Site icon Vistara News

ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

Bihar Women

Rahul Gandhi’s promise of Rs 1 lakh: Women gathered in large numbers outside a bank In Bihar

ಪಟನಾ: ಲೋಕಸಭೆ ಚುನಾವಣೆ (Lok Sabha Election 2024) ಮುಗಿದು, ಫಲಿತಾಂಶವೂ ಪ್ರಕಟವಾಗಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ದೊರೆತ ಹಿನ್ನೆಲೆಯಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರು ಖಾತೆ ಹಂಚಿಕೆಯನ್ನೂ ಮಾಡಿ ಇಟಲಿಗೆ ತೆರಳಿದ್ದಾರೆ. ಇಷ್ಟಾದರೂ, ರಾಹುಲ್‌ ಗಾಂಧಿ ಅವರು ತಮ್ಮ ಖಾತೆಗೆ ಹಣ ಹಾಕುತ್ತಾರೆ ಎಂದೇ ಮಹಿಳೆಯರು ಭಾವಿಸಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದಲ್ಲಿ ನೂರಾರು ಮಹಿಳೆಯರು ಪಾಸ್‌ಬುಕ್‌ ಹಿಡಿದುಕೊಂಡು, ನಮ್ಮ ಖಾತೆಗೆ ರಾಹುಲ್‌ ಗಾಂಧಿ (Rahul Gandhi) ಹೇಳಿದ ‘ಟಕಾಟಕ್’‌ 1 ಲಕ್ಷ ರೂ. ಜಮೆ ಮಾಡಿ ಎಂದು ಆಗ್ರಹಿಸಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂದು ಮನೆಗೆ ತೆರಳಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರ ಬ್ಯಾಂಕ್‌ ಖಾತೆಗೆ ಮಾಸಿಕ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ. ಜಮೆ ಮಾಡಲಾಗುವುದು ಎಂದು ಚುನಾವಣೆ ಪ್ರಚಾರದ ವೇಳೆ ಘೋಷಣೆ ಮಾಡಿದ್ದರು. ಬಿಹಾರದ ಕೈಮುರ್‌ನಲ್ಲಿ ರಾಹುಲ್‌ ಗಾಂಧಿ ಹೇಳಿದಂತೆ ಮಹಿಳೆಯರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂಬ ವದಂತಿ ಹರಡಿದೆ. ಇದನ್ನು ನಂಬಿದ ನೂರಾರು ಮಹಿಳೆಯರು ಬ್ಯಾಂಕ್‌ ಎದುರು ಪಾಸ್‌ಬುಕ್‌ ಹಿಡಿದು, ನಮ್ಮ ಖಾತೆಗೆ ಒಂದು ಲಕ್ಷ ರೂ. ಜಮೆ ಮಾಡಿ ಎಂದು ಆಗ್ರಹಿಸಿದ್ದಾರೆ. ಕೊನೆಗೆ ಪೊಲೀಸರು ಬಂದು ವಾಸ್ತವ ತಿಳಿಸಿದಾಗ ಮಹಿಳೆಯರು ಹಿಡಿಶಾಪ ಹಾಕುತ್ತ ಮನೆಗೆ ತೆರಳಿದರು ಎನ್ನಲಾಗಿದೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಅವರು ಮಹಿಳೆಯರಿಗೆ 1 ಲಕ್ಷ ರೂ. ನೀಡುವ ಕುರಿತು ಹಲವು ಬಾರಿ ಘೋಷಣೆ ಮಾಡಿದ್ದರು. “ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗಳಿಗೆ ಮಾಸಿಕ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ. ನೀಡಲಾಗುತ್ತದೆ. ದೇಶದ ಬಡ ಮಹಿಳೆಯರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತದೆ. ಇದು ಕಾಂಗ್ರೆಸ್‌ ಗ್ಯಾರಂಟಿಯಾಗಿದೆ. ಟಕಾ ಟಕ್‌ ಅಂತ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ” ಎಂಬುದಾಗಿ ಹೇಳಿದ್ದರು. ಹಾಗಾಗಿ, ಚುನಾವಣೆ ಮುಗಿದ ಕೂಡಲೇ ಮುಸ್ಲಿಂ ಮಹಿಳೆಯರು ಉತ್ತರ ಪ್ರದೇಶದ ಲಖನೌನಲ್ಲಿರುವ ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟಿದ್ದರು.

ಕರ್ನಾಟಕದಲ್ಲೂ ಖಾತೆ ತೆರೆಯಲು ಕ್ಯೂ

ಕಾಂಗ್ರೆಸ್‌ನಿಂದ ಮಹಿಳೆಯರ ಬ್ಯಾಂಕ್‌ ಖಾತೆಗೆ 1 ಲಕ್ಷ ರೂ. ಜಮೆಯಾಗುತ್ತದೆ ಎಂದು ಭಾವಿಸಿ ಬೆಂಗಳೂರಿನ ಹಲವೆಡೆ ಮುಸ್ಲಿಂ ಮಹಿಳೆಯರು ಪೋಸ್ಟ್‌ ಆಫೀಸ್‌ ಎದುರು ಸಾಲಾಗಿ ನಿಂತಿರುವುದು ಕಂಡು ಬಂದಿತ್ತು. ಬೆಂಗಳೂರಿನ ಶಿವಾಜಿ ನಗರ, ವಸಂತನಗರ ಸೇರಿ ಹಲವೆಡೆ ಮುಸ್ಲಿಂ ಮಹಿಳೆಯರು ಬ್ಯಾಂಕ್‌ ಖಾತೆ ತೆರೆಯಲು ಪೋಸ್ಟ್‌ ಆಫೀಸ್‌ ಎದುರು ಸಾಲುಗಟ್ಟಿ ನಿಂತಿದ್ದರು. ಕಾಂಗ್ರೆಸ್‌ 1 ಲಕ್ಷ ರೂ. ಗ್ಯಾರಂಟಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್‌ ಖಾತೆ ತೆರೆಯಲು ಮುಂದಾಗಿದ್ದರು.

ಇದನ್ನೂ ಓದಿ: Congress Guarantee: ಗ್ಯಾರಂಟಿಗಾಗಿ ದಾಖಲೆ ಅಪ್ಡೇಟ್‌; ಆಧಾರ್‌, ಬ್ಯಾಂಕ್‌, ಪೋಸ್ಟ್‌ ಆಫೀಸ್‌ಗೆ ಮುಗಿಬಿದ್ದ ಜನ

Exit mobile version