ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ (ಆರ್‌ಎಸ್‌ಎಸ್) ಒಂದು ಮೂಲಭೂತವಾದಿ ಹಾಗೂ ಸರ್ವಾಧಿಕಾರಿ ಸಂಘಟನೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲಂಡನ್‌ನಲ್ಲಿ ಕಿಡಿ ಕಾರಿದ್ದಾರೆ.
ತಮ್ಮ ಒಂದು ವಾರದ ಬ್ರಿಟನ್ ಭೇಟಿಯ ಕೊನೆಯಲ್ಲಿ ಸೋಮವಾರ ಲಂಡನ್‌ನ ಚಾತಂ ಹೌಸ್‌ನಲ್ಲಿ ನಡೆದ ಸಂವಾದದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಪರ್ಧಾತ್ಮಕತೆ ಇಂದು ಸಂಪೂರ್ಣ ಬದಲಾಗಿದೆ, ಅದಕ್ಕೆ ಕಾರಣ ಆರ್‌ಎಸ್‌ಎಸ್. ಆರ್‌ಎಸ್‌ಎಸ್ ದೇಶದ ಎಲ್ಲ ಸಂಸ್ಥೆಗಳನ್ನು ಕಬಳಿಸಿರುವ ಮೂಲಭೂತವಾದಿ, ಸರ್ವಾಧಿಕಾರಿ ಸಂಘಟನೆ. ಅದೊಂದು ರಹಸ್ಯ ಸಮುದಾಯ. ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯಂತೆಯೇ ಅದು ಕೂಡ. ಪ್ರಜಾಪ್ರಭುತ್ವದ ಸ್ಪರ್ಧೆಯನ್ನು ಬಳಸಿಕೊಂಡು ಅಧಿಕಾರಕ್ಕೆ ಬರುವುದು, ನಂತರ ಅದನ್ನು ಬದಲಾಯಿಸುವುದು ಅದರ ಉದ್ದೇಶ ಎಂದು ರಾಹುಲ್ ನುಡಿದರು.
ಇದರೊಂದಿಗೆ ಅವರು ಯುಪಿಎ ಸರ್ಕಾರದ ವೈಫಲ್ಯದ ಕಾರಣವನ್ನೂ ವಿಶ್ಲೇಷಿಸಿದರು. ಭಾರತದಲ್ಲಿ ಬದಲಾಗುತ್ತಿರುವ ರಾಜಕೀಯ ಸಂವಾದದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ವಿಫಲವಾದದ್ದೇ ಯುಪಿಎ ಸರ್ಕಾರದ ಸೋಲಿಗೆ ಕಾರಣವಾಗಿತ್ತು ಎಂದರು.
ತಾವು ಶಾಶ್ವತವಾಗಿ ಅಧಿಕಾರದಲ್ಲಿ ಇರಲಿದ್ದೆವೆಂದು ಬಿಜೆಪಿಯವರು ಭಾವಿಸಿದ್ದಾರೆ. ಆದರೆ ಅದು ಹಾಸ್ಯಾಸ್ಪದ ಯೋಚನೆ. ಭಾರತದಲ್ಲಿ ಬಿಜೆಪಿ ಆಡಳಿತದಡಿ ದಲಿತರು, ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದನ್ನು ವಿದೇಶಿ ಮಾಧ್ಯಮಗಳೂ ವರದಿ ಮಾಡಿವೆ ಎಂದು ರಾಹುಲ್ ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: Rahul Gandhi In UK Parliament: ಭಾರತದಲ್ಲಿ ಪ್ರತಿಪಕ್ಷಗಳ ಧ್ವನಿ ದಮನ, ಬ್ರಿಟನ್ ಸಂಸತ್ತಲ್ಲಿ ರಾಹುಲ್ ಗಾಂಧಿ ಹೇಳಿಕೆ