ನವ ದೆಹಲಿ: ನೋಟು ಅಮಾನ್ಯತೆಯ 6ನೇ ವರ್ಷಾಚರಣೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರು ಪೇಸಿಎಂ ಮಾದರಿಯಲ್ಲಿ ಪೇಪಿಎಂ (PayPM) ಪ್ರಧಾನಿ ಎಂಬ ಟೀಕಾಸ್ತ್ರವನ್ನು ಪ್ರಯೋಗಿಸಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇತ್ತೀಚೆಗೆ, ಪೇಸಿಎಂ (PayCM) ಹೆಸರಿನಲ್ಲಿ ಡಿಜಿಟಲ್ ಅಭಿಯಾನ ನಡೆಸಿತ್ತು. ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ, ಕ್ಯೂ ಆರ್ ಕೋಡ್ ಹೊಂದಿರುವ ಪೋಸ್ಟರ್‌ಗಳನ್ನು ನಾನಾ ಕಡೆಗಳಲ್ಲಿ ಪ್ರದರ್ಶಿಸಿ ವಿನೂತನ ಬಗೆಯ ಅಭಿಯಾನ ನಡೆಸಲಾಗಿತ್ತು. ಇದು ಉಭಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಇದೀಗ ರಾಹುಲ್ ಗಾಂಧಿಯವರು 2016ರ ನವೆಂಬರ್ 8ರಂದು ಘೋಷಣೆಯಾದ ನೋಟು ಅಮಾನ್ಯತೆಯನ್ನು ಉಲ್ಲೇಖಿಸಿ, ಪೇಪಿಎಂ ಪದ ಬಳಸಿ, ವಾಗ್ದಾಳಿ ನಡೆಸಿದ್ದಾರೆ.
ನೋಟ್ ಬ್ಯಾನ್ ಎನ್ನುವುದು “ಪೇಪಿಎಂʼ ದುರುದ್ದೇಶಪೂರ್ವಕವಾಗಿ ಕೈಗೊಂಡಿರುವ ಕ್ರಮ. ಪ್ರಧಾನಿ ತನ್ನ 2-3 ಬಿಲಿಯನೇರ್ ಉದ್ಯಮಿ ಸ್ನೇಹಿತರ ಅನುಕೂಲಕ್ಕಾಗಿ ನೋಟ್ ಬ್ಯಾನ್ ಮಾಡಿದರು. ಇದರಿಂದ ಭಾರತದ ಎಕಾನಮಿಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮ ಸರ್ವ ನಾಶವಾಯಿತು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ ರಾಹುಲ್ ಗಾಂಧಿ ಅವರು ನೋಟು ಅಮಾನ್ಯತೆಯಿಂದ ಆರ್ಥಿಕತೆಗೆ ಅಪಾರ ಹಾನಿಯಾಗಿದೆ ಎಂದು ಬಣ್ಣಿಸಿದ್ದಾರೆ. ನಗದು ರಹಿತ ಆರ್ಥಿಕೆಯನ್ನಾಗಿಸುವಲ್ಲಿ ನೋಟ್ ಬ್ಯಾನ್ ವಿಫಲವಾಗಿದೆ. ಇದು ವ್ಯವಸ್ಥಿತ ಲೂಟಿಯಾಗಿದೆ. ಲಕ್ಷಾಂತರ ಉದ್ಯೋಗ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ನೋಟು ಅಮಾನ್ಯತೆಗೆ ಸಂಬಂಧಿಸಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್, ಅಮರ್ತ್ಯ ಸೇನ್ ಮೊದಲಾದವರ ಹೇಳಿಕೆಗಳನ್ನು ವೀಡಿಯೊ ಒಳಗೊಂಡಿದೆ.