ನವ ದೆಹಲಿ: ಗುಜರಾತ್, ಆಂಧ್ರಪದೇಶ, ತೆಲಂಗಾಣ, ಒಡಿಶಾ, ಕರ್ನಾಟಕ, ಅಸ್ಸಾಂ, ಮಹಾರಾಷ್ಟ್ರದಲ್ಲಿ ಮುಂಗಾರು ಅಬ್ಬರ ಮತ್ತು ಪ್ರವಾಹ ಮುಂದುವರಿದಿದೆ. ಭೂ ಕುಸಿತದಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್ನ ವಲ್ಸಾಡ್ ಮತ್ತು ನವಸಾರಿ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ ನರ್ಮದಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಸರ್ದಾರ್ ಸರೋವರ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂನಿಂದಲೂ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ನದಿ ಪಾತ್ರದಲ್ಲಿರುವ ಜನರು ಪ್ರವಾಹಕ್ಕೆ ಸಿಲುಕಿದ್ದು, ಹಲವರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿ ಬೇರೆಡೆ ಸ್ಥಳಾಂತರ ಮಾಡುತ್ತಿದೆ.
ಜಾಮ್ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಸೇತುವೆ ಮೇಲೆ ಚಲಿಸುತ್ತಿದ್ದ ಶಾಲಾ ಬಸ್ ನೀರಿನ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಸ್ಥಳದಲ್ಲಿದ್ದ ಜನರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಶಾಲಾ ಬಸ್ನಲ್ಲಿದ್ದ 9 ಮಕ್ಕಳು ಸೇರಿದಂತೆ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ.
ಆಂಧ್ರಪದೇಶದಲ್ಲಿ ವರುಣಾರ್ಭಟ
ಆಂಧ್ರಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋದಾವರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ 6 ಜಿಲ್ಲೆಗಳಲ್ಲಿರುವ 628 ಗ್ರಾಮಗಳು ಪ್ರವಾಹದಿಂದಾಗಿ ಮುಳುಗಡೆಯಾಗಿದ್ದು, ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಈವರೆಗೂ ರಾಜ್ಯದ 4 ಜಿಲ್ಲೆಗಳಲ್ಲಿರುವ 100 ಗ್ರಾಮಗಳಲ್ಲಿನ 62,337 ಜನರನ್ನು ರಕ್ಷಣೆ ಮಾಡಿ ನಿರಾಶ್ರಿತ ಕೇಂದ್ರಗಳಿಗೆ ಎಸ್ಡಿಆರ್ಎಫ್ ಶಿಫ್ಟ್ ಮಾಡುತ್ತಿದೆ. ತುಂಬಿ ಹರಿಯುತ್ತಿರುವ ನೀರಿನಲ್ಲೇ ಜನರು ಸಹ ತಮ್ಮ ವಸ್ತುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 220 ನಿರಾಶ್ರಿತ ಕೇಂದ್ರಗಳನ್ನು ಮಾಡಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಜನರ ರಕ್ಷಣೆ ಮಾಡಲಾಗುತ್ತಿದೆ. ಹಲವರು ಮಹಾಮಳೆಯಿಂದಾಗಿ ತಮ್ಮವರನ್ನು ಕಳೆದುಕೊಂಡು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ.
ತೆಲಂಗಾಣದಲ್ಲಿ ನಿಲ್ಲದ ಮೇಘರಾಜನ ನರ್ತನ
ತೆಲಂಗಾಣದಲ್ಲೂ ಮಹಾಮಳೆಯಾಗುತ್ತಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿದೆ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ತಂಡ ಬೀಡುಬಿಟ್ಟಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ನಿರ್ಮಲ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯರು ಕಾಪಾಡಿದ್ದಾರೆ. ಪ್ರವಾಹದ ಸ್ಥಳದಿಂದ ಕರೆದುಕೊಂಡು ಬರಬೇಕಾದರೆ ಪ್ರವಾಹದ ಅಲೆಗೆ ಮಕ್ಕಳು ನೀರಿನ ಒಳಗೆ ಬಿದ್ದಿದ್ದಾರೆ. ಕೂಡಲೇ ಸುತ್ತಮುತ್ತಲಿದ್ದ ಜನರು ಇಬ್ಬರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈ ಹಾಗೂ ಒಡಿಶಾದಲ್ಲೂ ಎಡೆಬಿಡದೆ ಮಳೆಯಾಗುತ್ತಿದ್ದು, ಜನರು ಮನೆಗಳಿಂದ ಹೊರಗೆ ಬರಲಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ.