Site icon Vistara News

Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

Rahul Gandhi

ನವದೆಹಲಿ: ಇಂದು ಸಂಸತ್ತಿನ ಮುಂಗಾರು ಅಧಿವೇಶನ(Parliament Session)ದ ಒಂಬತ್ತನೇ ದಿನ. ಇಂದು ದೆಹಲಿ ಕೋಚಿಂಗ್‌ ಸೆಂಟರ್‌ ದುರಂತ, ಅಗ್ನಿಪಥ್‌ ಯೋಜನೆ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ರಾಹುಲ್‌ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌(Nirmala Seetharaman) ಮುಖ ಮುಚ್ಚಿಕೊಂಡ ಅಪರೂಪದ ಘಟನೆಗೆ ಸದನ ಸಾಕ್ಷಿಯಾಯಿತು.

ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಹಲ್ವಾ ಕಾರ್ಯಕ್ರಮ(Halwa Ceremony)ದ ಫೋಟೋ ಪ್ರದರ್ಶನ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ನಗುತ್ತಾ ಮುಖ ಮುಚ್ಚಿಕೊಂಡರು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ ಅಲ್ಲದೇ ಹಲವು ಪರ ವಿರೋಧ ಟೀಕೆಗಳು ವ್ಯಕ್ತವಾಗಿವೆ. ಕೇಂದ್ರ ಬಜೆಟ್ ನ್ನು ಮಧ್ಯಮ ವರ್ಗ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಟೀಕಾ ಪ್ರಹಾರ ನಡೆಸಿದರು.

ರಾಹುಲ್ ಗಾಂಧಿ ಬಜೆಟ್ ಪೂರ್ವದಲ್ಲಿ ನಡೆಯುವ ಸಾಂಪ್ರದಾಯಿಕ ಹಲ್ವಾ ಸಮಾರಂಭದ ಪೋಸ್ಟರ್ ನ್ನು ಪ್ರದರ್ಶಿಸಿದ್ದು, ಬಜೆಟ್ ತಯಾರಿಕೆಯ ತಂಡದಲ್ಲಿದ್ದ 20 ಅಧಿಕಾರಿಗಳ ಪೈಕಿ ದಲಿತರು, ಒಬಿಸಿ, ಆದಿವಾಸಿಗಳು ಇಲ್ಲವೇ ಇಲ್ಲ. 20 ಅಧಿಕಾರಿಗಳ ಪೈಕಿ ಯಾರೊಬ್ಬರೂ ಹಿಂದುಳಿದ ವರ್ಗ, ದಲಿತ ಹಾಗೂ ಆದಿವಾಸಿ ಸಮುದಾಯಕ್ಕೆ ಸೇರಿದವರು ಇಲ್ಲ. ನಾನು ಬೇಕಿದ್ದರೆ ಅವರ ಹೆಸರುಗಳನ್ನೂ ಹೇಳಬಲ್ಲೆ ಎಂದರು. ಈ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅವರು ಹಣೆ ಚಚ್ಚಿಕೊಂಡು, ತಮ್ಮ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ನಕ್ಕರು.

ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದಾರೆ. “ಮಹಾಭಾರತದ ಚಕ್ರವ್ಯೂಹದಂತೆ (Chakravyuh) ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಸಾವಿರಾರು ವರ್ಷಗಳ ಹಿಂದೆ, ಹರಿಯಾಣದಲ್ಲಿ ಕುರುಕ್ಷೇತ್ರ ನಡೆಯುವಾಗ 6 ಜನ ಸೇರಿ ಚಕ್ರವ್ಯೂಹವನ್ನು ರಚಿಸಿದ್ದರು. ಆರು ಜನ ಸೇರಿ ಆ ಚಕ್ರವ್ಯೂಹದಲ್ಲಿ ಅಭಿಮನ್ಯುವಿನನ್ನು ಸಿಲುಕಿಸಿ ಕೊಲೆ ಮಾಡಿದರು. ನಾನು ಚಕ್ರವ್ಯೂಹದ ಕುರಿತು ಸಣ್ಣದೊಂದು ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯಲಾಗುತ್ತದೆ. ಪದ್ಮವ್ಯೂಹ ಎಂದರೆ ಕಮಲದ ರಚನೆಯಾಗಿದೆ. ಚಕ್ರವ್ಯೂಹ ಕೂಡ ಕಮಲದ ಆಕಾರದಲ್ಲಿದೆ” ಎಂಬುದಾಗಿ ಬಿಜೆಪಿಯನ್ನು ಕುಟುಕಿದರು.

ಇದನ್ನೂ ಓದಿ: Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Exit mobile version