ತಿರುವನಂತಪುರಂ: ಈ ಬಾರಿಯ ಲೋಕಸಭಾ ಚುನಾವಣೆ (Lok Sabha polls)ಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಸ್ಪರ್ಧಿಸುತ್ತಾರೆ ಎನ್ನುವ ಎನ್ನುವ ನಿರೀಕ್ಷೆ ಇತ್ತು. ಸೋನಿಯಾ ಗಾಂಧಿ ತೆರವುಗೊಳಿಸಿದ್ದ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಆದರೆ ಅವರು ಎಲ್ಲರ ನಿರೀಕ್ಷೆಯನ್ನು ತಲೆ ಕೆಳಗಾಗಿಸಿ ಪ್ರಚಾರದಲ್ಲಿ ಮತ್ರ ತೊಡಗಿಸಿಕೊಂಡಿದ್ದರು. ಇತ್ತ ಕೇರಳದ ವಯನಾಡು ಮತ್ತು ರಾಯ್ ಬರೇಲಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ (Rahul Gandhi) ಎರಡೂ ಕಡೆ ಜಯ ಗಳಿಸಿದ್ದಾರೆ. ಇದೀಗ ಅವರು ಒಂದು ಕಡೆ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕಿದೆ. ಮೂಲಗಳ ಪ್ರಕಾರ ಅವರು ವಯನಾಡು ಕ್ಷೇತ್ರವನ್ನು ತೊರೆಯಲಿದ್ದು, ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ರಾಯ್ ಬರೇಲಿ ಮತ್ತು ವಯನಾಡು ಎರಡೂ ಕಡೆ ರಾಹುಲ್ ಗಾಂಧಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ. 2019ರಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿದ್ದ ಅವರು ಅಮೇಥಿಯಲ್ಲಿ ಬಿಜೆಪಿಯ ಸ್ಲೃತಿ ಇರಾನಿ ವಿರುದ್ಧ ಸೋತಿದ್ದರು. ವಯನಾಡಿನಲ್ಲಿ ಸತತ ಎರಡನೇ ಬಾರಿ ಜಯ ಗಳಿಸಿದ ಅವರು ಇದೀಗ ಅನಿವಾರ್ಯವಾಗಿ ಅಲ್ಲಿನ ಸ್ಥಾನವನ್ನು ತ್ಯಜಿಸಬೇಕಾಗಿದೆ. ಹೀಗಾಗಿ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸೂಚನೆ ನೀಡಿದ ರಾಹುಲ್ ಗಾಂಧಿ?
ಲೋಕಸಭಾ ಚುನಾವಣೆಯ ಬಗ್ಗೆ ಮಂಗಳವಾರ (ಜೂನ್ 11) ಮಾತನಾಡಿದ್ದ ರಾಹುಲ್ ಗಾಂಧಿ, ʼʼಒಂದು ವೇಳೆ ವಾರಣಾಸಿಯಲ್ಲಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು 2-3 ಲಕ್ಷ ಮತಗಳ ಅಂತರಿಂದ ಸೋಲುತ್ತಿದ್ದರುʼʼ ಎಂದು ಹೇಳಿದ್ದರು. ಆ ಮೂಲಕ ಅವರು ಪ್ರಿಯಾಂಕಾ ಗಾಂಧಿ ಅವರ ಚೊಚ್ಚಲ ಸ್ಪರ್ಧೆಯ ಸುಳಿವು ನೀಡಿದ್ದರಾ ಎನ್ನುವ ಸಂಶಯ ಮೂಡಿದೆ.
ಇದೇ ಮೊದಲಲ್ಲ
ಹಾಗೆ ನೋಡಿದರೆ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ವದಂತಿ ಹಬ್ಬುತ್ತಿರುವುದು ಇದು ಮೊದಲ ಸಲವೇನಲ್ಲ. 2019ರ ಲೋಕಸಭಾ ಚುನಾವಣೆಯಿಂದಲೂ ಅವರು ಕಣಕ್ಕಿಳಿಯುತ್ತಾರೆ ಎಂಬ ವದಂತಿ ಇದೆ. ಆಗ ಬಿಜೆಪಿ ಅಲೆಯನ್ನು ತಡೆಯಲು ಕಾಂಗ್ರೆಸ್ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲಿದೆ ಎಂದೇ ಊಹಿಸಲಾಗಿತ್ತು. ಆದರೆ ಅವರು ಸ್ಪರ್ಧಿಸಿರಲಿಲ್ಲ.
ಬಳಿಕ 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಪ್ರಿಯಾಂಕಾ ಗಾಂಧಿ ಹೆಸರು ಮತ್ತೆ ಚಾಲ್ತಿಗೆ ಬಂತು. ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿತ್ತು. ಆಗಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆಯೇ ಎದುರಾಗಿತ್ತು. ಇನ್ನು 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ರಾಯ್ ಬರೇಲಿ ಕ್ಷೇತ್ರವನ್ನು ತೊರೆದು ರಾಜ್ಯಸಭೆಯತ್ತ ಮುಖ ಮಾಡಿದರು. ಆಗಲಾದರೂ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಜತೆಗೆ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಾರೆ ಎಂದೂ ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಕಣಕ್ಕಿಳಿದರು. ಅಮೇಥಿಯಲ್ಲಿ ಕಾಂಗ್ರೆಸ್‌ನಿಂದ ಕಿಶೋರಿ ಲಾಲ್ ಶರ್ಮಾ ಸ್ಪರ್ಧಿಸಿ ಜಯ ಗಳಿಸಿದರು.
ಇದನ್ನೂ ಓದಿ: Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್ ಗಾಂಧಿ; ಏಕಿಂಥ ಮಾತು?
ಒಂದು ವೇಳೆ ರಾಹುಲ್ ಗಾಂಧಿ ವಯನಾಡು ಕ್ಷೇತ್ರವನ್ನು ತ್ಯಜಿಸುವುದೇ ಆಗಿದ್ದರೆ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂದು ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸಿ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈಗಲಾದರೂ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುತ್ತಾರಾ ಎನ್ನುವ ಪ್ರಶ್ನೆ ಮೂಡಿದ್ದು, ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ.