Site icon Vistara News

Pralhad Joshi: ರಾಜಸ್ಥಾನದಲ್ಲಿ ಬಿಜೆಪಿ ಗೆಲುವು; ಪ್ರಲ್ಹಾದ್‌ ಜೋಶಿ ಉಸ್ತುವಾರಿಯಲ್ಲಿ ಮತ್ತೊಂದು ಯಶಸ್ಸು

joshi 3

joshi 3

ಬೆಂಗಳೂರು: ಕಾಂಗ್ರೆಸ್‌ ಅಧಿಕಾರದಲ್ಲಿದ್ದ ರಾಜಸ್ಥಾನ ಈಗ ಬಿಜೆಪಿಯ ವಶವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೂ ಈ ರಾಜ್ಯ ಬಿಜೆಪಿಗೆ ಮಹತ್ವದ್ದಾಗಿದೆ. ರಾಜಸ್ಥಾನದಲ್ಲಿ ಈ ಬಾರಿ ಬಿಜೆಪಿ 200ರಲ್ಲಿ 115 ಸ್ಥಾನಗಳನ್ನು ಗೆಲ್ಲುವ ಮೂಲಕ ಕಳೆದ ಬಾರಿಗಿಂತ 42 ಹೆಚ್ಚು ಸೀಟುಗಳನ್ನು ಸಂಪಾದಿಸಿದೆ. ವಿಶೇಷ ಏನೆಂದರೆ, ಧಾರವಾಡ ಕ್ಷೇತ್ರದ ಸಂಸದರೂ, ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು-ಗಣಿ ಖಾತೆ ಸಚಿವರಾಗಿರುವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ರಾಜಸ್ಥಾನದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ಆಗಿದ್ದರು.

ಪ್ರಲ್ಹಾದ್‌ ಜೋಶಿ ಅವರನ್ನು ಕಳೆದ ವರ್ಷ ಉತ್ತರಾಖಂಡ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಆಗಲೂ ಅಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಜೋಶಿಯವರ ಚುನಾವಣಾ ಕಾರ್ಯತಂತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಪಕ್ಷದ ಉಸ್ತುವಾರಿಯಾಗಿ ಪ್ರಲ್ಹಾದ್‌ ಜೋಶಿ ಅವರು ಸುಮಾರು ಒಂದು ತಿಂಗಳ ಕಾಲ ರಾಜಸ್ಥಾನದಾದ್ಯಂತ ಓಡಾಡಿ ಪಕ್ಷದ ಹಿರಿ-ಕಿರಿಯ ಮುಖಂಡರು ಮತ್ತು ಕಾರ್ಯಕರ್ತರ ಜತೆ ಬೆರೆತು ಗೆಲುವಿನ ಕಾರ್ಯತಂತ್ರ ಹೆಣೆದಿದ್ದರು. ಇದರ ಫಲವಾಗಿ ಈಗ ರಾಜಸ್ಥಾನದಲ್ಲಿ ಬಿಜೆಪಿ ಪ್ರಚಂಡ ಬಹುಮತ ಸಾಧಿಸಿದ್ದರೆ, ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ. ಮತದಾನ ಮುಗಿದ ಬಳಿಕ ನವೆಂಬರ್‌ 26ರಂದೇ ಜೋಶಿ ಅವರು ಪಕ್ಷದ ಹೈಕಮಾಂಡ್‌ಗೆ ವಿವರವಾದ ವರದಿ ನೀಡಿ, ರಾಜಸ್ಥಾನದಲ್ಲಿ ಬಿಜೆಪಿ 120ರಷ್ಟು ಸ್ಥಾನಗಳನ್ನು ಗಳಿಸುತ್ತದೆ ಎಂದು ಹೇಳಿದ್ದರು. ಅದರಂತೆಯೇ ಈಗ ಬಿಜೆಪಿ ಅಲ್ಲಿ 115 ಸೀಟುಗಳನ್ನು ಗಳಿಸಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಾಜಸ್ಥಾನವನ್ನು ಕಳೆದುಕೊಂಡಿತ್ತು. ಹಾಗಾಗಿ ಅಲ್ಲಿ ಈ ಬಾರಿ ಗೆಲ್ಲುವುದು ಅತಿ ಮುಖ್ಯವಾಗಿತ್ತು. ಅಶೋಕ್‌ ಗೆಹ್ಲೊಟ್‌ರಂಥ ಅನುಭವಿ ನಾಯಕ ಮತ್ತು ಸಚಿನ್‌ ಪೈಲಟ್‌ರಂಥ ಯುವ ನಾಯಕರ ಪೈಪೋಟಿ ಎದುರಿಸಿ ಬಿಜೆಪಿಯನ್ನು ಜೋಶಿಯವರು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ್ದಾರೆ. ಜೋಶಿಯವರ ಚುನಾವಣೆ ಕಾರ್ಯ ವೈಖರಿ ಸಹಜವಾಗಿಯೇ ಪಕ್ಷದ ವರಿಷ್ಠ ನಾಯಕರ ಮೆಚ್ಚುಗೆಗೆ ಪಾತ್ರವಾಗಿದೆ.

ಆಗ ಅನಂತ್‌ಕುಮಾರ್‌, ಈಗ ಜೋಶಿ

ʼʼಹಿಂದೆ ಅನಂತ್‌ ಕುಮಾರ್‌ ಅವರು ನಾನಾ ರಾಜ್ಯಗಳ ಉಸ್ತುವಾರಿ ವಹಿಸಿ ಪಕ್ಷಕ್ಕೆ ಜಯ ತಂದು ಕೊಡುತ್ತಿದ್ದರು. ಅವರು ಟ್ರಬಲ್‌ ಶೂಟರ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಅನುಪಸ್ಥಿತಿ ಪಕ್ಷವನ್ನು ಕಾಡುತ್ತಿತ್ತು. ಈಗ ಪ್ರಲ್ಹಾದ್‌ ಜೋಶಿ ಅವರು ಅನಂತ್‌ ಕುಮಾರ್‌ ಅವರಂತೆಯೇ ರಾಜಕೀಯ ಚಾಣಾಕ್ಷತೆ ಮೆರೆಯುತ್ತಿರುವುದು ಸಂತಸ ತಂದಿದೆʼʼ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಡುತ್ತಿದ್ದಾರೆ. ಸಂಸದೀಯ ವ್ಯವಹಾರ ಸಚಿವರಾಗಿಯೂ ಜೋಶಿಯವರು ಮಹತ್ವದ ಕಾರ್ಯ ನಿಭಾಯಿಸುತ್ತಿದ್ದಾರೆ. ಮುಖ್ಯವಾಗಿ ಸಂಸತ್‌ ಕಲಾಪದ ವೇಳೆ ಪ್ರತಿಪಕ್ಷ ನಾಯಕರ ಜತೆ ಸಮನ್ವಯ ಸಾಧಿಸುತ್ತಿದ್ದಾರೆ.

ʼʼಇದು ರಾಜಸ್ಥಾನದಲ್ಲಿನ ಪಕ್ಷದ ಮುಖಂಡರ ಒಗ್ಗಟ್ಟು ಮತ್ತು ಅಲ್ಲಿಯ ಕಾರ್ಯಕರ್ತರ ನಿಸ್ವಾರ್ಥ ಶ್ರಮದ ಫಲʼʼ ಎಂದು ಪ್ರಲ್ಹಾದ್‌ ಜೋಶಿ ಅವರು ಚುನಾವಣೆ ಫಲಿತಾಂಶದ ಬಳಿಕ ವಿನಮ್ರತೆಯಿಂದ ಪ್ರತಿಕ್ರಿಯಿಸಿದ್ದಾರೆ. ʼʼರಾಜಸ್ಥಾನದಲ್ಲಿ ಕಾಂಗ್ರೆಸ್‌ ದುರಾಡಳಿತ ಮಿತಿ ಮೀರಿತ್ತು. ಒಳ ಜಗಳದಲ್ಲಿ ಮುಳುಗಿದ್ದ ಕಾಂಗ್ರೆಸ್‌ ನಾಯಕರು ರಾಜ್ಯದ ಅಭಿವೃದ್ಧಿ ಕಾರ್ಯದತ್ತ ಗಮನವನ್ನೇ ಹರಿಸಿರಲಿಲ್ಲ. ಚುನಾವಣೆ ವೇಳೆ ನೂರಾರು ಬೋಗಸ್‌ ಗ್ಯಾರಂಟಿ ಭರವಸೆಗಳನ್ನು ಕಾಂಗ್ರೆಸ್‌ ನೀಡಿತ್ತು. ಆದರೆ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಮತ್ತು ದಿವಾಳಿತನ ಕಂಡು ರಾಜಸ್ಥಾನದ ಮತದಾರರು ಬಿಜೆಪಿಗೆ ಮತ ಚಲಾಯಿಸಿದ್ದಾರೆʼʼ ಎಂದು ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ.

ʼʼನಾವು ಒಂದು ಗಣಿ ನಿರ್ಮಿಸಿ ಕೊಟ್ಟರೂ ಅದಕ್ಕೆ ಕಲ್ಲಿದ್ದಲ್ಲು ಪೂರೈಸಿಕೊಳ್ಳಲು ರಾಜಸ್ಥಾನ ಸರ್ಕಾರಕ್ಕೆ ಆಗಿರಲಿಲ್ಲ. ಛತ್ತೀಸ್‌ಗಢದಲ್ಲಿ ಆಗ ಕಾಂಗ್ರೆಸ್‌ ಇದ್ದರೂ, ಅದು ರಾಜಸ್ಥಾನಕ್ಕೆ ಕಲ್ಲಿದ್ದಲು ಪೂರೈಕೆ ನಿಲ್ಲಿಸಿತ್ತು. ಇದರಿಂದಾಗಿ ರಾಜಸ್ಥಾನ ತೀವ್ರ ವಿದ್ಯುತ್‌ ಸಮಸ್ಯೆ ಎದುರಿಸಬೇಕಾಯಿತು. ಆಗ ಅನಿವಾರ್ಯವಾಗಿ ಕೇಂದ್ರ ಸರ್ಕಾರವೇ ರಾಜಸ್ಥಾನಕ್ಕೆ ಕಲ್ಲಿದ್ದಲು ಪೂರೈಸಿ ವಿದ್ಯುತ್‌ ಸಮಸ್ಯೆ ನಿವಾರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆ, ಮಾದರಿ ಆಡಳಿತ ಕಂಡು ಜನ ಬಿಜೆಪಿಗೆ ಮತ ಚಲಾಯಿಸಿದ್ದಾರೆʼʼ ಎಂದು ಜೋಶಿ ಅವರು ವಿವರಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಾರಿ ಬಹುಮತದಿಂದ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದೂ ಜೋಶಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Pralhad joshi: ಕಾಂಗ್ರೆಸ್ ಸರ್ಕಾರದ್ದು ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ: ಪ್ರಲ್ಹಾದ್‌ ಜೋಶಿ

ಕಳೆದ ವರ್ಷ ಉತ್ತರಾಖಂಡ ಉಸ್ತುವಾರಿಯನ್ನಾಗಿ ಜೋಶಿ ಅವರನ್ನುನಿಯೋಜಿಸಲಾಗಿತ್ತು. ಅಲ್ಲೂ ಪಕ್ಷ ಜಯ ಗಳಿಸಿತ್ತು. ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿನ ಬಿಜೆಪಿ ಗೆಲುವಿನಿಂದಾಗಿ ಪಕ್ಷದ ಕೇಂದ್ರ ನಾಯಕತ್ವದಲ್ಲಿ ಪ್ರಲ್ಹಾದ್‌ ಜೋಶಿಯವರ ಪ್ರಭಾವ ಮತ್ತಷ್ಟು ಹೆಚ್ಚುವಂತಾಗಿದೆ.

Exit mobile version