ 4.5ರಿಂದ ಶೇಕಡಾ 1.5ಕ್ಕೆ ಇಳಿದಿದೆ. ಪೌಷ್ಟಿಕಾಂಶದಿಂದ ವಂಚಿತರಾಗಿರುವ ಜನರ ಪ್ರಮಾಣ ಶೇಕಡಾ 44.3ರಿಂದ ಶೇಕಡಾ 11.8ಕ್ಕೆ ಇಳಿದಿದೆ ಎಂದು ವರದಿಯು ತಿಳಿಸಿದೆ.
ಇದನ್ನೂ ಓದಿ: World Bank President : ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್ ಬಂಗಾ ಅಧಿಕಾರ ಸ್ವೀಕಾರ