ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದಾಖಲೆಯ 145 ಪೇಟೆಂಟ್‌ಗಳನ್ನು ಗಳಿಸಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (Indian Institute of Science- IISC) ಸಾಧನೆಯನ್ನು ಭಾನುವಾರ ತಮ್ಮ 97ನೇ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದಾರೆ.
ಪ್ರಿಯ ದೇಶವಾಸಿಗಳೇ, ನಿಮಗೊಂದು ಸಂತಸದ ಸಂಗತಿಯನ್ನು ಹೇಳುತ್ತೇನೆ. ದೇಶದ ಅತ್ಯಂತ ಹಳೆಯ ವಿಜ್ಞಾನ ಸಂಸ್ಥೆಗಳಲ್ಲೊಂದಾಗಿರುವ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಅನ್ನು ಜೆಮ್‌ಶೆಡ್‌ಜೀ ಟಾಟಾ ಮತ್ತು ಸ್ವಾನಿ ವಿವೇಕಾನಂದರ ಪ್ರೇರಣೆಯಂತೆ ಸ್ಥಾಪಿಸಲಾಯಿತು. ಈ ಮಹತ್ವದ ಸಂಸ್ಥೆ 2022ರಲ್ಲಿ ಒಟ್ಟು 145 ಪೇಟೆಂಟ್‌ಗಳನ್ನು ತನ್ನ ಹೆಸರಿಗೆ ಬರೆಸಿಕೊಂಡಿದೆ. ಅಂದರೆ ಪ್ರತಿ 5 ದಿನಕ್ಕೊಮ್ಮೆ ಎರಡು ಪೇಟೆಂಟ್‌ಗಳನ್ನು ಗಳಿಸಿಕೊಂಡಿದೆ. ಈ ದಾಖಲೆ ಗಮನಾರ್ಹವಾಗಿದೆ. ಇದಕ್ಕಾಗಿ ಐಐಎಸ್ಸಿಯ ವಿಜ್ಞಾನಿಗಳ ತಂಡವನ್ನು ಅಭಿನಂದಿಸುತ್ತೇನೆ. ಭಾರತ ಇವತ್ತು ಜಾಗತಿಕ ಪೇಟೆಂಟ್ ವಿಚಾರದಲ್ಲಿ 7ನೆಯ ಮತ್ತು ಟ್ರೇಡ್ ಮಾರ್ಕ್‌ನಲ್ಲಿ 5ನೆಯ ರ‍್ಯಾಂಕ ಗಳಿಸಿದೆ. ಕಳೆದ ಐದು ವರ್ಷಗಳಲ್ಲಿ ಪೇಟೆಂಟ್ ಗಳಿಕೆಯಲ್ಲಿ 50% ಏರಿಕೆಯಾಗಿದೆ. ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಸ್ಥಾನ 2015-22 ಅವಧಿಯಲ್ಲಿ 80ರಿಂದ 40ಕ್ಕೆ ಸುಧಾರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿ-20 ಶೃಂಗ ಕಾರ್ಯಕ್ರಮಗಳು ಚುರುಕು
ದೇಶದಲ್ಲಿ ಜಿ20 ಶೃಂಗ ಕುರಿತ ಕಾರ್ಯಕ್ರಮಗಳು ಚುರುಕಾಗಿವೆ. ಭಾರತದ ಪ್ರತಿಯೊಂದು ಮೂಲೆಯಲ್ಲೂ ಇದು ನಡೆಯುತ್ತಿದೆ. ಅಲ್ಲಿ ಪೌಷ್ಟಿಕಾಹಾರಗಳು, ಸ್ಥಳೀಯ ವೈವಿಧ್ಯಮಯ ಸಿರಿಧಾನ್ಯಗಳ ಆಹಾರಗಳು ಸರಬರಾಜಾಗುತ್ತವೆ. ಸಜ್ಜೆಯಿಂದ ತಯಾರಿಸಿದ ಖಿಚಡಿ, ರಾಗಿ ಪಾಯಸ, ರೋಟಿ, ಪೂರಿ, ದೋಸೆ ಇತ್ಯಾದಿಗಳನ್ನು ಅತಿಥಿಗಳಿಗೆ ಬಡಿಸಲಾಗುತ್ತಿದೆ. ಸಿರಿ ಧಾನ್ಯಗಳನ್ನು ಈ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲಾಗುತ್ತಿದೆ. ಜಿ20 ಕಾರ್ಯಕ್ರಮಗಳು ಇರುವಲ್ಲಿ ಸಿರಿ ಧಾನ್ಯಗಳ ಮಳಿಗೆಗಳನ್ನೂ ತೆರೆಯಲಾಗುತ್ತಿದೆ ಎಂದು ವಿವರಿಸಿದರು.
ಕಾಶ್ಮೀರದ ಪ್ರವಾಸಕ್ಕೆ ಕರೆ: ಕಾಶ್ಮೀರ ಕಣಿವೆಯಲ್ಲಿ ಹಿಮಾಚ್ಛಾದಿತ ಗಿರಿ ಕಂದರಗಳು ಈಗ ಶೋಭಾಯಮಾನವಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಅನೇಕ ಮಂದಿ ಭೇಟಿ ನೀಡಿದ ಬಳಿಕ ಜಾಲತಾಣಗಳಲ್ಲಿ ಸುಂದರವಾದ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಅವುಗಳನ್ನು ನೋಡುವವರಿಗೆ ತಾವೂ ಒಮ್ಮೆಯಾದರೂ ಭೇಟಿ ನೀಡಬೇಕು ಎಂದು ಅನ್ನಿಸದೆ ಇರಲಾರದು. ಅವುಗಳು ಅಷ್ಟು ಮನೋಹರವಾಗಿವೆ ಎಂದರು.