Site icon Vistara News

ರಾಷ್ಟ್ರಪತಿ ಚುನಾವಣೆ ಮತದಾನ ಆರಂಭ: ನಡೆದುಬಂದು ಮತ ಚಲಾಯಿಸಿದ ಇಬ್ಬರು ಶಾಸಕರು

president election govind karjol

ಬೆಂಗಳೂರು: ರಾಷ್ಟ್ರಪತಿ ಆಯ್ಕೆಗೆ ದೇಶಾದ್ಯಂತ ಸೋಮವಾರ ನಡೆಯುತ್ತಿರುವ ಮತದಾನದ ಅಂಗವಾಗಿ ಬೆಂಗಳೂರಿನ ವಿಧಾನಸೌಧದಲ್ಲೂ ಬೆಳಗ್ಗೆಯಿಂದ ಮತದಾನ ಆರಂಭವಾಗಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಚಿವ ಗೋವಿಂದ ಕಾರಜೋಳ ಮೊದಲ ಮತ ಚಲಾಯಿಸುವ ಮೂಲಕ ಚಾಲನೆ ನೀಡಿದರು.

ಆಡಳಿತಾರೂಢ ಬಿಜೆಪಿ ಮತ ಚಲಾವಣೆ ಕುರಿತು ಹೆಚ್ಚಿನ ಜಾಗೃತಿ ವಹಿಸಿದೆ. ಎಲ್ಲ ಶಾಸಕರು ಹಾಗೂ ಸಚಿವರಿಗೂ ವಸಂತನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಸಭೆ ಆಯೋಜಿಸಲಾಗಿತ್ತು. ಮತದಾನ ಮಾಡುವ ಪ್ರಕ್ರಿಯೆಯನ್ನು ಮತ್ತೊಮ್ಮೆ ವಿವರಿಸಿ, ಯಾವುದೇ ಮತ ಅಸಿಂಧು ಆಗದಂತೆ ಎಚ್ಚರಿಕೆ ವಹಿಸುವಂತೆ ತಿಳುವಳಿಕೆ ನೀಡಲಾಗಿದೆ.

ಬೆಳಗ್ಗೆ ಎಲ್ಲ ಶಾಸಕರೂ ಬಿಎಂಟಿಸಿ ಬಸ್​​​ಗಳ ಮೂಲಕ ವಿಧಾನಸೌಧಕ್ಕೆ ತೆರಳಿದರು. ಶಾಸಕರಾದ ಸುರೇಶ್​​ ಕುಮಾರ್​ ಹಾಗೂ ಕುಮಾರ್​ ಬಂಗಾರಪ್ಪ ಮಾತ್ರ ವಿಶೇಷವಾಗಿ, ನಡೆದೇ ಬಂದು ಮತ ಚಲಾಯಿಸಿದರು.

ಇದನ್ನೂ ಓದಿ | Presidential Polls 2022: ರಾಷ್ಟ್ರಪತಿ ಚುನಾವಣೆ ಪ್ರಾರಂಭ; ಮತದಾನ ಮಾಡಿದ ಪ್ರಧಾನಿ ಮೋದಿ

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಸೇರಿ ಎಲ್ಲರೂ ಮತ ಚಲಾಯಿಸಿದರು.

ಮತ ಚಲಾವಣೆಗೆ ಮುಂದಾದ ಸಿಎಂ ಬಸವರಾಜ ಬೊಮ್ಮಾಯಿ, ಮತ ಚಲಾಯಿಸಿ ಹೊರನಡೆಯುತ್ತಿರುಯವ ಮಾಜಿ ಸಿಎಂ ಬಿ.ಎಸ್​​. ಯಡಿಯೂರಪ್ಪ

ದೇಶದ ಒಟ್ಟು 776 ಸಂಸತ್​​ ಸದಸ್ಯರಿಗೆ ಒಟ್ಟು 5,43,200 ಮತಮೌಲ್ಯ, ಒಟ್ಟು 4,033 ಶಾಸಕರಿಗೆ ಒಟ್ಟು 5,43, 231 ಮತಮೌಲ್ಯ ಸೇರಿ ಒಟ್ಟಾರೆಯಾಗಿ 4,809 ಮತದಾರರು 10,86, 432 ಮತಗಳ ಮೌಲ್ಯ ಹೊಂದಿದ್ದಾರೆ.

ಪ್ರತಿ ಶಾಸಕರಿಗೆ ಮತ ಮೌಲ್ಯವನ್ನು ಅವರು ಪ್ರತಿನಿಧಿಸುವ ರಾಜ್ಯದಲ್ಲಿ  1971ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಮಾಡಲಾಗುತ್ತದೆ. ಅದರಂತೆ ಕರ್ನಾಟಕದ ಪ್ರತಿ ಶಾಸಕ ತಲಾ 131 ಮತದಂತೆ ಕರ್ನಾಟಕದಿಂದ ಒಟ್ಟು 29,344 ಮತಮೌಲ್ಯ ಹೊಂದಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಶಾಸಕರನ್ನು ಹಾಗೂ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದ ಪ್ರತಿ ಶಾಸಕ ತಲಾ 208 ಮತಮೌಲ್ಯದೊಂದಿಗೆ ಒಟ್ಟಾರೆಯಾಗಿ 83,824 ಮತಮೌಲ್ಯ ಹೊಂದಲಾಗಿದೆ. ಅದೇ ರೀತಿ ಸಿಕ್ಕಿಂನ ಪ್ರತಿ ಶಾಸಕ 7 ಮತಗಳೊಂದಿಗೆ ಒಟ್ಟು 224 ಮತಮೌಲ್ಯ ಹೊಂದಲಾಗಿದೆ.

ಸಿ.ಟಿ. ರವಿಗೆ ಹುಟ್ಟು ಹಬ್ಬದ ಸಂಭ್ರಮ

ಮಾಜಿ ಸಚಿವ ಹಾಗೂ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಜನ್ಮದಿನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿ ಜನಪ್ರತಿನಿಧಿಗಳು ಶುಭಾಶಯ ಕೋರಿದರು. ಶಾಸಕರ ಸಭೆಗೆ ಆಹ್ವಾನಿಸಲಾಗಿದ್ದ ಶಾಂಗ್ರಿಲಾ ಹೋಟೆಲ್​​ನಲ್ಲೆ ಹೂಗುಚ್ಛ ನೀಡಿ ಶುಭಾಶಯ ಕೋರಲಾಯಿತು.

ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮತದಾನದ ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈಗಾಗಲೆ 20 ಶಾಸಕರು ಯಶವಂತ್​ ಸಿನ್ಹಾ ಅವರಿಗೆ ಮತ ಚಲಾಯಿಸಿದ್ದಾರೆ. ಸಂಜೆವರೆಗೂ ಸಮಯವಿದ್ದು, ಇನ್ನೂ ಅನೇಕರು ಮತ ಚಲಾಯಿಸುತ್ತಾರೆ. ದೇಶಕ್ಕೆ ಒಳ್ಳೆಯ ದಿನ ಬರುತ್ತದೆ ಎಂದು ಜನರು ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದರು. ಆದರೆ ಮಹಾರಾಷ್ಟ್ರ ಬಿಟ್ಟರೆ ಹೆಚ್ಚು ತೆರಿಗೆ ನೀಡುವ ರಾಜ್ಯ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಅನುದಾನ ನೀಡಿದ್ದಾರೆ. ಎಂಟು ವರ್ಷದಲ್ಲಿ ರಾಜ್ಯದಿಂದ 19 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಅದರಂತೆ 40% ರೀತಿಯಲ್ಲಿ ರಾಜ್ಯಕ್ಕೆ 8 ಲಕ್ಷ ಕೋಟಿ ರೂ. ನೀಡಬೇಕಿತ್ತು. ಆದರೆ ಕೇವಲ 1.29 ಲಕ್ಷ ಕೋಟಿ ರೂ. ನೀಡಿರುವುದಾಗಿ ತಿಳಿಸುತ್ತಿದ್ದಾರೆ. ಎಲ್ಲ ಅಗತ್ಯವಸ್ತುಗಳ ಬೆಲೆಯನ್ನೂ ಹೆಚ್ಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Maha politics: ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಬೆಂಬಲಿಸಲು 16 ಶಿವಸೇನಾ ಸಂಸದರ ಒಲವು

Exit mobile version