ಹೊಸದಿಲ್ಲಿ: ಜಗತ್ತಿನ ಅತ್ಯಂತ ಪ್ರಭಾವಿ ಪಾಸ್‌ಪೋರ್ಟ್ (Powerful Passport) ಯಾವ ದೇಶದ್ದು? ಅಮೆರಿಕದ್ದು ಎಂದು ನೀವು ಭಾವಿಸಿದ್ದರೆ ತಪ್ಪು. ಭಾರತದ ಸ್ಥಾನ (Passport of India) ಈ ಪಟ್ಟಿಯಲ್ಲಿ ಹತ್ತರ ಒಳಗಿರಬಹುದಾ? ಊಹೂಂ, ಅದೂ ತಪ್ಪು.
2024ರಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳು ಯಾವುವು ಎಂದು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಪಟ್ಟಿ ನೀಡಿದೆ. ಅದರ ಪ್ರಕಾರ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್ ಮತ್ತು ಸ್ಪೇನ್ ಮೊದಲ ಸ್ಥಾನದಲ್ಲಿವೆ. ಯಾಕೆಂದರೆ ಈ ದೇಶಗಳ ಪಾಸ್‌ಪೋರ್ಟ್ ನಿಮಗೆ ಜಗತ್ತಿನ ಇತರ 194 ತಾಣಗಳಿಗೆ ವೀಸಾ- ಫ್ರೀ ಎಂಟ್ರಿ (Visa free Entry) ನೀಡುತ್ತದಂತೆ.
ಈ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟನೆಯದು ಗೊತ್ತೆ? 80ನೆಯದು. ಈ ಶ್ರೇಯಾಂಕ ಪಟ್ಟಿ ತಯಾರಿಸಿದ ಹೆನ್ಲಿ ಸಂಸ್ಥೆಯು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್‌ನಿಂದ (IATA) ಡೇಟಾವನ್ನು ಪಡೆದಿದೆ.
ಕಳೆದ ಐದು ವರ್ಷಗಳಿಂದ ಜಪಾನ್ ಮತ್ತು ಸಿಂಗಾಪುರ ಸತತವಾಗಿ ನಂ.1 ಸ್ಥಾನದಲ್ಲಿ ಪ್ರಾಬಲ್ಯ ಸಾಧಿಸಿವೆ. ಈ ತ್ರೈಮಾಸಿಕದ ಶ್ರೇಯಾಂಕಗಳಲ್ಲಿ ಯುರೋಪಿಯನ್ ರಾಷ್ಟ್ರಗಳು ಮೇಲಕ್ಕೆ ಜಿಗಿದಿವೆ. ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಹಾಗೂ ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿವೆ. ಇವು 193 ಸ್ಥಳಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತವೆ. ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ಇಲ್ಲಿನ ಪಾಸ್‌ಪೋರ್ಟ್ ಹೊಂದಿರುವವರು 192 ಸ್ಥಳಗಳಿಗೆ ವೀಸಾ ಫ್ರೀ ಪ್ರಯಾಣ ಮಾಡಬಹುದು.
ಭಾರತದ ಪಾಸ್‌ಪೋರ್ಟ್ ಈ ಪಟ್ಟಿಯಲ್ಲಿ 80ನೇ ಸ್ಥಾನವನ್ನು ಪಡೆದುಕೊಂಡಿದೆ. ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ಜನಪ್ರಿಯ ಪ್ರವಾಸಿ ತಾಣಗಳನ್ನು ಒಳಗೊಂಡಂತೆ 62 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಲು ಭಾರತೀಯ ನಾಗರಿಕರಿಗೆ ಅವಕಾಶವಿದೆ. ಭಾರತದೊಂದಿಗೆ ಶ್ರೇಯಾಂಕ ಹಂಚಿಕೊಂಡ ಇನ್ನೊಂದು ದೇಶ ಉಜ್ಬೇಕಿಸ್ತಾನ್. ನೆರೆಯ ಪಾಕಿಸ್ತಾನ ದೇಶ 101ನೇ ಸ್ಥಾನದಲ್ಲಿದೆ.
ವೀಸಾ-ಮುಕ್ತ ಗಮ್ಯಸ್ಥಾನಗಳಿಗೆ ಪ್ರಯಾಣಿಸುವವರ ಸರಾಸರಿ ಸಂಖ್ಯೆ 2006ರಲ್ಲಿ 58 ಇದ್ದರೆ, 2024ರಲ್ಲಿ 111ಕ್ಕೆ ಹೆಚ್ಚಿದೆ. ಅಂದರೆ ದ್ವಿಗುಣಗೊಂಡಿದೆ. ವೀಸಾ ಇಲ್ಲದೆ ಕೇವಲ 28 ದೇಶಗಳಿಗೆ ಪ್ರವೇಶ ಸಾಧ್ಯವಿರುವ ಅಫ್ಘಾನಿಸ್ತಾನ ಅತೀ ಕೆಳಗಿನ ಸ್ಥಾನದಲ್ಲಿದೆ. ಹೆಚ್ಚು ವೀಸಾ-ಮುಕ್ತ ಸ್ಥಳಗಳಿಗೆ ಪ್ರಯಾಣಿಸುವ ಸವಲತ್ತುಗಳನ್ನು ಹೊಂದಿದ ದೇಶಗಳು ಅಗ್ರ ಶ್ರೇಯಾಂಕದದಲ್ಲಿವೆ. ಕೇವಲ 29 ಸ್ಥಳಗಳಿಗೆ ವೀಸಾ-ಮುಕ್ತ ಪ್ರವೇಶ ಹೊಂದಿರುವ ಸಿರಿಯಾ ಕೆಳಗಿನಿಂದ ಎರಡನೇ, ನಂತರ ಇರಾಕ್ (31) ಮತ್ತು ಪಾಕಿಸ್ತಾನ (34) ಅದಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ.
ಇದನ್ನೂ ಓದಿ: Passport ranking : 57 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು: ಭಾರತದ ಪಾಸ್‌ಪೋರ್ಟ್ ಮತ್ತಷ್ಟು ಪ್ರಬಲ