ನವದೆಹಲಿ: ಪದೇಪದೆ ವಿದೇಶಕ್ಕೆ ಹೋಗುವ ವಿಚಾರದಲ್ಲಿ ಬಿಜೆಪಿಯಿಂದ ಟ್ರೋಲ್‌ಗೆ ಒಳಗಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೆ ಫಾರಿನ್‌ಗೆ ಹೋಗಿದ್ದಾರೆ! ಕಾಂಗ್ರೆಸ್ ಪಕ್ಷದ ಕೆಲವೊಂದು ಮಹತ್ವದ ಸಭೆಗಳು ನಿಗದಿಯಾಗಿರುವ ನಡುವೆಯೇ ಅವರು ವಿದೇಶಕ್ಕೆ ಹಾರಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.
ಅವರು ಮಂಗಳವಾರ ರಾತ್ರಿಯೇ ವಿಮಾನ ಹತ್ತಿದ್ದಾರೆ. ಆದರೆ, ಹೋಗಿದ್ದು ಎಲ್ಲಿಗೆ ಎನ್ನುವುದರ ಬಗ್ಗೆ ಪಕ್ಷ ಯಾವುದೇ ಮಾಹಿತಿ ನೀಡಿಲ್ಲ. ಇದೊಂದು ಖಾಸಗಿ ಭೇಟಿ ಎಂದಷ್ಟೇ ಹೇಳಿದೆ. ಅವರು ಮುಂದಿನ ಭಾನುವಾರ ಮರಳಿ ಬರುವ ಸಾಧ್ಯತೆ ಇದೆ. ಜುಲೈ ೧೮ರ ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನ ಮತ್ತು ರಾಷ್ಟ್ರಪತಿ ಚುನಾವಣೆಗೆ ಅವರು ಲಭ್ಯರಿರಲಿದ್ದಾರೆ.
ವಿಶೇಷವೆಂದರೆ, ಗುರುವಾರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಮಹತ್ವದ ಸಭೆಯೊಂದನ್ನು ಆಯೋಜಿಸಲಾಗಿದೆ. ಅತ್ಯಂತ ಮಹತ್ವಾಕಾಂಕ್ಷೆಯ ಭಾರತ್ ಜೋಡೊ ಯಾತ್ರಾ ಮತ್ತು ಪಕ್ಷದ ಆಂತರಿಕ ಚುನಾವಣೆಗೆ ಸಂಬಂಧಿಸಿ ಮಹತ್ವದ ಚರ್ಚೆ ಇಲ್ಲಿ ನಡೆಯಲಿದೆ. ಆದರೆ, ಇದೆಲ್ಲದಕ್ಕೂ ಕೈಕೊಟ್ಟು ವಿದೇಶಕ್ಕೆ ಹಾರಿದ್ದು ಅಚ್ಚರಿ ಮೂಡಿಸಿದೆ.
ದೇಶದೆಲ್ಲೆಡೆಯ ಪ್ರಮುಖ ನಾಯಕರು ಭಾಗವಹಿಸುವ ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷತೆ ವಿಚಾರದಲ್ಲಿ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ರಾಹುಲ್ ಗಾಂಧಿ ಅವರು ಈ ಹಿಂದೆ ಅಧ್ಯಕ್ಷರಾಗಿದ್ದರು. ೨೦೧೯ರ ಲೋಕಸಭಾಚ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಬಳಿಕ ಯಾರೂ ಅದಕ್ಕೆ ತಲೆ ಕೊಡುವವರೇ ಇಲ್ಲದಾಗ ಸೋನಿಯಾ ಗಾಂಧಿ ಅವರು ಮತ್ತೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು.
ಭೇಟಿಯ ಸುತ್ತ ವಿವಾದಗಳ ಹುತ್ತ
ರಾಹುಲ್ ಗಾಂಧಿ ಅವರ ವಿದೇಶ ಯಾತ್ರೆಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಪಕ್ಷದ ಸಂಕಷ್ಟ ಕಾಲದಲ್ಲೆಲ್ಲ ಅವರು ಇಟಲಿಯ ಅಜ್ಜಿ ಮನೆಗೆ ಹೋಗಿರುತ್ತಾರೆ ಎಂದೆಲ್ಲ ಚರ್ಚೆಗಳೆದ್ದಿವೆ. ಕಳೆದ ಬಾರಿ ಪಂಜಾಬ್ ಮತ್ತು ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳ ಚುನಾವಣೆಯ ಸೋಲಿನ ಬಳಿಕ ರಾಹುಲ್ ನೇಪಾಳಕ್ಕೆ ಭೇಟಿ ನೀಡಿದ್ದರು. ಕಠ್ಮಂಡುವಿನ ನೈಟ್ ಕ್ಲಬ್‌ಗೆ ಹೋಗಿದ್ದೂ ಈ ಸಂದರ್ಭದಲ್ಲಿ ಸುದ್ದಿಯಾಗಿತ್ತು.
ಕೆಲವೇ ಸಮಯದಲ್ಲಿ ಅವರು ಇಂಗ್ಲೆಂಡ್‌ನ ಕೇಂಬ್ರಿಜ್‌ಗೆ ಹೋಗಿದ್ದು ಕೂಡಾ ಚರ್ಚೆಗೆ ಕಾರಣವಾಗಿತ್ತು. ಅಲ್ಲಿಗೆ ಹೋಗಲು ದೇಶದ ಆಡಳಿತ ವ್ಯವಸ್ಥೆಯಿಂದ ಅನುಮತಿ ಪಡೆಯಬೇಕಿತ್ತು ಎಂದು ಬಿಜೆಪಿ ವಾದಿಸಿತ್ತು. ಆದರೆ, ಕಾಂಗ್ರೆಸ್ ಅದೆಲ್ಲ ಅಗತ್ಯವಿಲ್ಲ ಎಂದಿತ್ತು.
ಕೇಂಬ್ರಿಜ್‌ನಲ್ಲಿ ಅವರು ಬ್ರಿಟಿಷ್ ಲೇಬರ್ ಪಾರ್ಟಿಯ ನಾಯಕ ಮತ್ತು ಸಂಸದ ಜೆರೆಮಿ ಕೋರ್ಬಿನ್ ಅವರನ್ನು ಭೇಟಿಯಾಗಿದ್ದರು. ಈ ವ್ಯಕ್ತಿ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವ ವಾದವನ್ನು ವಿರೋಧಿಸುವವರಾಗಿದ್ದಾರೆ. ಅವರನ್ನು ಭೇಟಿಯಾದ ಬಗ್ಗೆ ಭಾರತೀಯ ರಾಯಭಾರ ಕಚೇರಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನೂ ಓದಿ| ಹೈಕೋರ್ಟ್ ಜಡ್ಜ್ ವಿಡಿಯೋ ಹಂಚಿಕೆ: ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು