ಹಿತ್ತಲು ಗಿಡ ಮದ್ದಲ್ಲ ಎಂಬ ಮಾತುಂಟು. ನಮಗೆ ತೀರಾ ಆಪ್ತವಾದ ಅಥವಾ ಸದಾ ಕೈಗೆಟುಕುವ ವಸ್ತುಗಳ ಬಗ್ಗೆ ನಮಗೆ ಆದರ ಕಡಿಮೆ ಅನ್ನುವುದು ಸುಳ್ಳೇನಲ್ಲ. ಉದಾ, ಒಣದ್ರಾಕ್ಷಿ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇರುವಂಥದ್ದು. ಆದರೆ ಅದರ ಔಷಧೀಯ ಗುಣಗಳ ಬಗ್ಗೆ ನಮಗೆಷ್ಟು ಅರಿವಿದೆ? ಅದರಲ್ಲಿರುವ ಸತ್ವಗಳೇನು ಎಂಬುದನ್ನು ನಾವೆಷ್ಟು ತಿಳಿದುಕೊಂಡಿದ್ದೇವೆ? ಒಣದ್ರಾಕ್ಷಿಯ ನೀರನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ (benefits of raisin water) ಆರೋಗ್ಯಕ್ಕೆ ಆಗುವ ಲಾಭಗಳು ತಿಳಿದಿವೆಯೇ?
ದೇಹಕ್ಕೆ ಅಗತ್ಯವಾಗಿ ಬೇಕಾಗುವ ಜೀವಸತ್ವಗಳು, ನಾರು, ಖನಿಜಗಳ ದಾಸ್ತಾನು ಒಣದ್ರಾಕ್ಷಿಯಲ್ಲಿದೆ. ರಾತ್ರಿ ಸ್ವಚ್ಛವಾದ ನೀರಿಗೆ ಒಣದ್ರಾಕ್ಷಿಯನ್ನು ಹಾಕಿಟ್ಟು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಆ ನೀರನ್ನೂ ಕುಡಿದು, ನೆನೆದು ಉಬ್ಬಿದ ದ್ರಾಕ್ಷಿಯನ್ನೂ ತಿನ್ನಬೇಕು. ಇದರಿಂದ ಒಣದ್ರಾಕ್ಷಿಯಲ್ಲಿರುವ (benefits of raisin water) ಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ.
ಡಿಟಾಕ್ಸ್ ಪೇಯ
ದೇಹವನ್ನು ಡಿಟಾಕ್ಸ್ ಮಾಡುವುದಕ್ಕೆ ಏನೇನೋ ಒದ್ದಾಡುವ ಬದಲು ಇದು ಸರಳ ಉಪಾಯ. ಅನಗತ್ಯ ವಸ್ತುಗಳನ್ನೆಲ್ಲಾ ದೇಹದಿಂದ ಹೊರಹಾಕುವುದಕ್ಕೆ ನಮ್ಮ ಯಕೃತ್ತು ಶ್ರಮಿಸುತ್ತಲೇ ಇರಬೇಕು. ಇಂಥ ಅಂಗಕ್ಕೆ ಸರಿಯಾದ ಪ್ರಚೋದನೆ ನೀಡುವುದಕ್ಕೆ ಒಣದ್ರಾಕ್ಷಿ ನೀರಿನಿಂದ ಸಾಧ್ಯವಿದೆ. ಇಡೀ ದಿನಕ್ಕೆ ಯಕೃತ್ತಿಗೆ ಬೇಕಾದಷ್ಟು ಶಕ್ತಿಯನ್ನು ನೀಡುವುದಲ್ಲದೆ, ಒಣದ್ರಾಕ್ಷಿಯಲ್ಲಿರುವ ನಾರಿನಂಶಗಳು ಹೆಚ್ಚಿನ ಪಿತ್ತ ರಸ ಉತ್ಪತ್ತಿ ಮಾಡುವುದಕ್ಕೆ ಪಿತ್ತಜನಕಾಂಗಕ್ಕೆ ಪ್ರಚೋದನೆ ನೀಡುತ್ತವೆ
ನಾರು
ನಮ್ಮ ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿಡುವಂಥ ನಾರು, ಅದರಲ್ಲೂ ಕರಗದೇ ಇರುವಂಥ ನಾರು ಒಣದ್ರಾಕ್ಷಿಯಲ್ಲಿ ಹೇರಳವಾಗಿದೆ. ಜೊತೆಗೆ, ಟಾರ್ಟಾರಿಕ್ ಆಮ್ಲ ಮತ್ತು ಟ್ಯಾನಿನ್‌ಗಳಂಥ ಫ್ಲವನಾಯ್ಡ್‌ಗಳು ವಿರೇಚಕಗಳಂತೆ ಕೆಲಸ ಮಾಡುತ್ತವೆ. ಹಾಗಾಗಿ ಮಲಬದ್ಧತೆಯ ನಿವಾರಣೆಗೆ ಅತ್ತ್ಯುತ್ತಮವಾದ ಮನೆಮದ್ದು ಒಣದ್ರಾಕ್ಷಿ ಮತ್ತು ಅದರ ನೀರು.
ಆಸಿಡಿಟಿ ಶಮನ
ರಕ್ತದಲ್ಲಿ ಆಮ್ಲೀಯ ಅಂಶ ಹೆಚ್ಚಾದಾಗ ಆಸಿಡೋಸಿಸ್ ಎಂಬ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆಯಲ್ಲಿರುವ ಆಮ್ಲಗಳನ್ನು ಕಡಿಮೆ ಮಾಡುವುದು ಅಂದರೆ ಆಸಿಡಿಟಿ ಕಡಿಮೆ ಮಾಡುವ ಮೂಲಕ ಈ ಸಮಸ್ಯೆಗೆ ಉಪಶಮನ ಕಾಣಬಹುದು. ಕಪ್ಪು ದ್ರಾಕ್ಷಿಯಲ್ಲಿ ನೈಸರ್ಗಿಕವಾದ ಆಂಟಾಸಿಡ್ ಅಂಶವಿದೆ. ಜೊತೆಗೆ, ಪೊಟಾಶಿಯಂ ಮತ್ತು ಮೆಗ್ನೀಶಿಯಂನಂಥ ಖನಿಜಗಳು ಹೊಟ್ಟೆಯಲ್ಲಿರುವ ಆಮ್ಲರಸದ ತೀವ್ರತೆಯನ್ನು ಶಮನ ಮಾಡುವುದಕ್ಕೆ ನೆರವಾಗುತ್ತವೆ.
ಕೊಲೆಸ್ಟ್ರಾಲ್ ಕಡಿತ
ಜೀರ್ಣಾಂಗಗಳ ಕ್ಷಮತೆ ಹೆಚ್ಚಿ, ಹಳೆಯ ಕಸವೆಲ್ಲಾ ದೇಹದಲ್ಲಿ ಉಳಿಯದೆ ಶರೀರ ಡಿಟಾಕ್ಸ್ ಆಗುತ್ತಿದ್ದಂತೆ ಕೊಲೆಸ್ಟ್ರಾಲ್ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಜೊತೆಗೆ ಟ್ರೈಗ್ಲಿಸರೈಡ್ ದಾಸ್ತಾನಿಗೂ ಕತ್ತರಿ ಹಾಕಬಹುದು.
ಕಬ್ಬಿಣದ ಕೊರತೆ ಕಡಿಮೆ
ತಾಮ್ರ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಒಣದ್ರಾಕ್ಷಿಯಲ್ಲಿ ಅಪಾರವಾಗಿದೆ. ದೇಹದಲ್ಲಿ ಹೊಸ ರಕ್ತಕಣಗಳು ಸೃಷ್ಟಿಯಾಗಬೇಕಾದರೆ ಕಬ್ಬಿಣ ಮತ್ತು ಬಿ ಕಾಂಪ್ಲೆಕ್ಸ್ ಎರಡೂ ಬೇಕು ಹಾಗೂ ಇವೆರಡೂ ಒಣದ್ರಾಕ್ಷಿಯಲ್ಲಿವೆ. ಜೊತೆಗೆ, ತಾಮ್ರದ ಗುಣಗಳು ಕಬ್ಬಿಣವನ್ನು ಹೀರಿಕೊಳ್ಳಲು ನೆರವು ನೀಡುತ್ತವೆ
ರಕ್ತದೊತ್ತಡ ನಿಯಂತ್ರಣ
ಇದಲ್ಲಿರುವ ಪೊಟಾಶಿಯಂ ಅಂಶವು ರಕ್ತದ ಏರೊತ್ತಡವನ್ನು ತಹಬಂದಿಗೆ ತರುವುದರಲ್ಲಿ ಅಗತ್ಯವಾದ ಅಂಶ. ಜೊತೆಗೆ, ಇದರಲ್ಲಿರುವ ನಾರು ಮತ್ತು ಉತ್ಕರ್ಷಣ ನಿರೋಧಕಗಳು ರಕ್ತನಾಳಗಳು ಸಂಕುಚಿತಗೊಳ್ಳದಂತೆ ತಡೆದು, ರಕ್ತದ ಒತ್ತಡ ನಿವಾರಣೆಗೆ ನೆರವಾಗುತ್ತವೆ.
ದೇಹಕ್ಕೆ ಶಕ್ತಿ
ಗ್ಲುಕೋಸ್ ಮತ್ತು ಫ್ರಕ್ಟೋಸ್- ಈ ಎರಡೂ ನೈಸರ್ಗಿಕವಾದ ಸಕ್ಕರೆಯಂಶಗಳು ಒಣದ್ರಾಕ್ಷಿಯಲ್ಲಿವೆ. ಇದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡಿ, ದಿನವಿಡೀ ಆಯಾಸ, ಸುಸ್ತು ಕಾಡದಂತೆ ನೆರವಾಗುತ್ತವೆ. ಜೊತೆಗೆ ಕಳ್ಳ-ಸುಳ್ಳು ಹಸಿವೆಗಳನ್ನೂ ಓಡಿಸುತ್ತವೆ.
ಈ ಸುದ್ದಿಯನ್ನೂ ಓದಿ: Health Tips: ಆರೋಗ್ಯ ಬೇಕೆ? ಹಾಗಿದ್ದರೆ ತಡಸಂಜೆಯ ಹೊಟ್ಟೆ ತುಂಬಿಸುವ ಸ್ನ್ಯಾಕ್‌ಗೆ ಕಡಿವಾಣ ಹಾಕಿ!
ಹಲ್ಲುಗಳ ಆರೋಗ್ಯ
ಸಿಹಿದ್ರಾಕ್ಷಿಯನ್ನು ದಿನಾ ತಿನ್ನುತ್ತಿದ್ದರೆ ಹಲ್ಲುಗಳು ಗೋ…ವಿಂದ ಎಂದು ಯೋಚಿಸಿದರೆ- ತಪ್ಪು! ಇದರ ಫೈಟೊಕೆಮಿಕಲ್ ಮತ್ತು ಒಲೆನೊಲಿಕ್ ಆಮ್ಲಗಳಿಂದ ಹಲ್ಲುಗಳ ಮೇಲಿನ ರಕ್ಷಾಕವಚ ಇನ್ನೂ ಭದ್ರವಾಗುತ್ತದೆ. ರುಚಿಯಾದ ತಿನಿಸಿನಲ್ಲಿ ಇಷ್ಟೊಂದು ಅನುಕೂಲಗಳಿದ್ದರೆ ಬೇಡ ಎನ್ನುವವರುಂಟೇ?