Site icon Vistara News

Prakash Raj: ಮೋದಿ ಅವರನ್ನು ಸುಪ್ರೀಂ ನಟ ಎಂದಿದ್ಯಾಕೆ ಪ್ರಕಾಶ್‌ ರಾಜ್‌?

prakash-modi

prakash-modi

ಬೆಂಗಳೂರು: ನವೆಂಬರ್‌ 19ರಂದು ನಡೆದ ವಿಶ್ವಕಪ್‌ ಕ್ರಿಕೆಟ್‌ನ (ICC World Cup 2023) ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತ್ತು. ಪಂದ್ಯದ ಬಳಿಕ ಟೀಮ್‌ ಇಂಡಿಯಾ ಆಟಗಾರರನ್ನು ಭೇಟಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಾಂತ್ವನ ಹೇಳಿದ್ದರು. ಇದೀಗ ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj) ಈ ವಿಚಾರದಲ್ಲಿ ಮೋದಿ ಅವರನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಾಶ್‌ ರಾಜ್‌, ʼʼಭಾರತದ ಹೀನಾಯ ಸೋಲಿನ ಬಳಿಕ ಸುಪ್ರೀಂ ನಟನ ಸ್ಟ್ರಿಪ್ಟ್‌ ತಲೆ ಕೆಳಗಾಗಿದೆ. ಇದು ಆರಂಭವಷ್ಟೇ. ಇನ್ನೂ ಈ ರೀತಿಯ ಘಟನೆ ನಡೆಯಲಿಕ್ಕಿದೆʼʼ ಎಂದು ಮೋದಿ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದ್ದಾರೆ.

ಅಮೋಕ್‌ ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಮಾಡಲಾದ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿ ಪ್ರಕಾಶ್‌ ರಾಜ್‌ ಈ ರೀತಿ ಹೇಳಿದ್ದಾರೆ. ಅಮೋಕ್‌ ಮಾಡಿದ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ: ʼರಾಜಸ್ಥಾನದ ಬಿಜೆಪಿ ನಾಯಕರೊಬ್ಬರು ಕಾಂಗ್ರೆಸ್‌ ನಾಯಕ ಸುಪ್ರಿಯಾ ಶ್ರೀನೇತ್‌ ಅವರಿಗೆ ಅಚ್ಚರಿಯ ಮಾಹಿತಿಯೊಂದನ್ನು ಹೇಳಿದ್ದಾರೆ. ವಿಶ್ವಕಪ್‌ ಫೈನಲ್‌ ಪಂದ್ಯಕ್ಕೂ ಮೊದಲೇ ರಾಜಸ್ಥಾನ ಬಿಜೆಪಿ ಬ್ಯಾನರ್‌ಗಳನ್ನು ಮುದ್ರಿಸಿತ್ತು. ಇದರಲ್ಲಿ ವಿಜಯದ ಸಂಕೇತದ ಜತೆಗೆ ಮೋದಿ ಅವರ ಫೋಟೊ ಕೂಡ ಇತ್ತು. ಚುನಾವಣಾ ಬ್ಯಾನರ್‌ಗಳನ್ನು ತೆಗೆದು ಹಾಕಿ ಆಟಗಾರರ ಜತೆಗೆ ಮೋದಿ ಇರುವ ಫೋಟೊಗಳನ್ನು ಹಾಕಲು ಯೋಜನೆ ರೂಪಿಸಲಾಗಿತ್ತು. ಅಲ್ಲದೆ ಜೈಪುರದಲ್ಲಿ ತೆರೆದ ಬಸ್‌ನಲ್ಲಿ ಕಪ್‌ ಜತೆಗೆ ಟೀಂ ಇಂಡಿಯಾ ಆಟಗಾರರು ಮೋದಿ ಅವರೊಂದಿಗೆ ರೋಡ್‌ ಶೋ ನಡೆಸಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿತ್ತು ಎಂದಿದ್ದಾರೆʼ.

ʼಮಾತ್ರವಲ್ಲ ಬಿಜೆಪಿ ಮುಖಂಡ ಚಿತ್ರಗಳನ್ನು ಸುಪ್ರಿಯಾ ಶ್ರೀನೇತ್‌ ಅವರಿಗೆ ತೋರಿಸಿ, ಈ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದಿದ್ದರು. ಒಂದು ವೇಳೆ ಭಾರತ ವಿಶ್ವಕಪ್‌ ಗೆದ್ದಿದ್ದರೆ ಬಿಜೆಪಿ ಯಾವ ರೀತಿ ವರ್ತಿಸುತ್ತಿತ್ತು? ಅಲ್ಲದೆ ವಿಶ್ವಕಪ್‌ ಫೈನಲ್‌ನಲ್ಲಿ ಸೋತ ಬಳಿಕವೂ ಬಿಜೆಪಿ ಪ್ರಚಾರ ಮಾಡುವುದನ್ನು ಬಿಡಲಿಲ್ಲʼ ಎಂದು ಅಮೋಕ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇದಕ್ಕೆ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದರು. ಸದ್ಯ ಈ ವಿಚಾರದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಡ್ರೆಸ್ಸಿಂಗ್​​ ರೂಮ್​ಗೆ ತೆರಳಿ ಆಟಗಾರರನ್ನು ಸಂತೈಸಿದ ಮೋದಿ; ವಿಡಿಯೊ ವೈರಲ್

ರಾಹುಲ್‌ ಗಾಂಧಿ, ಮಮತಾ ಟೀಕೆ

ಫೈನಲ್ ಪಂದ್ಯ ನೋಡಲು ಹೋಗಿದ್ದ ಮೋದಿ ಅಪಶಕುನದಿಂದಲೇ (ಪನೌತಿ) ಭಾರತ ಸೋಲು ಕಂಡಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಟೀಕಿಸಿದ್ದರು. ಜತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತೀಯ ತಂಡವು ಐಸಿಸಿ ವರ್ಲ್ಡ್‌ ಕಪ್‌ನ ಎಲ್ಲ ಪಂದ್ಯಗಳನ್ನು ಗೆದ್ದರೂ ಫೈನಲ್‌ನಲ್ಲಿ ಸೋಲು ಅನುಭವಿಸಿತು. ಈ ಪಂದ್ಯವನ್ನು ‘ಪಾಪಿಗಳು’ (Sinners) ನೋಡಲು ಬಂದಿದ್ದರು. ಹಾಗಾಗಿ ಸೋತರು ಎಂದು ಹೇಳಿದ್ದರು. ರಾಹುಲ್‌ ಗಾಂಧಿ ಟೀಕೆಗೆ ಬಿಜೆಪಿಯೂ ತಿರುಗೇಟು ನೀಡಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬರ್ತ್‌ಡೇ ದಿನ ಮ್ಯಾಚ್ ಇದ್ದಿದ್ದಕ್ಕೆ ಭಾರತ ಸೋತು ಹೋಯಿತು ಎಂದು ಬಿಜೆಪಿ ನಾಯಕ ಹಾಗೂ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version