ಮುಂಬೈ: ಬೆಳಿಗ್ಗೆ ಆರೋಗ್ಯಕರ ಉಪಾಹಾರ ಬಳಿಕ ಪ್ರಾರ್ಥನೆ ನಂತರ ಮೂರು ಗಂಟೆ ಅಧ್ಯಯನ, ವಿಶ್ರಾಂತಿ…ಇದು ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬನ ದಿನಚರಿಯಲ್ಲ. ಬದಲಿಗೆ ಪುಣೆಯಲ್ಲಿ ಮದ್ಯ ಸೇವಿಸಿ, ತಂದೆಯ 2.5 ಕೋಟಿ ರೂ. ಮೌಲ್ಯದ ಐಷಾರಾಮಿ ಪೋರ್ಷೆ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಿಸಿ ಇಬ್ಬರ ಸಾವಿಗೆ ಕಾರಣನಾದ 17 ವರ್ಷದ ಬಾಲಾಪರಾಧಿಗೆ ಜೈಲಿನಲ್ಲಿ ಸಿಕ್ಕ ಆತಿಥ್ಯ (Crime News).
ಸದ್ಯ ಜೂನ್ 5ರವರೆಗೆ ಅಪ್ರಾಪ್ತನನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ಅಲ್ಲಿ ಆತನಿಗೆ ಪೋಹಾ, ಉಪ್ಮಾ, ಮೊಟ್ಟೆ ಮತ್ತು ಹಾಲಿನ ಉಪಹಾರ ನೀಡಲಾಗುತ್ತದೆ. ಇದನ್ನು ಬೆಳಿಗ್ಗೆ 8ರಿಂದ 10ರವರೆಗೆ ವಿತರಿಸಲಾಗುತ್ತದೆ. ಈತನಿಗೆ ಪ್ರತಿ ದಿನ ಒಂದು ಗಂಟೆ ವಿಶ್ರಾಂತಿ ನೀಡಲಾಗುತ್ತದೆ. ಜತೆಗೆ ದೈನಂದಿನ ಪ್ರಾರ್ಥನೆಗೂ ಅವಕಾಶ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟೈಮ್ ಟೇಬಲ್
ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ತರಗತಿಗೆ ಹಾಜರಾಗುವ ಆತನಿಗೆ 1ರಿಂದ 4 ಗಂಟೆ ತನಕ ವಿಶ್ರಾಂತಿಗೆ ಸಮಯಾವಕಾಶ ನೀಡಲಾಗಿದೆ. ಸಂಜೆ 4 ಗಂಟೆಗೆ ತಿಂಡಿ ಸರಬರಾಜು ಮಾಡಲಾಗುತ್ತದೆ. ಬಳಿಕ 1 ಗಂಟೆ ಟಿವಿ ವೀಕ್ಷಣೆಯ ಸಮಯ. ನಂತರ 2 ಗಂಟೆ ಕಾಲ ಔಟ್ ಡೋರ್ ಕ್ರೀಡೆಗೆ ಅವಕಾಶ ಇದೆ. ಫುಟ್ಬಾಲ್ ಅಥವಾ ವಾಲಿಬಾಲ್ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತೆ ಸಂಜೆ ಏಳು ಗಂಟೆಗೆ ಬಾಲಾಪರಾಧಿಗೆ ಊಟ ವಿತರಿಸಲಾಗುತ್ತದೆ. ಇದು ತರಕಾರಿ, ದಾಲ್, ಅನ್ನ ಮತ್ತು ರೊಟ್ಟಿಯನ್ನು ಒಳಗೊಂಡಿದೆ. ರಾತ್ರಿ 8 ಗಂಟೆಗೆ ನಿದ್ದೆ ಮಾಡುವ ಸಮಯ.
पुण्यातील घटनेचा सीसीटीव्ही पाहिल्यावर साधारण अग्रवालची पोर्शे किती वेगाने चालली होती ते कळेल. #pune pic.twitter.com/cYRVQBMjaG
— Omkar Wable (@omkarasks) May 20, 2024
ಏನಿದು ಪ್ರಕರಣ?
17 ವರ್ಷದ ಈತ ಶನಿವಾರ ಪುಣೆಯಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಕೋರೆಗಾಂವ್ ಪಾರ್ಕ್ ಸಮೀಪ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಬಳಿಕ ಅತನಿಗೆ ಜಾಮೀನು ಸಿಕ್ಕಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬ ಷರತ್ತು ವಿಧಿಸಿತ್ತು. ಇದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ತೀರ್ಪನ್ನು ಬದಲಾಯಿಸಿ ಜೂನ್ 5ರ ತನಕ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ: ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್ ಮಾಲೀಕನ ವಿರುದ್ಧವೂ ಕ್ರಮ
ಮದ್ಯ ಸೇವಿಸಿದ್ದ
ಇನ್ನು ಅಪಘಾತ ನಡೆಸಿದ 17 ವರ್ಷದ ಬಾಲಕನ ತಂದೆಯನ್ನು ಪುಣೆ ಪೊಲೀಸರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದರು. ಜತೆಗೆ ಬಾಲಕನಿಗೆ ಮದ್ಯ ಸರಬರಾಜು ಮಾಡಿದ್ದ ಬಾರ್ ಮಾಲೀಕನ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದರು. ಅಪಘಾತ ನಡೆಯುವ ಮುನ್ನ ಸ್ಥಳೀಯ ಪಬ್ ಒಂದರಲ್ಲಿ ಅಪ್ರಾಪ್ತ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡಿ ಮದ್ಯ ಸೇವಿಸಿದ್ದರು. ಪಬ್‌ಗಳಲ್ಲಿ ಸುಮಾರು ಒಂದೂವರೆ ಗಂಟೆ ಕಳೆದಿದ್ದ ಇವರು ಸುಮಾರು 48 ಸಾವಿರ ರೂ. ಬಿಲ್ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.